April 29, 2024

Bhavana Tv

Its Your Channel

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ, ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿ, ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣೆ

ಭಟ್ಕಳ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ತಾಲೂಕಿನ ಕೋಟಖಂಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿ, ಫಲಾನುಭವಿಗಳಿಗೆ ವಿವಿಧ ಸೌಲಭ್ಯವನ್ನು ವಿತರಿಸಿದರು.

ನಂತರ ಮಾತನಾಡಿದ ಅವರು ಸರಕಾರದ ಕೆಲಸಕ್ಕೆ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬಂದು ತೀವ್ರ ತೊಂದರೆಯಾಗುತ್ತಿರುವುದನ್ನು ಗಮನಿಸಿದ ನಮ್ಮ ಸರಕಾರ ಅಧಿಕಾರಿಗಳನ್ನೇ ಹಳ್ಳಿಗಳಿಗೆ ಕಳುಹಿಸಿ ಗ್ರಾಮೀಣ ಭಾಗದ ಜನರಿಗೆ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡುವ ಕ್ರಮ ಕೈಗೊಂಡಿದೆ. ಆ ದಿಶೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರ ಈ ಕಾರ್ಯಕ್ರಮ ಗ್ರಾಮೀಣ ಭಾಗದ ಜನತೆಗೆ ಸಂಜೀವಿನಿಯಾಗಿದೆ ಎಂದರು. ಕಂದಾಯ ಸೇರಿದಂತೆ ಎಲ್ಲಾ ಇಲಾಖಾ ಮುಖ್ಯಸ್ಥರೂ ಕೂಡಾ ಹಳ್ಳಿಗೆ ತೆರಳಿ ಜನರ ಅಹವಾಲನ್ನು ಸ್ವೀಕರಿಸಿ ಸಾಧ್ಯವಿದ್ದ ಪ್ರಕರಣವನ್ನು ಅಲ್ಲಿಯೇ ಬಗೆಹರಿಸುತ್ತಾರೆ, ಉಳಿದವುಗಳನ್ನು ಸಂಬAಧ ಪಟ್ಟ ಮೇಲಧಿಕಾರಿಗಳ ಒಪ್ಪಿಗೆ ಪಡೆದು ಶೀಘ್ರದಲ್ಲಿ ಪರಿಹರಿಸಲಾಗುತ್ತದೆ ಎಂದರು.
ಇಂದು ಕಂದಾಯ ಇಲಾಖೆಯ ಕೆಲಸಕ್ಕೆ ಮಧ್ಯವರ್ತಿಗಳ ಹಾವಳಿ ಇದೆ ಎನ್ನುವುದನ್ನು ಕೇಳಿದ್ದೇನೆ, ಅದನ್ನು ತಪ್ಪಿಸುವ ಕೆಲಸ ಮಾಡಬೇಕಿದ್ದು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ನೇರವಾಗಿ ಬಂದು ಅಧಿಕಾರಿಗಳನ್ನು ಭೇಟಿ ಮಾಡಬೇಕು. ಸರಕಾರ ಅಂತಹ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಅಧಿಕಾರಿಗಳನ್ನೇ ಹಳ್ಳಿಗೆ ಕಳುಹಿಸುವ ಕಾರ್ಯ ಮಾಡುತ್ತಿದೆ ಎಂದರು.
ತಹಸೀಲ್ದಾರ್ ಅಶೋಕ ಭಟ್ಟ ಮಾತನಾಡಿ ಜನರಿಗೆ ತ್ವರಿತವಾಗಿ ಕೆಲಸ ಮಾಡಿಕೊಡುವ ಉದ್ದೇಶದಿಂದ ಮತ್ತು ಗ್ರಾಮದ ಸಮಸ್ಯೆ ಆಲಿಸಲು ಅಧಿಕಾರಿಗಳು ಆಗಮಿಸಿದ್ದು, ಜನರು ಯಾವುದೇ ಯೋಜನೆ ಮತ್ತು ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ಹೇಳಿಕೊಳ್ಳಬಹುದು. ಕಂದಾಯ ಇಲಾಖೆ ಸೇರಿದಂತೆ ಸರಕಾರಿ ಕೆಲಸಕ್ಕೆ ಎಜೆಂಟರ ಹಾವಳಿ ಇರುವುದನ್ನು ಒಪ್ಪಿಕೊಂಡ ಅವರು ಸರಕಾರ ಎಜೆಂಟರ ಹಾವಳಿ ತಪ್ಪಿಸಲು ಭೂ ಪರಿವರ್ತನೆ ಸೇರಿದಂತೆ ಅನೇಕ ಯೋಜನೆಗಳನ್ನು ಆನಲೈನ್ ಮಾಡಿದೆ. ಅತಿ ಸುಲಭದಲ್ಲಿ ಇಂದು ಭೂ ಪರಿವರ್ತನೆಯಾಗುತ್ತಿದ್ದು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದವರ ಕಾಗದ ಪತ್ರಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಕೆಲಸ ಆಗುತ್ತಿದೆ ಎಂದರು. ಯಾವುದೇ ಕೆಲಸಕ್ಕೂ ಎಜೆಂಟರ ಮೂಲಕ ಬರದೇ ನೇರವಾಗಿ ಇಲಾಖೆಗೆ ಬಂದು ಅರ್ಜಿ ಸಲ್ಲಿಸಿ ಎಂದು ನಾಗರೀಕರಿಗೆ ಹೇಳಿದ ಅವರು ಕಳೆದ ಒಂದು ತಿಂಗಳಲ್ಲಿ ತಾಲೂಕಿನಲ್ಲಿ 103 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ ಮಂಜೂರಿ ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದು, ಈಗಾಗಲೇ ಹಲವು ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾರುಕೇರಿ ಗ್ರಾ.ಪಂ. ಅಧ್ಯಕ್ಷ ಮಾಸ್ತಿ ಗೊಂಡ, ಉಪಾಧ್ಯಕ್ಷೆ ನಾಗವೇಣಿ ಗೊಂಡ, ಸದಸ್ಯರಾದ ಎಂ.ಡಿ. ನಾಯ್ಕ, ಸುಧಾ ಹೆಗಡೆ, ನಾರಾಯಣ ಗೊಂಡ, ನಾಗಿಣಿ ಮೊಗೇರ, ಮೋಹಿನಿ ಗೊಂಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: