May 15, 2024

Bhavana Tv

Its Your Channel

ಕಾರ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಕೋಲಾಹಲ! ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ತಾರತಮ್ಯ : ಪುರಸಭೆಯ ನಿಲುವು ಖಂಡಿಸಿ ಕಾಂಗ್ರೆಸ್ ಸದಸ್ಯರ ಧರಣಿ

ಕಾರ್ಕಳ:ವಿಪಕ್ಷ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರು ನೀಡಿದ ಅರ್ಜಿಗಳನ್ನು ಫಲಾನುಭವಿಗಳ ಪಟ್ಟಿಯನ್ನು ಸೇರಿಸದೇ ಕಡಗಣಿಸಲಾಗಿದೆ ಎಂದು ಆರೋಪಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಅಡಳಿತ ಪಕ್ಷದ ನಿಲುವು ಖಂಡಿಸಿ ಸಾಮಾನ್ಯ ಸಭೆಯಲ್ಲಿ ಧರಣಿ ನಡೆಸಿದರು.
ಕಾರ್ಕಳ ಪುರಸಭಾಧ್ಯಕ್ಷೆ ಸುಮಾ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಾಸಿಕ ಸಾಮಾನ್ಯಸಭೆಯ ಆರಂಭದಲ್ಲೇ ವಿಪಕ್ಷ ಸದಸ್ಯ ಶುಭದ ರಾವ್ ಈ ವಿಷಯ ಪ್ರಸ್ತಾಪಿಸಿ,ಪರಿಶಿಷ್ಟ ಜಾತಿ ಸಮುದಾಯದವರ ಹಳೆಮನೆ ದುರಸ್ತಿಗಾಗಿ ಬಂದ ಅರ್ಜಿಗಳ ಪೈಕಿ 12 ಅರ್ಜಿಗಳನ್ನು ಪರಿಗಣಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಬಳಿಕ ಪುರಸಭಾ ಸದಸ್ಯರ ಗಮನಕ್ಕೆ ತಾರದೇ ಏಕಾಎಕಿ ಒಬ್ಬರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದು ಖಂಡನೀಯ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಕ್ಷೇಪಿಸಿದಾಗ ಇದಕ್ಕೆ ಉಳಿದ ಸದಸ್ಯರಾದ ಅಶ್ಪಕ್ ಅಹಮ್ಮದ್, ಪ್ರತಿಮಾ ರಾಣೆ,ನಳಿನಿ ಆಚಾರ್ಯ ಮುಂತಾದವರು ದನಿಗೂಡಿಸಿದರು. ಇದಕ್ಕೆ ಸಮುದಾಯ ಸಮನ್ವಯಾಧಿಕಾರಿ ಮಲ್ಲಿಕಾ ಉತ್ತರಿಸಿ, ಸಮರ್ಪಕ ದಾಖಲೆ ನೀಡದ ಹಿನ್ನಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದರು. ಇದಕ್ಕೆ ಕೆರಳಿದ ವಿಪಕ್ಷ ಸದಸ್ಯರು,ದಾಖಲೆಗಳು ಇಲ್ಲ ಎನ್ನುವ ಕಾರಣಕ್ಕೆ ಅರ್ಜಿಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಅಲ್ಲದೇ ಇಂತಹ ವಿಚಾರಗಳನ್ನು ಸಭೆಯ ಗಮನಕ್ಕೆ ತರಬೇಕು ಎಂದು ಆಗ್ರಹಿಸಿ ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.
ಈ ಕುರಿತು ಅಧ್ಯಕ್ಷೆ ಸುಮಾ ಕೇಶವ್ ಮಾತನಾಡಿ, ಸಾಮಾನ್ಯ ಸಭೆಯ ಅಜೆಂಡಾ ಪ್ರತಿಯಲ್ಲಿ 18 ಅರ್ಜಿಗಳು ಬಂದಿದ್ದು ಇದನ್ನೇ ಸಾಮಾನ್ಯ ಸಭೆಯ ಮುಂದೆ ಮುಂಡಿಸಲಾಗಿದೆ. ಆದರೆ ನಮ್ಮ ಗಮನಕ್ಕೆ ಬಾರದೇ ಹೆಚ್ಚುವರಿಯಾಗಿ ಇನ್ನೊಂದು ಹೆಚ್ಚುವರಿ ಅರ್ಜಿ ಸಲ್ಲಿಕೆಯಾಗಿದೆ ಹಾಗಾಗಿ ಈ ಅರ್ಜಿಯನ್ನು ಅಜೆಂಡಾ ಗೆ ಇಡಲು ಸಾಧ್ಯವಾಗಿಲ್ಲ ಎಂದರು. ಅಲ್ಲದೇ ಈ ಅರ್ಜಿಯ ಜತೆಗೆ ಪೂರಕ ದಾಖಲೆಗಳನ್ನು ನೀಡದ ಹಿನ್ನಲೆಯಲ್ಲಿ ಅರ್ಜಿಯನ್ನು ಪರಿಗಣಿಸಿಲ್ಲ ಎಂದಾಗ,ವಿಪಕ್ಷ ಸದಸ್ಯರು ದಾಖಲೆ ಸರಿಯಿಲ್ಲದ ಅರ್ಜಿದಾರರಿಗೆ
ಹಿಂಬರಹ ನೀಡಬೇಕು ಅವರು ಪೂರಕ ದಾಖಲೆ ನೀಡಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಯೋಗಿಶ್ ದೇವಾಡಿಗ ಮಾತನಾಡಿ, ಈ ವಿಚಾರದಲ್ಲಿ ಅಧಿಕಾರಿಗಳು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಕೊನೆಗೂ ಫಲಾನುಭವಿ ಪಟ್ಟಿಯಿಂದ ಕೈಬಿಟ್ಟ ಅರ್ಜಿಯನ್ನು ಮರು ಸೇರ್ಪಡೆಗೊಳಿಸುವಂತೆ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷದ ಸಹಮತ ವ್ಯಕ್ತವಾಯಿತು.ಬಳಿಕ ಸದಸ್ಯರು ಧರಣಿ ಹಿಂಪಡೆದರು.
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಆರೋಗ್ಯ ನಿರೀಕ್ಷಕಿ ಲೈಲಾ ಉತ್ತರಿಸಿ, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಶಿವಮೊಗ್ಗದ ಏಜೆನ್ಸಿಗೆ ವಹಿಸಲಾಗಿದ್ದು , ಆಗಸ್ಟ್ ತಿಂಗಳಾAತ್ಯಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಕಾರ್ಕಳ ಉತ್ಸವ ಬಿಲ್ ಪಾವತಿ ವಿಚಾರದಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ ಸದಸ್ಯ ಸೋಮನಾಥ ನಾಯ್ಕ್, ಕಾರ್ಕಳ ಉತ್ಸವದ ಕಾಮಗಾರಿ ಬಿಲ್ಲು ವಿಚಾರದಲ್ಲಿ ತನಿಖೆಯಾದ ಬಳಿಕವೇ ಪಾವತಿ ಮಾಡಬೇಕೆಂದು ಆಗ್ರಹಿಸಿದರೂ ಈ ಕುರಿತು ಕ್ರಮಕೈಗೊಂಡಿಲ್ಲ ಎಂದರು.ಕಾರ್ಕಳ ಉತ್ಸವದ ಹೆಸರಿನಲ್ಲಿ ಭಾರೀ ಅವ್ಯವಹಾರ ನಡೆದಿದೆ. ಎಲ್ಲಾ ಬಿಲ್ ಗಳ ಕುರಿತು ತನಿಖೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ , ಮ್ಯಾನೇಜರ್ ಸೂರ್ಯಕಾಂತ್ ಖಾರ್ವಿ ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: