May 15, 2024

Bhavana Tv

Its Your Channel

ನಿರಂತರವಾಗಿ ನಾಲ್ಕೈದು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆ; ಭಟ್ಕಳದ ತಗ್ಗು ಪ್ರದೇಶ ಹಾಗೂ ನದಿಯ ತಟದಲ್ಲಿರುವ ಮನೆಗಳಿಗೆ ನುಗ್ಗಿದ ನೀರು

ಭಟ್ಕಳ: ನಿರಂತರವಾಗಿ ನಾಲ್ಕೈದು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಭಟ್ಕಳದ ತಗ್ಗು ಪ್ರದೇಶ ಹಾಗೂ ನದಿಯ ತಟದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಬಹುತೇಕ ಕಡೆಗಳಲ್ಲಿ ನೀರು ಸಂಪೂರ್ಣ ಆವರಿಸಿಕೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ಬೆಳಿಗ್ಗೆ ಅಂತ್ಯ ಗೊಂಡ 24 ಗಂಟೆಗಳಲ್ಲಿ 218 ಮಿ.ಮಿ. ಮಳೆ ಯಾಗಿದ್ದು ಇಲ್ಲಿಯ ತನಕ ಒಟ್ಟು 2002 ಮಿ.ಮಿ. ಮಳೆಯು ತಾಲೂಕಿನಲ್ಲಿ ಬಿದ್ದಿದೆ. ನಾಲ್ಕೈದು ದಿನದಿಂದ ಭಟ್ಕಳದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯು ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದು, ತಾಲ್ಲೂಕಿನ ಚೌಥನಿ ನದಿ ತುಂಬಿದ್ದು, ಸೇತುವೆ ಮುಳುಗಡೆಯಾಗಿದೆ. ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಗುರುವಾರ ಮತ್ತು ಶುಕ್ರವಾರ ದಂದು ತಾಲೂಕಿನಲ್ಲಿ ಅನೇಕ ಸಾರ್ವಜನಿಕ ಅಸ್ತಿ-ಪಾಸ್ತಿಗಳಿಗೆ ಹಾನಿಯಾಗಿದ್ದು ಬೀಸಿದ ಭಾರೀ ಗಾಳಿಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸರಿಪಡಿಸಲು ಮಳೆಯಲ್ಲಿಯೇ ಕೆಲಸ ಮಾಡುತ್ತಿರುವುದು ಕಂಡು ಬಂತು.
ಅನೇಕ ಗ್ರಾಮೀಣ ರಸ್ತೆ ಗಳು ಕಿತ್ತು ಹೋಗಿದ್ದು ಮಳೆಯ ನೀರು ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಮೇಲೆಯೇ ಹರಿಯುವುದರಿಂದ ರಸ್ತೆ ಹೊಂಡಗಳು ಬಿದ್ದು ಜನ, ವಾಹನ ಸಂಚಾರಕ್ಕೆ ತೀರಾ ತೊಂದರೆಯಾಗಿದೆ.
ಇನ್ನು ಗುರುವಾರದಂದು ರಾತ್ರಿಯಿಂದ ಮುಂಜಾನೆ ತನಕ ಸುರಿದ ಮಳೆಗೆ ಪಟ್ಟಣದಿಂದ ಪುರವರ್ಗಕ್ಕೆ ಹೋಗುವ ರಸ್ತೆಯಲ್ಲಿ ಸಂಪರ್ಕ ಕಡಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಮಾರುತಿ ನಗರ, ಮಣ್ಕುಳಿಯ ಭಾಗದ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಅಪಾರ ಮಳೆಗೆ ಸರ್ಪನಕಟ್ಟೆ ಚೆಕ್ ಪೋಸ್ಟ್ ಬಳಿಯ ಹುಲಿದುರ್ಗಿ ದೇವಸ್ಥಾನ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಗುಡ್ಡ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ನಂತರ ಐಆರ್ ಬಿ ಕಂಪನಿಯ ಸಿಬ್ಬಂದಿಗಳ ಕಾರ್ಯಾಚರಣೆಯ ಬಳಿಕ ಸಂಚಾರಕ್ಕೆ ಅನುಕೂಲವಾಗಿದೆ.
ಹಲವು ನದಿಗಳು, ಹಳ್ಳಗಳು ಭರ್ತಿಯಾಗಿದ್ದು, ಸುತ್ತಮುತ್ತಲಿನ ತಗ್ಗು ಪ್ರದೇಶಗಳು ಮತ್ತು ನದಿಯ ಸಮೀಪದ ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ರಾತ್ರಿಯಿಂದ ಬೆಳಗಿನ ಜಾವದವರೆಗೆ ಜಾಗರಣೆಯಲ್ಲಿಯೆ ಕಳೆದಿದ್ದಾರೆ.
ತಲಾಂದ ಮತ್ತು ಇತರೆ ಬಾಗದಲ್ಲಿ ಕೃಷಿ ಜಮೀನಿಗೆ ನೀರು ನುಗ್ಗಿದೆ. ಗದ್ದೆಗಳಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿದ್ದು, ರೈತರು ಚಿಂತಿತರಾಗಿದ್ದಾರೆ.
ಕೃಷಿ ಮಾಡಲು ನೀರಿಗಾಗಿ ರೈತರು ನದಿಗೆ ಸಣ್ಣ ಕಟ್ಟುಗಳನ್ನು ನಿರ್ಮಿಸಿಕೊಂಡಿದ್ದರು. ರಾತ್ರಿಯಿಂದ ಸುರಿದ ಭಾರಿ ಮಳೆಗೆ ಅವುಗಳು ಸಹ ಒಡೆದಿವೆ.
ತಾಲೂಕಿನ ಪ್ರಮುಖ ನದಿಗಳಾದ ಬೃಂದಾವನ ಗೋಪಿನಾಥ ನದಿ, ಚೌಥನಿ ನದಿ ಮೈತುಂಬಿ ಹರಿಯುತ್ತವೆ. ಈ ಚೌಥನಿ ಮತ್ತು ಮುಂಡಳ್ಳಿ,ಬೇAಗ್ರೆ1 ಮತ್ತು 2, ಮಾವಳ್ಳಿ 2, ಬೈಲೂರ,ಹೆಬಳೆ,ಕಾಯ್ಕಿಣಿ,ಮೂಡಭಟ್ಕಳ,ಮುಟ್ಟಳ್ಳಿ, ತಲಾನ,ಶಿರಾಲಿ1,2, ಮಾರುಕೇರಿ, ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಕುದುರೆ ಬೀರಪ್ಪ ದೇವಸ್ಥಾನ ಅರ್ಧ ಜಲಾವೃತ್ತಗೊಂಡಿದೆ ಚೌಥನಿ ಹೋಳೆ ಸಮೀಪದ ಮನೆಗಳು ನೀರಿನಿಂದಾವ್ರತಗೊAಡಿವೆ.
ಇನ್ನು ಸಂಶುದ್ದೀನ್ ಸರ್ಕಲನಲ್ಲಿ ರಾತ್ರಿ ಮಳೆ ನೀರು ಹರಿಯದೇ ಜಲಾವೃತಗೊಂಡಿದ್ದು ಬೆಳಿಗ್ಗೆ ಆಗುವುದರೊಳಗಾಗಿ ಮಳೆ ಕಡಿಮೆ ಆಗಿರುವುದರಿಂದ ನೀರು ಇಳಿ ಮುಖವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅಸಮರ್ಪಕವಾಗಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲೂ ಮಳೆ ಮುಂದುವರಿದಿದೆ. ಈಗಾಗಲೇ ಗದ್ದೆ ನಾಟಿ ಮಾಡಿದ ರೈತರು ಇದೇ ರೀತಿಯಾಗಿ ಮಳೆಯು ಮುಂದುವರಿದರೆ ತಾವು ನಾಟಿ ಮಾಡಿದ ಸಸಿಗಳೂ ಕೊಳೆತು ಹೋಗು ಸಾಧ್ಯತೆ ಇದೆ ಎನ್ನುವ ಚಿಂತೆಯಲ್ಲಿದ್ದಾರೆ.
ಮಳೆಯು ಕಳೆದ ಒಂದು ವಾರದಿಂದ ಒಂದೇ ಸವನೆ ಸುರಿಯುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಅನುಸರಿಸಿ ಜಿಲ್ಲಾಡಳಿತ ಶನಿವಾರವೂ ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಗುರುವಾರ ರಾತ್ರಿ ಬಿದ್ದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿದೆ.ಚೌಥನಿಯಲ್ಲಿ ರಾತ್ರಿ 3 ಗಂಟೆಯ ಸುಮಾರಿಗೆ ನೀರು ಉಕ್ಕಿ ಹರಿದಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಭೇಟಿ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ನೋಡಲ್ ಅಧಿಕಾರಿ ದೇವಿದಾಸ ಮೊಗೇರ ಸ್ಥಳದಲ್ಲಿಯೇ ಯವುದೇ ಅನಾಹುತವಾಗದಂತೆ ಜಾಗೃತೆ ವಹಿಸಿದ್ದಾರೆ. ತಾಲೂಕಿನಲ್ಲಿ ಯಾವುದೇ ಸಂದರ್ಭದಲ್ಲಿ ಜನರ ರಕ್ಷಣೆಗೆ ತಂಡ ಸಿದ್ದವಿದ್ದು ಕಾಳಜಿ ಕೇಂದ್ರಗಳನ್ನು ತೆರೆಯಲು ಕೂಡಾ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಡಾ. ಸುಮಂತ್ ಬಿ.ಇ. ತಿಳಿಸಿದ್ದಾರೆ.

error: