May 15, 2024

Bhavana Tv

Its Your Channel

ಅತಿ ವಿಜೃಂಭಣೆಯಿOದ ನಡೆದ ಅನಿಲಗೋಡದ ಕುಮಾರ ರಾಮ ಮತ್ತು ಮಹಾಸತಿಯರ ದೇವಾಲಯದ ಅನಿಲಗೋಡ ಹಬ್ಬ,

ಹೊನ್ನಾವರ: ಕುಮಾರ ರಾಮನ ಏಕೈಕ ದೇವಸ್ಥಾನವಿರುವುದು ಹೊನ್ನಾವರ ತಾಲೂಕಿನ ಅನಿಲಗೋಡಿನಲ್ಲಿ ಮಾತ್ರವಾಗಿದ್ದು, ಧಾರ್ಮಿಕ ನಂಬಿಕೆಯ ಮೂಲಕ ಭಕ್ತರು ಅನುಸರಿಸುವ ವಿಶಿಷ್ಟ ಜಾನಪದಿಯ ಆಚರಣೆಯಿಂದ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ದೇವಾಲಯವು 800 ವರ್ಷಗಳ ಇತಿಹಾಸ ಹೊಂದಿದ್ದು, ವಾಸ್ತುಶಿಲ್ಪ ಶಾಸ್ತ್ರದ ಆಧಾರದಲ್ಲಿ ಭಕ್ತರ ಸಹಕಾರದೊಂದಿಗೆ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಷ ಶಿಲಾಮಯ ದೇವಾಲಯ ನಿರ್ಮಾಣಗೊಂಡಿದೆ. ಕುಮಾರರಾಮನ ಆಸ್ಥಾನದ ಮಹಾಸತಿಯರಾದ ಮಾಳಮಾಸ್ತಿ, ನಾಗಮಾಸ್ತಿ, ಹೊನ್ನಮಾಸ್ತಿ ಮತ್ತು ಕೆಂಡ ಮಾಸ್ತಿಯು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಮಯಿಗಳಾಗಿದ್ದಾರೆ.

ಧನಿಕರ ದೌರ್ಜನ್ಯವನ್ನು ಸಹಿಸದೆ ಅವರ ವಿರುದ್ದ ಸಿಡಿದೆದ್ದು ಶೋಷಿತರ ಪರ ಹೋರಾಟ ನಡೆಸಿ, ಅಮರನಾದ ಕುಮಾರರಾಮನ ಇತಿಹಾಸ ಸಾರುವ ಜಾನಪದ ಸೊಗಡಿನ ಆಕರ್ಷಣೀಯ ಹಬ್ಬವೇ ಅನಿಲಗೋಡ ಹಬ್ಬ.

ಕುಮಾರರಾಮನ ಸಾಹಸದ ಕುರಿತಾಗಿ ಹಲವಾರು ಕಥೆಗಳಿವೆ. ಶ್ರೀಮಂತ ಭೂ ಮಾಲೀಕರು ಬಡವರನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದರು. ಜೀವನಾದಾರಕ್ಕೆ ಏನನ್ನೂ ನೀಡುತ್ತಿರಲಿಲ್ಲ. ಹಸಿವಿನಿಂದ ಕಂಗೆಟ್ಟು ಜನ ಏನನ್ನಾದರೂ ಸಂಗ್ರಹಿಸಿದರೆ ಕಳ್ಳ ಎಂದು ಶೂಲಕ್ಕೆ ಏರಿಸುತ್ತಿದ್ದರು. ಇದನ್ನು ಪ್ರತಿಭಟಿಸುತ್ತಿದ್ದ ಕುಮಾರರಾಮ, ಅನ್ಯಾಯ ನಡೆದ ಸ್ಥಳಕೆ ಧಾವಿಸಿ ನಿರ್ಧಯಿಗಳನ್ನು ಶಿಕ್ಷಿಸುತ್ತಾನೆ. ಈತನ ಧೈರ್ಯ, ಸಾಹಸ ಮೆಚ್ಚಿದ ಜನ “ಕಡುಗಲಿ” ಕುಮಾರರಾಮ ಎಂಬ ಬಿರುದನ್ನಿತ್ತು ಕೊಂಡಾಡಿದರು. ಈತನು ಮಹಾಕಾಳಿಯ ಪರಮ ಭಕ್ತನಾಗಿದ್ದು, ದೇವಿಯ ವರಪ್ರಸಾದದಿಂದ ಅಪ್ರತಿಮ ಶೂರನಾಗಿ ವಿರೋಧಿಗಳ ಸೈನ್ಯವನ್ನು ಹಿಮ್ಮೆಟ್ಟಿಸಿ ನಾಡಿಗೆ ಜಯ ತಂದು ಕೊಡುತ್ತಾನೆ. ಬಳಿಕ ರಾಜ್ಯದ ಮೂಲೆ ಮೂಲೆಗೂ ದಂಡೆತ್ತಿ ಹೋಗಿ ವಿಜಯಶಾಲಿಯಾಗುತ್ತಾನೆ. ಇದರಿಂದ ಅವನಲ್ಲಿ ಅಹಂಕಾರದ ಭಾವನೆ ಬೆಳೆದು, ಅದರಿಂದಲೇ ಆತನ ಸಂಹಾರವಾಗುತ್ತದೆ. ಕುಮಾರರಾಮನ ಪತ್ನಿಯರು ಸತಿ ಸಹಗಮನ ಪದ್ಧತಿಯಂತೆ ವೀರಮರಣ ಹೊಂದಿ ಲೋಕದಲ್ಲಿ ಮಹಾಸತಿಯರಾಗುತ್ತಾರೆ.
ಆತನ ಶಿರವನ್ನು ಅನಿಲಗೋಡದಲ್ಲಿ ತಂದು ಪ್ರತಿಷ್ಠಾಪಿಸಲಾಗುತ್ತದೆ. ಎಂಬಿತ್ಯಾದಿ ನಾನಾ ರೀತಿಯ ಹಿನ್ನಲೆಯಿದೆ.

ಅನಿಲಗೋಡ ಕಳ್ಳರು ಎಂದರೆ ಕುಮಾರರಾಮನ ಆಸ್ಥಾನದ ಸೈನಿಕರು ಎಂಬ ಪ್ರತೀತಿ. ಇನ್ನು ಆರತಿ ಮಕ್ಕಳು ಎಂದರೆ, ಕುಮಾರರಾಮ ರಾಜ್ಯ ಗೆದ್ದು ವಿಜಯಶಾಲಿಯಾಗಿ ಬಂದಾಗ ಆರತಿ ಬೆಳಗಿ ಬರಮಾಡಿಕೊಳ್ಳುವವರು ಎಂದರ್ಥ. ಸಂಪ್ರದಾಯದoತೆ ಕಳ್ಳರ ಕಟ್ಟುವುದು, ಆರತಿಮಕ್ಕಳ ಸೇವೆ ಇಲ್ಲಿನ ಹರಕೆಯಾಗಿ ಪ್ರಚಲಿತವಾಗಿದೆ.

ಕಳ್ಳರು ಎಂದರೆ ದೇವಾಲಯದ ಭಕ್ತಾದಿಗಳ ಕುಟುಂಬದ ಸದಸ್ಯರು ವೃತಧಾರಿಗಳಾಗಿ, ಛಡಿ ಬೆತ್ತ ಹಿಡಿದು, ಕೆಂಪು ಮಡಿ ಉಟ್ಟು, ತಲೆಗೆ ಮುಂಡಾಸು ಸುತ್ತಿ, ಸಂಪಿಗೆ ಹೂವಿನ ಮಾಲೆಯನ್ನು ಕೊರಳಲ್ಲಿ ಧರಿಸಿ, ತೋಳು ಮತ್ತು ಕಾಲಿಗೆ ಕೆಂಪು ಹೂವಿನಿಂದ ಅಲಂಕೃತವಾದ ಪಟ್ಟಿಯನ್ನು ಕಟ್ಟಿಕೊಳ್ಳುವರು. ನಂತರ ಹೋ… ಕುಲುಲೋ… ಎಂದು ಧ್ವನಿ ಮಾಡುತ್ತಾ ದೇವಸ್ಥಾನದಿಂದ ಹೊರಟು 48 ಗಂಟೆಗಳ ಕಾಲ ಬರಿಕಾಲಲ್ಲಿ ಊರೂರು ಓಡುತ್ತ ಸಾಗಿ, ಮನೆ ಮನೆಗೆ ಹೋಗಿ ಹಣ ತೆಂಗಿನ ಕಾಯಿ ಸಂಗ್ರಹಿಸುತ್ತಾರೆ. ಹಬ್ಬದ ದಿನ ಮದ್ಯಾಹ್ನದ ಒಳಗೆ ದೇವಸ್ಥಾನ ತಲುಪಿ ಪೂಜೆಯಲ್ಲಿ ಪಾಲ್ಗೊಳ್ಳುವರು. ದೇವಸ್ಥಾನದ ಎದುರು ಬಯಲಲ್ಲಿ ಇರುವ 36 ಅಡಿ ಎತ್ತರದ ಕಟ್ಟಿಗೆಯ ಕಂಬಕ್ಕೆ ಎಣ್ಣೆ ಹಚ್ಚಿ, ತುದಿಯಲ್ಲಿ ಬಾಳೆಕೊನೆ ಕಟ್ಟಿರುತ್ತಾರೆ. ಶೂಲದಕಂಬ ಎಂದು ಕರೆಯುವ ಈ ಕಂಬವನ್ನು ಬರಿಗಾಲಲ್ಲಿ ಏರಿ ಹಣ್ಣು ಒಗೆಯುವುದು ಇಲ್ಲಿನ ಹರಕೆಯ ಸಂಪ್ರದಾಯ.

ಈ ವಿಶಿಷ್ಠ ಆಚರಣೆಗೆ ಕಟ್ಟುನಿಟ್ಟಿನ ನಿಯಮ ಅಗತ್ಯ. ಮಾಂಸಾಹಾರ ಸೇವಿಸುವಂತಿಲ್ಲ. ಹಾಸಿಗೆ ಮೇಲೆ ನಿದ್ರಿಸುವ ಹಾಗಿಲ್ಲ. ನಿಯಮದಲ್ಲಿ ಲೋಪವಾದರೆ ದೇವಿಯ ಕೋಪಕ್ಕೆ ಗುರಿಯಗುತ್ತಾರೆ ಎಂಬ ನಂಬಿಕೆಯಿದೆ.

12 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಹಬ್ಬದ ದಿನ ರಾತ್ರಿ ಶೃಂಗಾರ ಮಾಡಿ, ಕೈಯಲ್ಲಿ ಆರತಿಬಟ್ಟಲು ಹಿಡಿಸಿ ಸೇವೆ ಸಲ್ಲಿಸುತ್ತಾರೆ. ಇವರನ್ನು ಆರತಿ ಮಕ್ಕಳು ಎನ್ನುತ್ತಾರೆ. ಇನ್ನು ಶೇಡಿಕಂಬ ಏರುವುದು, ಪಾನಕಪೂಜೆ ಮುಂತಾದ ಆಚರಣೆಗಳು ನಡೆಯುತ್ತದೆ. ವಿಶೇಷವಾಗಿ ಅನಿಲಗೋಡ ಹಾಗೂ ಸುತ್ತಮುತ್ತಲಿನ ಕೊಡಾಣಿ, ಹಿನ್ನೂರು, ಬೇರಂಕಿ ಗ್ರಾಮಗಳ ನಾಮಧಾರಿ ಸಮಾಜದ ನೂರಾರು ಕುಟುಂಬಗಳು ಶತಶತಮಾನಗಳಿಂದ ಈ ಹಬ್ಬ ಆಚರಿಸಿಕೊಂಡು ಬಂದಿದೆ. ಈ ಅಪ್ಪಟ ಜಾನಪದ ಸೊಗಡಿನ ಅನಿಲಗೋಡ ಹಬ್ಬ ಪ್ರತಿವರ್ಷವೂ ಮೇ 21 ರಂದು ನಡೆಯಲಿದೆ.

  ವರದಿ- ನರಸಿಂಹ ನಾಯ್ಕ್ ಹರಡಸೆ.
error: