May 14, 2024

Bhavana Tv

Its Your Channel

ಮೊಬೈಲ್ ಅಂಬುಲೆನ್ಸ್ ಸೇವೆಯನ್ನು ಲೋಕಾರ್ಪಣಗೊಳಿಸಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಭಟ್ಕಳ: ಪ್ರತಿಯೊಂದು ಹಂತದಲ್ಲಿಯೂ ಕೂಡಾ ಸರಕಾರ ಜನಸಾಮಾನ್ಯರ ಅಗತ್ಯತೆಗಳಿಗನುಗುಣವಾಗಿ ಕಾರ್ಯ ಮಾಡಲು ಬದ್ಧವಾಗಿದ್ದರೂ ಸಹ ಸರಕಾರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಲ್ಲಿನ ಗೊರ್ಟೆಯಲ್ಲಿರುವ ಖಾಸಗೀ ರೆಸಾರ್ಟನಲ್ಲಿ ಕರಾವಳಿ ಕರ್ನಾಟಕದ ಅನಿವಾಸಿ ಭಾರತೀಯರ ಸಂಘದ ವತಿಯಿಂದ ಸಾರ್ವಜನಿಕರ ಆರೋಗ್ಯ ತಪಾಸಣೆಗಾಗಿ ಆರಂಭಿಸಲಾದ ಮೊಬೈಲ್ ಅಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಸರಕಾರಕ್ಕೆ ಇಂತಹ ದಾನಿಗಳು, ಸಂಘ ಸಂಸ್ಥೆಗಳು ಸಾರ್ವಜನಿಕರ ಆರೋಗ್ಯ, ಶಿಕ್ಷಣ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಸಹಾಯ ಮಾಡಿದರೆ ಸರಕಾರದ ಹಣವನ್ನು ಅಭಿವೃದ್ಧಿಯತ್ತ ಹಾಕಲು, ಹೆಚ್ಚು ಹೆಚ್ಚು ಅಭಿವೃದ್ಧಿಯತ್ತ ಗಮನ ಕೊಡಲು ಸಾಧ್ಯವಾಗುವುದು ಎಂದ ಅವರು ನಮ್ಮ ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರು ಎನ್ನುವ ಎರಡು ವರ್ಗವಿತ್ತು, ಆದರೆ ಕಳೆದ ಬಾರಿ ಬಂದ ಮಹಾಮಾರಿ ಕೋವಿಡ್‌ನಿಂದಾಗಿ ಬೇಧಭಾವವನ್ನು ತೊಡೆದು ಹಾಕಿದ್ದು ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿದೆ. ಅಂದು ಬಡವರು ಶ್ರೀಮಂತರು ಎಲ್ಲರೂ ಕೂಡಾ ಭಯದಿಂದ ಒಂದೇ ರೀತಿಯ ಬದುಕನ್ನು ಕಂಡುಕೊoಡರು.
ಗ್ರಾಮೀಣ ಭಾಗಕ್ಕೆ ಕೂಡಾ ಹೋಗಿ ಮೊಬೈಲ್ ಕ್ಲಿನಿಕ್ ಸೇವೆ ನೀಡುವುದರಿಂದ ಅನೇಕ ಬಡ ಜನತೆಗೆ ವೃಥಾ ನಗರಕ್ಕೆ ಬರುವುದನ್ನು ತಪ್ಪಿಸಿದಂತಾಗುವುದಲ್ಲದೇ ಅನೇಕರಿಗೆ ತಾವಿದ್ದಲ್ಲೇ ಆರೋಗ್ಯ ಸೇವೆ ದೊರಕಿದಂತಾಗುತ್ತದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಸ್ಟಲ್ ಕರ್ನಾಟಕ ಅನಿವಾಸಿ ಭಾರತೀಯರ ಸಂಘದ ಅಧ್ಯಕ್ಷ ಯುನುಸ್ ಖಾಜಿಯಾ ಮಾತನಾಡಿ ನಾವು ಸದಾ ಸಮಾಜದ ಅಭಿವೃದ್ಧಿಗೆ ಬದ್ಧರಿದ್ದು ಆ ದಿಶೆಯಲ್ಲಿ ಮೊಬೈಲ್ ಕ್ಲಿನಿಕ್‌ನ್ನು ಸ್ಥಾಪಿಸಿದ್ದೇವೆ. ಈಗಾಗಲೇ ಆಸ್ಪತ್ರೆಗಳ ಮೂಲಕ ಜನ ಸೇವೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ನೀಡಲು ಆಸ್ಪತ್ರೆಗಳನ್ನು ತೆರೆಯುವ ಹಾಗೂ ಇಲ್ಲಿನ ಜನತೆ ಇಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದ ರೂವಾರಿ ಹಾಗೂ ಅಂಬುಲೆನ್ಸ್ ಉಚಿತವಾಗಿ ನೀಡಿದ ಅನಿವಾಸಿ ಉದ್ಯಮಿ ಶಿರೂರಿನ ಮನೇಗಾರ್ ಮೀರಾ ಸಾಹೇಬ್ ಅವರು ಮಾತನಾಡಿ ಕರಾವಳಿ ಕರ್ನಾಟಕ ಶಾಂತಿಯ ಪ್ರದೇಶವಾಗಿದ್ದು ಇಲ್ಲಿನ ಜನತೆ ಅತ್ಯಂತ ಸ್ನೇಹ ಪ್ರಿಯರು. ಅನಿವಾಸಿ ಭಾರತೀಯರು ಇಲ್ಲಿನ ಅಭಿವೃದ್ಧಿಗೆ ಸದಾ ಬದ್ಧರಿದ್ದು ನಾವು ಇಲ್ಲಿನ ಅಭಿವೃದ್ಧಿಗೆ ಸದಾ ಸಹಕರಿಸಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ನೀಡುವುದರ ಜೊತೆತೆ ಮೊಬೈಲ್ ಆರೋಗ್ಯ ಸೇವೆಯನ್ನು ರಾಜ್ಯದಲ್ಲಿಯೂ ವಿಸ್ತರಿಸುವ ವಿಚಾರವೂ ಇದೆ ಎಂದರು.
ವೇದಿಕೆಯಲ್ಲಿರುವ ಮೌಲಾನಾ ಅಬ್ದುಲ್ ರಬ್ ನದ್ವಿ, ಮೌಲಾನಾ ಕ್ವಾಜಾ ಮೊಹಿನುದ್ದೀನ್ ನದ್ವಿ, ಮಂಕಿಯ ಧರ್ಮಗುರುಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ವಲಯದ ಅಧ್ಯಕ್ಷ ರಘುರಾಮ ಪೂಜಾರಿ ಮಾತನಾಡಿದರು. ವೇದಿಕೆಯಲ್ಲಿ ಡಾ. ಹಸನ್ ಶಿರೂರು, ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಂಜೀಮ್ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ, ಉಪಾಧ್ಯಕ್ಷ ಅತೀÃಕುರ್ ರೆಹಮಾನ್ ಮುನೀರಿ, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಅಮಿನ್ ಸೈಫುಲ್ಲಾ ಶಿರೂರು ಮುಂತಾದವರು ಉಪಸ್ಥಿತರಿದ್ದರು. ಅಮಿನ್ ಸೈಫುಲ್ಲಾ ಹಾಗೂ ಅಭಿನಂದನ್ ಅವರು ಮೊಬೈಲ್ ಕ್ಲಿನಿಕ್‌ನ ಕಾರ್ಯದ ಕುರಿತು ಮಾಹಿತಿ ನೀಡಿದರು.
ಅರುಣಕುಮಾರ್ ಶಿರೂರು ಹಾಗೂ ಮುಸಾಯಿಬ್ ಕಾರ್ಯಕ್ರಮ ನಿರ್ವಹಿಸಿದರು.

error: