May 3, 2024

Bhavana Tv

Its Your Channel

ಸನಾತನ ಧರ್ಮ ಸಂಸ್ಕೃತಿ ಜಗತ್ತನ್ನು ಕಾಪಾಡಿದೆ: ಸುಬ್ರಹ್ಮಣ್ಯ ಶ್ರೀ

ಕಾರ್ಕಳ: ಸರ್ವೇ ಜನಃ ಸುಖಿನೋ ಭವಂತು ಎನ್ನುವ ಉದಾತ್ತ ಚಿಂತನೆಯುಳ್ಳ ಧರ್ಮ ಎಂದರೆ ನಮ್ಮ ಸನಾತನ ಧರ್ಮ.ಋಷಿಮುನಿಗಳ ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿ ಸನಾತನ ಧರ್ಮ ಜಗತ್ತಿನಲ್ಲಿ ಸ್ಥಿರವಾಗಿ ನಿಂತಿದೆ. ಜಗತ್ತಿನ ಪ್ರತಿಯೊಂದು ಜೀವಿಯೂ ಸುಖವಾಗಿರಲಿ ಎನ್ನುವ ಸದಾಶಯ ಹೊಂದಿರುವ ಸನಾತನ ಧರ್ಮದ ಆಚರಣೆ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಧರ್ಮ ನೆಲೆಯೂರಲು ಸಾಧ್ಯ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳು ಹೇಳಿದರು.

ಅವರು ಕಾರ್ಕಳ ಮಾರಿಯಮ್ಮ ದೇವಿಯ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಧಾರ್ಮಿಕ ಶ್ರದ್ಧಾಕೇಂದ್ರಗಳು ಪುನರುತ್ಥಾನಗೊಂಡಾಗ ಊರಿಗೆ ಶ್ರೇಯಸ್ಸಾಗುತ್ತದೆ.ಭಕ್ತರು ಮನಃಪೂರ್ವಕವಾಗಿ ದೇವರನ್ನು ಪ್ರಾರ್ಥಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು
ಬಲಾಢ್ಯರ ಬಲಹೀನರನ್ನು ತುಳಿದಾಗ ರಕ್ಷಣೆಗೆ ದೇವರು ಅವತಾರ ತಾಳುತ್ತಾನೆ. ಬದುಕಿನಲ್ಲಿ ಭಗವಂತನ ಸ್ಮರಣೆ ಇಲ್ಲದಿದ್ದರೆ ಸಮಾಜ ಇಷ್ಟೊಂದು ಗಟ್ಟಿಯಾಗಿ ಇರಲು ಸಾಧ್ಯವಿರುತ್ತಿರಲಿಲ್ಲ.ಜೀವನದಲ್ಲಿ ಧರ್ಮವನ್ನು ಪಾಲಿಸದಿದ್ದಲ್ಲಿ ಧರ್ಮ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ಮಾನವ ಸಂಕಲ್ಪದ ಜತೆಗೆ ದೈವಶಕ್ತಿಯ ಬಲವೂ ಅತ್ಯವಶ್ಯಕ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕಾರ್ಕಳ ಮಾರಿಯಮ್ಮ ದೇವಿಯ ದೇವಾಲಯ ಜೀರ್ಣೋದ್ಧಾರ ಕಾರ್ಯ ದೇವಿಯ ಪವಾಡದಿಂದ ಕೇವಲ 9 ತಿಂಗಳಲ್ಲಿ ಮುಗಿದಿದೆ.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷನಾದ ನಾನು ಕೇವಲ ನೆಪಮಾತ್ರ ಇದು ನನ್ನ ಒಬ್ಬನಿಂದ ಆದ ಕೆಲಸವಲ್ಲ ದೇವಿಯ ಇಚ್ಚೆಯಂತೆ ಎಲ್ಲಾ ಭಕ್ತರ ಸಹಕಾರದಿಂದ ಈ ಪುಣ್ಯಕಾರ್ಯ ನಡೆದಿದೆ. ಬ್ರಹ್ಮಕಲಶೋತ್ಸವ ಪುಣ್ಯಕಾರ್ಯದಲ್ಲಿ ಪ್ರತಿಯೊಬ್ಬರು ಭಕ್ತಿಯಿಂದ ತಮ್ಮನ್ನು ಅತ್ಯಂತ ಭಕ್ತಿಪೂರ್ವಕವಾಗಿ ತೊಡಗಿಸಿಕೊಂಡಿದ್ದಾರೆ.ದೇವಿಯ ಅನುಗ್ರಹದಿಂದ ಜೀರ್ಣೋದ್ಧಾರ ಕಾರ್ಯ ಯಾವುದೇ ವಿಘ್ನಗಳಿಲ್ಲದೇ ನೆರವೇರಿದೆ ಎಂದರು. ಮುಂದಿನ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಪ್ರತೀ ತಿಂಗಳು ಚಂಡಿಕಾ ಹೋಮ ಹಾಗೂ ಪ್ರತೀ ಮಂಗಳವಾರದ ಪೂಜೆಯಲ್ಲಿ ಅನ್ನಸಂತರ್ಪಣೆ ನಡೆಯಬೇಕು ಎನ್ನುವುದು ಭಕ್ತರ ಈ ನಿಟ್ಟಿನಲ್ಲಿ ಮುಂದೆ ಭಕ್ತಾದಿಗಳ ಸಹಕಾರದಿಂದ ಆಡಳಿತ ಮಂಡಳಿಯವರು ಇದನ್ನು ನಡೆಸಿಕೊಂಡು ಬರುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಬ್ರಹ್ಮಕಲಶೋತ್ಸವ ಎಂದರೆ ಅದಕ್ಕೆ ಒಂದಷ್ಟು ಮರಗಳು ಬೇಕೇಬೇಕು ಅದಕ್ಕಾಗಿ ಮರಗಳನ್ನು ಕಡಿಯುವುದು ಅನಿವಾರ್ಯ. ಆದರೆ ಕಡಿದ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ಬೆಳೆಸುವ ಪರಿಪಾಠ ಎಲ್ಲಿಯೂ ಇಲ್ಲ.ಆದರೆ ಮಾರಿಯಮ್ಮ ದೇವಿಯ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಬಳಕೆಯಾದ ಮರಗಳ ಬದಲಿಗೆ ಗಿಡ ಬೆಳೆಸಿ ಪರಿಸರ ರಕ್ಷಣೆ ನಿಟ್ಟಿನಲ್ಲಿ 5 ಎಕರೆ ಜಾಗವನ್ನು ನಿಗದಿ ಮಾಡಿ 500 ಗಿಡ ನೆಟ್ಟು 5 ವರ್ಷ ನಿರ್ವಹಣೆ ಮಾಡುವ ಸಂಕಲ್ಪ ಮಾಡಿದ್ದೇವೆ.ಕಾರ್ಕಳ ಮಾರಿಯಮ್ಮ ದೇವಸ್ಥಾನವು ಧಾರ್ಮಿಕ ಕ್ಷೇತ್ರದ ಜತೆಗೆ ದಾರ್ಶನಿಕ ಕ್ಷೇತ್ರವಾಗಿ ಮೂಡಿ ಬರಲಿದೆ ಎಂದರು.

ವೇ.ಮೂ ಪ್ರಸಾದ್ ತಂತ್ರಿ ಮಾತನಾಡಿ,ಸಾವಿರಾರು ಭಕ್ತರ ಅರ್ಪಣಾ ಮನೋಭಾವದಿಂದ ದೇವಿಯ ಇಚ್ಚೆಯಂತೆ ಸುಂದರ ಕ್ಷೇತ್ರ ನಿರ್ಮಾಣವಾಗಿದೆ, ಅರ್ಚಕರು ಪೂಜಾ ವಿಧಾನ, ಭಕ್ತರ ಪರಿಶುದ್ಧ ಭಕ್ತಿಯಿಂದ ದೇವಿಯ ಸಾನಿಧ್ಯ ಪ್ರಾಪ್ತಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣಮೂರ್ತಿ ಮಾಂಜ, ವೇ.ಮೂ ಪ್ರಸಾದ್ ತಂತ್ರಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ, ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ ಗೋಪಾಲಕೃಷ್ಣ ರಾವ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಜಯ ಶೆಟ್ಟಿ, ಗುತ್ತಿಗೆದಾರ ಸುಜಯ ಶೆಟ್ಟಿ, ಪುರುಷೋತ್ತಮ ಕಲ್ಕೂರ, ರಘುರಾಮ ಆಚಾರ್ಯ,ಉಚ್ಚಂಗಿ ದೇವಸ್ಥಾನದ ಅರ್ಚಕ ಹರೀಶ್ ರಾಣೆ, ನರಸಿಂಹ ಪೈ,ಜಗದೀಶ್ ಮಲ್ಯ, ಗಣೇಶ್ ಕಾಮತ್, ಭಾಸ್ಕರ ಕುಲಾಲ್, ಹರೀಶ್ ಅಮೀನ್, ರಘುನಂದನ್, ಗೌತಮ್ ಮುಂತಾದವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಹಾಗೂ ದೇಣಿಗೆ ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ನವೀನ್ ನಾಯಕ್ ಸ್ವಾಗತಿಸಿ, ನವೀನ್ ದೇವಾಡಿಗ ವಂದಿಸಿದರು. ಪ್ರಭಾಕರ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: