May 15, 2024

Bhavana Tv

Its Your Channel

ಪತ್ರಕರ್ತರ ಅಭಿಮಾನಿ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆ

ಡಿಜಿಟಲ್ ಹಾಗೂ ಸುದ್ದಿವಾಹಿನಿಗಳ ಭರಾಟೆಯ ನಡುವೆ ಪತ್ರಿಕೆಗಳು ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ: ಸುರೇಂದ್ರ ಶೆಟ್ಟಿ

ಕಾರ್ಕಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತಿನ ಕೊಂಡಿಯಾಗಿ ಮಾಧ್ಯಮಗಳ ಪಾತ್ರ ಬಹುಮುಖ್ಯ. ಸುದ್ದಿಗಳನ್ನು ಸಮಾಜಕ್ಕೆ ನೀಡುವ ಭರದಲ್ಲಿ ಪ್ರಮುಖವಾಗಿ ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಗೊಂದಲ ಹಾಗೂ ಅಸ್ಪಷ್ಟ ಮಾಹಿತಿ ನೀಡಿ ಸಮಾಜದ ದಿಕ್ಕುತಪ್ಪಿಸುವ ಸಾಧ್ಯತೆಗಳು ನಡುವೆ ಪತ್ರಿಕಾ ಮಾಧ್ಯಮಗಳು ಇಂದಿಗೂ ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ಕಾರ್ಕಳ ಶಿವತಿಕೆರೆ ಉಮಾಮಹೇಶ್ವರ ದೇವಳದ ಆಡಳಿತ ಮೊಕ್ತೇಸರ ಹಾಗೂ ಸಹನಾ ಗ್ರೂಪ್ ನ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಕಾರ್ಕಳ ಪತ್ರಿಕಾ ಅಭಿಮಾನಿ ಬಳಗದ ವತಿಯಿಂದ ಕಾರ್ಕಳ ಪ್ರಕಾಶ್ ಹೊಟೇಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ ವಿ ಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಮಾತನಾಡಿ,ಪತ್ರಕರ್ತರು ಸಮಾಜವನ್ನು ಕೆರಳಿಸುವ ಕೆಲಸ ಮಾಡದೇ ಎಚ್ಚರಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಬದ್ದತೆ ತೋರಬೇಕು.ಪತ್ರಕರ್ತರು ರಾಜಕೀಯ ಪಕ್ಷಗಳ ಮುಖವಾಣಿಯಾಗದೇ ಸಮಾಜದ ಮುಖವಾಣಿಯಾಗಬೇಕು. ಪತ್ರಕರ್ತ ಸ್ವತಂತ್ರನಾದರೆ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾದ ಡಿ.ಅರ್ ರಾಜು ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಾಧ್ಯಮರಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭ, ಆದರೆ ಇಂದಿನ ದಿನಗಳಲ್ಲಿ ಸಮಾಜಕ್ಕೆ ವೇಗವಾಗಿ ಸುದ್ದಿ ಮುಟ್ಟಿಸುವ ಧಾವಂತದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿವೆ , ಆದರೆ ಪತ್ರಿಕೆಗಳು ಎಂದಿಗೂ ಸಾರ್ವಕಾಲಿಕ ದಾಖಲೆಯಾಗಿ ಉಳಿಯುತ್ತವೆ ಎಂದು ಮುದ್ರಣ ಮಾಧ್ಯಮದ ಬದ್ಧತೆಯ ಕುರಿತು ಶ್ಲಾಘಿಸಿದರು.

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರ ಬದುಕು ಶೋಚನೀಯವಾಗಿದೆ.ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರು ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡುತ್ತಾರೆ ಎಂದರು. ಅಲ್ಲದೇ ಪತ್ರಕರ್ತರನ್ನು ಗುರುತಿಸಿ ಪ್ರತಿಕಾ ಅಭಿಮಾನಿ ಬಳಗವು ಗೌರವಿಸಿರುವುದು ಪತ್ರಕರ್ತರ ಸಂಘಕ್ಕೆ ಸಂದ ಗೌರವ ಎಂದರು.

ಪತ್ರಕರ್ತ ಅಭಿಮಾನಿ ಬಳಗದ ರೂವಾರಿ ಕಾರ್ಯಕ್ರಮ ಆಯೋಜಕರಾದ ಪುರಸಭಾ ಸದಸ್ಯ ಶುಭದ್ ರಾವ್ ಮಾತನಾಡಿ, ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂದರು.
ಈ ಸಂದರ್ಭದಲ್ಲಿ ಅನಾರೋಗ್ಯಪೀಡಿತರಾದ ಸುನಿಲ್ ಕೋಟ್ಯಾನ್ ಅವರಿಗೆ ವೈದ್ಯಕೀಯ ಧನಸಹಾಯ ವಿತರಿಸಲಾಯಿತು, ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು

ಸುರೇಶ್ ದೇವಾಡಿಗ,ಪ್ರಶಾಂತ್ ಶೆಟ್ಟಿ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶುಭದ ರಾವ್ ಸ್ವಾಗತಿಸಿ, ಕಾರ್ಕಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೃಷ್ಣ ಎಮ್ ನಾಯ್ಕ್ ವಂದಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: