April 29, 2024

Bhavana Tv

Its Your Channel

ಕಾಸರಕೋಡ ಟೊಂಕದ ಕಡಲತೀರದಲ್ಲಿ ರಿಡ್ಲೆ ಜಾತಿಯ ಕಡಲಾಮೆ 84 ಮರಿಗಳ ಜನನ

ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ರಿಡ್ಲೆ ಜಾತಿಯ ಕಡಲಾಮೆಯೊಂದು ಜನವರಿ 24ರಂದು ಇಟ್ಟಿರುವ ಮೊಟ್ಟೆಗಳಿಂದ ಶನಿವಾರ ತಡರಾತ್ರಿ 84 ಮರಿಗಳು ಜನಿಸಿವೆ. ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಇಲ್ಲಿನ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆಇಟ್ಟಿರುವ ಸ್ಥಳವನ್ನು ಗುರುತಿಸಿ ಅದಕ್ಕೆ ಸ್ಥಳದಲ್ಲಿ ಪಂಜರ ನಿರ್ಮಿಸಿ ಸಂರಕ್ಷಣೆ ಕ್ರಮ ಕೈಗೊಂಡಿತ್ತು.

ಶನಿವಾರ ತಡರಾತ್ರಿ ಸುಮಾರು 84 ರಿಡ್ಲೆ ಜಾತಿಯ ಕಡಲಾಮೆ ಮರಿಗಳು ಜನಿಸಿದ್ದು ರವಿವಾರ ಬೆಳಗ್ಗೆ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಸೇರಿ ಸಡಗರದಿಂದ ಕಡಲಾಮೆ ಮರಿಗಳನ್ನು ಕಡಲಿಗೆ ಬಿಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ವಿಕ್ರಂ. ಉಪವಲಯ ಅರಣ್ಯಾಧಿಕಾರಿ ಗೌಸ. ಮತ್ತು ಸಿಬ್ಬಂದಿ, ಶ್ರೀಮತಿ ವಿಕ್ರಂ. ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ಕಡಲಾಮೆಗಳ ಸಂರಕ್ಷಣಾ ತಂಡದ ರಮೇಶ್ ಮಂಜುನಾಥ್ ತಾಂಡೇಲ್, ಗಿರಿಧರ ತಾಂಡೇಲ್, ರಾಜು ಶೆಷಗಿರಿ ತಾಂಡೇಲ್ ಮೀನುಗಾರ ಪ್ರಮುಖರಾದ ರಾಜೇಶ್ ಗೋವಿಂದ ತಾಂಡೇಲ್, ಗಣಪತಿ ಈಶ್ವರ ತಾಂಡೇಲ.ಮಹ್ಮದ್ ಕೋಯಾ, ವಿವನ್ ಫರ್ನಾಂಡಿಸ್, ಗ್ರಾಮ ಪಂಚಾಯತ ಸದಸ್ಯರಾದ ಸತ್ತಾರ ಸಾಬ, ಮತ್ತು ಮಾರ್ಥೋಮ ಶಾಲೆಯ ಹಲವು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಈ ಭಾಗದ ಕಡಲತೀರದಲ್ಲಿ ಪ್ರತಿ ವರ್ಷವೂ ಡಿಸೆಂಬರ್ ದಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ತಮ್ಮ ಸಂತತಿ ಅಭಿವೃದ್ಧಿಗೋಸ್ಕರ ಮೊಟ್ಟೆ ಇಡುತ್ತವೆ. ಈ ಬಾರಿ 12ಕ್ಕೂ ಹೆಚ್ಚು ಕಡಲಾಮೆಗಳು ಇಲ್ಲಿನ ಕಡಲತೀರದಲ್ಲಿ ಇಟ್ಟಿರುವ ಸುಮಾರು 2000ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು ಅದರ ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತ ಬಂದಿದೆ. ಈ ನಡುವೆ ಇತ್ತೀಚೆಗೆ ಪೋಲೀಸ್ ಬಂದೋಬಸ್ತ್ ನಲ್ಲಿ ಕಡಲತೀರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲ್ಲೂ ಸಹ ರಿಡ್ಲೇ ಜಾತಿಯ ಕೆಲವು ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಇತ್ತೀಚಿನ ಎರಡು ತಿಂಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು ರಕ್ತಸಿಕ್ತ ಅವಸ್ಥೆಯಲ್ಲಿ ಇಲ್ಲಿನ ಕಡಲತೀರದಲ್ಲಿ ಸಾವನ್ನಪ್ಪಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆ ಕಡಲಾಮೆಗಳ ಆವಾಸ ಸ್ಥಾನವಾಗಿರವ ಇಲ್ಲಿಯ ಕಡಲತೀರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ವಾಣಿಜ್ಯ ಬಂದರು ಯೋಜನೆಗಾಗಿ ಇಲ್ಲಿನ ಕಡಲತೀರದಲ್ಲಿ ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಮಣ್ಣನ್ನು ಸುರಿದು ರಸ್ತೆ ಕಾಮಗಾರಿ ನಡೆಸುತ್ತಿರುವ ಜಿಲ್ಲಾ ಆಡಳಿತದ ಬಲವಂತದ ಕ್ರಮವನ್ನು ಸ್ಥಳೀಯರು ತಡೆದು ಕಾಮಗಾರಿ ನಡೆಸದಂತೆ ಪ್ರತಿಭಟಿಸಿದ್ದರು. ಆದರೆ ಜಿಲ್ಲಾ ಆಡಳಿತವು ಅಂದು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಅವರನ್ನು ಬೇರೆ ಪ್ರದೇಶಗಳಿಗೆ ಕರೆದೊಯ್ದು ಗ್ರಹಬಂಧನದಲ್ಲಿರಿಸಿರುವುದನ್ನು ಮತ್ತು ಪೋಲೀಸ್ ಬಂದೋಬಸ್ತ್ ನಲ್ಲಿ ಇಲ್ಲಿನ ಕಡಲತೀರದಲ್ಲಿ ರಸ್ತೆ ಕಾಮಗಾರಿ ನಿರ್ವಹಿಸಿರುವ ಜಿಲ್ಲಾ ಆಡಳಿತದ ಸರ್ವಾಧಿಕಾರ ನಡೆಯು ವ್ಯಾಪಕ ಚರ್ಚೆಗೆ ಒಳಗಾಗಿರುವದನ್ನು ಇಲ್ಲಿ ಸ್ಮರಿಸಬಹುದು.

error: