May 19, 2024

Bhavana Tv

Its Your Channel

ಕರ್ನಾಟಕದಿಂದ ತಿರುಮಲದಲ್ಲಿ 200 ಕೋಟಿ ವೆಚ್ಚದ ಅತಿಥಿ ಗೃಹ ನಿರ್ಮಾಣ .

ಬೆಂಗಳೂರು, : ಆಂಧ್ರಪ್ರದೇಶದ ತಿರುಮಲದಲ್ಲಿ ಸುಮಾರು 200 ಕೋಟಿ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.

ಸೋಮವಾರದ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿರುಮಲ ಗೆಸ್ಟ್ ಹೌಸ್ ನಿರ್ಮಾಣ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, ಈ ಕುರಿತು ಕಂದಾಯ ಇಲಾಖೆ ಅಧಿಕೃತ ಪ್ರಕಟಣೆ ನೀಡಿದೆ. ಕಳೆದ ವರ್ಷದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಿರುಮಲದಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ 26 ಕೋಟಿ ಅನುಮೋದನೆ ನೀಡಲಾಗಿತ್ತು. ಆದ್ರೀಗ, ಬಿಜೆಪಿ ಸರ್ಕಾರ 200 ಕೋಟಿ ವೆಚ್ಚದಲ್ಲಿ ಯಾತ್ರಿಕರಿಗೆ ಗೆಸ್ಟ್ ಹೌಸ್ ನಿರ್ಮಿಸುತ್ತಿದೆ.

ತಿರುಮಲದಲ್ಲಿ ಕರ್ನಾಟಕ ರಾಜ್ಯ ಛತ್ರ ಸೇರಿದ 7.05 ಎಕರೆ (322,545 ಚದರ ಅಡಿ) ಜಾಗದಲ್ಲಿ ಸಮಗ್ರ ಅಭಿವೃದ್ದಿ ಕಾರ್ಯಗಳನ್ನು ನೆರವೇರಿಸಲು ಸಚಿವ ಸಂಪುಟ ಸಮ್ಮತಿಸಿದೆ. ಒಟ್ಟು 1005 ಯಾತ್ರಿಕರಿಗೆ ಅನುಕೂಲವಾಗುವಂತೆ ಈ ಅತಿಥಿ ಗೃಹ ನಿರ್ಮಾಣವಾಗುತ್ತಿದೆ.

ಇದರಲ್ಲಿ ಕಲ್ಯಾಣ ಮಂಟಪ, ಡಾರ್ಮೆಂಟ್ರಿ, ಸಿಬ್ಬಂದಿ ಕೊಠಡಿ ಮತ್ತು ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. 140 ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 12 ಡಾರ್ಮೆಂಟ್ರಿಗಳು, 605 ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 305 ಕೊಠಡಿಗಳು, ಗಣ್ಯರಿಗೆ ವಿಶೇಷವಾಗಿ 24 ಸೂಟ್‌ ಕೊಠಡಿಗಳು ಮತ್ತು 4 ಡಬಲ್ ಸೂಟ್ ಕೊಠಡಿಗಳು, 1 ಕಲ್ಯಾಣ ಮಂಟಪ, ಕಾರು, ಬಸ್ಸುಗಳಿಗೆ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ, ಕಲ್ಯಾಣಿ ಜೀರ್ಣೋದ್ಧಾರ, ಹೊಸ ರಸ್ತೆಗಳ ನಿರ್ಮಾಣ, ಲ್ಯಾಂಡ್ ಸ್ಕೆಪಿಂಗ್, ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆಯೂ ತಿರುಮಲ ಅತಿಥಿ ಗೃಹ ನಿರ್ಮಾಣ ಯೋಜನೆ ಅನುಮೋದನೆ ನೀಡಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ.

source: oneindia

error: