May 12, 2024

Bhavana Tv

Its Your Channel

ಸೇನಾನಿಗಳ ಸಾವು ನೋವಿನ ಸಂಗತಿ-ಕ್ಯಾಪ್ಟನ್ ಅಶೋಕ ನಾಯ್ಕ

ಹೊನ್ನಾವರ: ಸೈನಿಕರು ಭಾರತ ಮಾತೆಯ ಹೆಮ್ಮೆಯ ಪುತ್ರರು. ಹಗಲಿನಲ್ಲಿ ಸೂರ್ಯನಂತೆ, ಇರುಳಿನಲ್ಲಿ ಚಂದ್ರನAತೆ ಅವರು ಕಾರ್ಯನಿರ್ವಹಿಸುತ್ತಾರೆ. ರಣರಂಗದಲ್ಲಿ ಧೈರ್ಯದಿಂದಲೇ ಅವರು ಸಾವಿಗೆ ಮುಖಾಮುಖಿಯಾಗುತ್ತಾರೆ. ಬುಧವಾರ ನಡೆದ ಹೆಲಿಕ್ಯಾಫ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್.ಬಿಪಿನ್ ರಾವತ್ ಸೇರಿ ೧೩ ಮಂದಿ ದುರ್ಮರಣ ಅಪ್ಪಿರುವುದು ತುಂಬಾ ನೋವಿನ ಸಂಗತಿ' ಎಂದು ಭಾರತೀಯ ಸೇನೆಯಲ್ಲಿ ೩೨ ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕ್ಯಾಪ್ಟನ್ ಅಶೋಕ ನಾಯ್ಕ ಹೇಳಿದರು. ಅವರು ಹೊನ್ನಾವರದ ಶರಾವತಿ ವೃತ್ತದಲ್ಲಿ ಹೊನ್ನಾವರ ತಾಲೂಕಾ ನಿವೃತ್ತ ಹಾಗೂ ಕಾರ್ಯನಿರತ ಸೈನಿಕರು ಆಯೋಜಿಸಿದ್ದವೀರ್ ಜವಾನ್ ಅಮರ್ ರಹೇ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ದೇಶದ ಮೂರು ಶಸ್ತಾçಸ್ತç ಪಡೆಗಳ ಮೊಟ್ಟ ಮೊದಲ ಮುಖ್ಯಸ್ಥ ಜನರಲ್.ಬಿಪಿನ್ ರಾವತ್ ಸೇನೆಯ ಸುಧಾರಣೆಯ ಕನಸು ಕಂಡಿದ್ದರಲ್ಲದೇ, ಸೇನೆಯಲ್ಲಿ ಆತ್ಮನಿರ್ಭರ ಭಾರತ ಮುಖೇನ ದೇಶೀಯವಾಗಿಯೇ ಶಸ್ತಾçಸ್ತç ಉತ್ಪಾದಿಸಲು ಮುಂದಡಿ ಇಟ್ಟಿದ್ದರು. ಅವರ ನಿವೃತ್ತಿಯ ನಂತರವೂ ದೇಶಕ್ಕೆ ಅವರ ಮಾರ್ಗದರ್ಶನದ ಅಗತ್ಯವಿತ್ತು. ದುರದೃಷ್ಟವಶಾತ್ ಅವರು ಇನ್ನಿಲ್ಲವಾಗಿದ್ದಾರೆ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿಗರೆಯುತ್ತಿದೆ ಎಂದರು.
ಸುಬೇದಾರ್ ತಿಮ್ಮಪ್ಪ ಗೌಡ ಮಾತನಾಡಿ ಜನರಲ್.ಬಿಪಿನ್ ರಾವತ್, ಭಾರತೀಯ ಸೇನೆ ಕಂಡ ವಿಶಿಷ್ಟ ನಾಯಕ. ಅವರ ಜೀವನ ಅನಿರೀಕ್ಷಿತವಾಗಿ ಮುಗಿದು ಹೋಗಿದೆ. ಅಂತ್ಯ ಎಷ್ಟು ಅನೂಹ್ಯವೋ ಅವರ ಬದುಕೂ ಅಷ್ಟೇ ಅನೂಹ್ಯ. ಅವರ ಅವಧಿಯಲ್ಲಿ ನಡೆದ ಸಾಹಸಗಳನ್ನು, ಸಾಧನೆಗಳನ್ನು ದೇಶ ಸದಾ ಸ್ಮರಿಸುತ್ತದೆ ಎಂದರು.
ಪಿಎಸ್‌ಐ ಶಶಿಕುಮಾರ.ಪಿ.ಎಸ್ ಮಾತನಾಡಿ ಸೈನಿಕರು ಮತ್ತು ಆರಕ್ಷಕರು ಭಾರತ ಮಾತೆಯ ಎರಡು ಕಣ್ಣುಗಳು. ಒಬ್ಬರು ದೇಶವನ್ನು ಹೊರಗಿನಿಂದ ರಕ್ಷಿಸಿದರೆ, ಇನ್ನೊಬ್ಬರು ಒಳಗಿನಿಂದ ರಕ್ಷಿಸುತ್ತಾರೆ. ದೇಶದ ಹಿತ ಕಾಯುವಲ್ಲಿ ಇವರಿಬ್ಬರ ತ್ಯಾಗ ಬಲಿದಾನ ಸ್ಮರಣೀಯವಾದುದು ಎಂದರು.
ಮಾಜಿ ಸೈನಿಕ ವಾಮನ ನಾಯ್ಕ ಮಾತನಾಡಿ ಸಾಮಾನ್ಯವಾಗಿ ಮಹತ್ವದ ಹುದ್ದೆಯಲ್ಲಿರುವವರು ಮಾತಿಗೆ ಬಹಳ ಕಡಿಮೆ ಆದ್ಯತೆ ನೀಡುತ್ತಾರೆ. ಆದರೆ ರಾವತ್ ಹಲವು ವಿಷಯಗಳಿಗೆ ಸಂಬoಧಿಸಿದoತೆ ಕಟು ಪ್ರತಿಕ್ರಿಯೆ ನೀಡುತ್ತಿದ್ದರು. ಅವರದ್ದು ಅದ್ಭುತ ಜೀವನ, ಅಸಾಮಾನ್ಯ ಹೋರಾಟದ ಬದುಕಾಗಿತ್ತು. ಅವರಲ್ಲಿ ಧೀರೋದಾತ್ತ ನಾಯಕನ ಎಲ್ಲಾ ಗುಣಗಳು ಇದ್ದವು ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಉ.ಕ ಜಿಲ್ಲಾ ಭಾರತ ಸೇವಾ ದಳದ ಅಧ್ಯಕ್ಷ ಯೋಗೇಶ ರಾಯ್ಕರ್, ರೋಟರಿ ಕ್ಲಬ್‌ನ ಮಹೇಶ ಕಲ್ಯಾಣಪುರ್, ಸಬ್‌ಲೆಫ್ಟಿನೆಂಟ್ ಸಂತೋಷ ಗುಡಿಗಾರ, ಎಸ್.ಎಚ್.ಗೌಡ, ಸ್ಕೌಟ್ ಮತ್ತು ಗೈಡ್ಸ್ನ ಬಿ.ಡಿ.ಫರ್ನಾಂಡೀಸ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಶಂಕರ ಗೌಡ, ಕರವೇ ತಾಕೂಕಾ ಅಧ್ಯಕ್ಷ ಮಂಜುನಾಥ ಗೌಡ ಹಾಗೂ ತಾಲೂಕಿನ ನಿವೃತ್ತ ಸೈನಿಕರು ಮತ್ತು ಅವರ ಕುಟುಂಬದವರು ಹಾಗೂ ಸೇವೆಯಲ್ಲಿರುವ ಸೈನಿಕ ಮೈಕೆಲ್ ಮೊದಲಾದ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಮಡಿದ ವೀರ ಸೈನಿಕರ ಭಾವ ಚಿತ್ರದ ಎದುರು ದೀಪ ಬೆಳಗಿ, ಹಾರ ಸಮರ್ಪಣೆ ಮಾಡಿ ಪುಷ್ಪ ನಮನದ ಮೂಲಕ ಅಗಲಿದವರಿಗೆ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ಬಿ.ಜೆ.ನಾಯ್ಕ ವೀರ ಸೈನಿಕರ ಮರಣದ ಕುರಿತಾಗಿ ವಿವಿಧ ಪತ್ರಿಕೆಗಳಲ್ಲಿ ಬಂದ ಸಚಿತ್ರ ವರದಿಗಳನ್ನು ಕತ್ತರಿಸಿ ಭಾರತ ನಕಾಶೆಯ ರೂಪದಲ್ಲಿ ಅಂಟಿಸಿಅದನ್ನು ವೀರ ಸೈನಿಕರಿಗೆ ಅರ್ಪಿಸಿ ಚಿತ್ರನಮನ ಸಲ್ಲಿಸಿದರು. ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಎನ್.ಸಿ.ಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: