May 2, 2024

Bhavana Tv

Its Your Channel

ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿರುವ ಹೊನ್ನಾವರದ ಕೇಶಿ ಗೋವಿಂದ ಗೌಡ ಅವರಿಗೆ ಆದಿಚುಂಚನಗಿರಿ ಶ್ರೀಮಠದಿಂದ ಭೈರವಿ ಗೌಡತಿ ಪ್ರಶಸ್ತಿ ಪ್ರಧಾನ

ಹೊನ್ನಾವರ : ಕುಟುಂಬ, ಕೃಷಿ ಕಾಯಕದ ನಡುವೆಯೂ ನಿರಂತರವಾಗಿ ಕೆಲಜಾನಪದ ಹಾಡುಗಳನ್ನು ಹಾಡುತ್ತಾ ಜಾನಪದ ಲೋಕದಲ್ಲಿ ಹೆಜ್ಜೆಹಾಕುತ್ತಾ ಜಾನಪದ ಲೋಕ ಪ್ರಶಸ್ತಿಯೇ ತನ್ನನ್ನು ಹುಡುಕಿಬರುವಂತೆ ಬಹುದೂರ ಸಾಗಿ ಬಂದಿರುವ ಕೇಶಿ ಗೌಡ ಅವರನ್ನು ಆದಿಚುಂಚನಗಿರಿ ಶ್ರೀಮಠದಲ್ಲಿ ಶ್ರೀ ಕ್ಷೇತ್ರದ ಜಾತ್ರಾ ಪ್ರಯುಕ್ತ ನಡೆಯುತ್ತಿರುವ ಮಹಿಳಾ ಸಮಾವೇಶದಲ್ಲಿ ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಗೌರವಿಸಿ ಭೈರವಿ ಗೌಡತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಪೌರಾಣಿಕ, ಸಾಮಾಜಿಕ ಹಿನ್ನಲೆಯುಳ್ಳ ಸಾವಿರಾರು ಜಾನಪದ ಹಾಡುಗಳನ್ನು ನಿರರ್ಗಳವಾಗಿ, ಆಶು
ಕವಿತ್ವದ ಸಾಮರ್ಥ್ಯದೊಂದಿಗೆ ಹಾಡುವ ಮೂಲಕ ಕರ್ನಾಟಕ ಜಾನಪದ ಲೋಕವನ್ನು ಶ್ರೀಮಂತಗೊಳಿಸುತ್ತಾ ಬಂದಿರುವ ಕರಾವಳಿ ಜಿಲ್ಲೆಯ ಉತ್ತರಕನ್ನಡದ ಹೊನ್ನಾವರ ತಾಲೂಕಿನ ಕಾವೂರನ ಕೇಶಿ ಗೋವಿಂದ ಗೌಡ ಅವರಿಗೆ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತು ಈ ಬಾರಿಯ ಜಾನಪದ ಲೋಕ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

ಹುಡುಕುತ್ತಾ ಹೋದಷ್ಟೂ ತೆರೆದುಕೊಳ್ಳುತ್ತಲೇ ಇರುವ ಜಾನಪದ ಸಾಧಕರ ತವರೆನಿಸಿರುವ ಜಿಲ್ಲೆಯಲ್ಲಿ ಸುಕ್ರಿ ಬೊಮ್ಮ ಗೌಡ ಅವರು ಇದೇ ಜಾನಪದ ಹಾಡಿಗಾಗಿ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಗೌರವಕ್ಕೂ ಪಾತ್ರರಾಗಿರುವುದನ್ನು ಕಾಣಬಹುದಾಗಿದೆ. ಹೊನ್ನಾವರದವರೇ ಆಗಿದ್ದ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದ ದಿ,ಹನುಮಿ ಕ್ಷೇತ್ರ ಗೌಡ ಅವರು ನಮ್ಮನ್ನೆಲ್ಲಾ ಅಗಲಿದ ವರ್ಷದೊಳಗೆ ಮತ್ತೊಬ್ಬರು ಎಲೆಮರೆಯ ಗಾಯಕಿಯನ್ನು ಪ್ರಶಸ್ತಿ ಹುಡುಕಿ ಬಂದAತಾಗಿದೆ.

ಜಾನಪದ ಹಾಡುಗಾರ್ತಿ ಕೇಶಿ ಗೌಡರ ಸಂಕ್ಷಿಪ್ತ ಪರಿಚಯ
ಹಡಿನಬಾಳ ಗ್ರಾಮದ ಬಾನಗದ್ದೆಯ ಹನ್ಮಿ ಮತ್ತು ಜಟ್ಟಿ ಗೌಡರ ಕಡುಬಡ ಕುಟುಂಬದಲ್ಲಿ ಇವರ ಜನನ ವಾಯಿತು. 13 ನೇ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೊಳಗಾಗಿ ಕಾವೂರಿನ ಗೋವಿಂದ ಗೌಡರ ಬದುಕಿಗೆ, ಮನೆಗೆ ಪ್ರವೇಶ ಮಾಡಿದರು. ಮನೆ ಬದಲಾದರೂ ಬಡತನದ ಬೇಗೆ ಬದಲಾಗಲಿಲ್ಲ. ಹೊಟ್ಟೆಯನ್ನು ತಣ್ಣಗಿರಿಸಿಕೊಳ್ಳಲು ಹೊಲ ಗದ್ದೆಗಳಲ್ಲಿ ದುಡಿಯವುದು ಅನಿವಾರ್ಯವಾದರೂ ಅದಕ್ಕಾಗಿ ಬೇಸರಿಸದೇ ನಾಳೆಯ ಸುಖವೆಂಬ ಕನವರಿಕೆಯಲ್ಲಿ ಕಷ್ಟವನ್ನೆಲ್ಲಾ ಸಹಿಸಿಕೊಂಡು ನೋವು ನುಂಗಿ ನಲಿವು ಹೊರ ಚೆಲ್ಲಲು ಜಾನಪದದಮೊರೆ ಹೋದ ಶ್ರೀಮತಿ ಕೇಶಿ ಅವರು ಇಂದು ಜಾನಪದದ ಜ್ಞಾನದಾಗರವಾಗಿ ಬೆಳೆದುನಿಂತಿರುವುದು ನಿಜಕ್ಕೂ ಒಂದು ಸ್ಪೂರ್ತಿದಾಯಕ ಕಥೆಯಂತಿದೆ.

ನಾರಾಯಣ ದೇವರ ಹಾಡು, ಅಣ್ಣಪ್ಪ ಸ್ವಾಮಿಯ ಹಾಡು, ತಿರುಪತಿ ತಿಮ್ಮಪ್ಪನ ಹಾಡು, ಧರ್ಮರ ಹಾಡು, ಅಭಿಮನ್ಯುವಿನ ಹಾಡು, ಕುಸುಮಾಲೆ ಹಾಡು, ಲಕ್ಷ್ಮಣನ ಹಾಡು, ಸತ್ಯಪ್ಪನ ಹಾಡು, ಸಾಮಂತ್ರಿ ಹಾಡು, ಮದುವಣದ ಹಾಡು, ಸೋಬಾನೆ ಹಾಡು, ಹಮಗಾರ ಮಣೆ ಹಾಡು, ಚಾಡಂಗದ ಹಾಡು, ಅತ್ತಿಗೆ ಮೈದುನನ ಹಾಡು, ಅಕ್ಕನ ಕರೆಯುವ ಹಾಡು, ಅತ್ತೆ ಸೊಸೆಯ ಹಾಡು, ನಾಮಕರಣದ ಹಾಡು, ಗಿಜುಗನ ಹಾಡು, ಬಳೆಗಾರನ ಹಾಡು ಹೀಗೆ ಸಾಲು ಸಾಲು ಹಾಡಿನ ಸುರುಳಿ ಕೇಶಿಯವರ ಸ್ಮೃತಿಯೊಳಗೆ ಅಚ್ಛಾಗಿದೆ.

ಸದ್ದು ಗದ್ದಲವಿರದ ಜಾನಪದವೆಂಬ ಸಹಜ ಸುಂದರ ಕಲಾಪ್ರಕಾರವನ್ನು ಉಳಿಸಿ ಬೆಳೆಸುತ್ತಿರುವ ಕೇಶಿ ಗೌಡರನ್ನು ಒಕ್ಕಲಿಗರ ಶಕ್ತಿಪೀಠ ಎಂದೇ ಕರೆಸಿಕೊಳ್ಳುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯವರು, ಶಾಖಾ ಮಠದ ಪೂಜ್ಯರು, ನಾಡಿನ ಗಣ್ಯ ಮಹನೀಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಿರುವುದು ಹೊನ್ನಾವರ ತಾಲೂಕಿಗೆ, ಉತ್ತರಕನ್ನಡ ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದೆ.

error: