April 29, 2024

Bhavana Tv

Its Your Channel

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಜನಮೆಚ್ಚುಗೆ ಗಳಿಸಿದ ಶ್ರೀಧರ ಶೇಟ್ ಶಿರಾಲಿಯವರ ಕವಿತೆ

ಭಟ್ಕಳ: ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಮ್ಮ ಜಿಲ್ಲೆಯ ಪ್ರತಿಭಾನ್ವಿತ ಕವಿ ಶ್ರೀಧರ ಶೇಟ್ ಶಿರಾಲಿಯವರು ಭಾಗವಹಿಸಿದ್ದರು. ಅವರು ವಾಚಿಸಿದ
‘ಅವಳ ಕಣ್ಣುಗಳಿಗೆ ವಿಶ್ರಾಂತಿಯಿಲ್ಲ’ ಎಂಬ ಕವಿತೆಯು ಅಪಾರ ಜನಮೆಚ್ಚುಗೆ ಗಳಿಸಿತು.ಹೆಣ್ಣಿನ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಇತ್ಯಾದಿ ಕ್ರೌರ್ಯವನ್ನು ಈ ಕವಿತೆ ಅತ್ಯಂತ ಧ್ವನಿಪೂರ್ಣವಾಗಿ ಅಭಿವ್ಯಕ್ತಿ ಪಡಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ವರ್ತಮಾನದ ತಲ್ಲಣಗಳಿಗೆ ಕವಿಯಾದವನ ಮನಸ್ಸು ಮತ್ತು ಹೃದಯ ಸದಾ ಮಿಡಿಯುತ್ತಿರಬೇಕು ಎಂಬ ಅಗತ್ಯವನ್ನು ಈ ಕವಿತೆ ಒತ್ತಿಹೇಳುತ್ತದೆ. ಅತ್ಯಂತ ವಾಸ್ತವಿಕ ಮತ್ತು ಸಕಾಲಿಕ ಸಂಗತಿಗಳನ್ನು ಆಯ್ದುಕೊಂಡು, ತಮ್ಮ ವಿನೂತನ ಪ್ರತಿಮೆ ಮತ್ತು ರೂಪಕಗಳ ಮೂಲಕ ಕಾವ್ಯ ಕಟ್ಟುವ ಕವಿಯ ಜಾಣ್ಮೆ ಮತ್ತು ಕೌಶಲವನ್ನು ಇಲ್ಲಿ ಗಮನಿಸಬಹುದಾಗಿದೆ.
ಕವಿಗೋಷ್ಟಿಯ ನಂತರ ಕವಿ ಶ್ರೀಧರ ಶೇಟ್ ಶಿರಾಲಿಯವರನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಮಲ್ಲಮ್ಮ ಆರ್. ಪಾಟೀಲ್ ವಹಿಸಿದ್ದರು. ಹಿರಿಯ ಕವಿ ಡಾ.ಜಯಪ್ಪ ಹೊನ್ನಾಳಿ ಯವರು ಆಶಯ ನುಡಿಗಳನ್ನಾಡಿದರು. ರಾಜ್ಯದ ಮತ್ತು ಹೊರ ರಾಜ್ಯದ 25 ಕವಿಗಳು ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

error: