May 15, 2024

Bhavana Tv

Its Your Channel

ಕಳೆದ ವಾರದ ಮಳೆಯ ರಜೆಯಲ್ಲಿ ಮನೆಯಲ್ಲೇ ವಾಟರ್ ಪಂಪ್ ಮಾದರಿ ತಯಾರಿಸಿ ಎಲ್ಲರ ಗಮನ ಸೆಳೆದ ಆಕಾಶ್ ನಾಯ್ಕ

ಹೊನ್ನಾವರ ತಾಲೂಕಿನ ಮಾಗೋಡ್ ಕೊಡ್ಲಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಕಾಶ್ ನಾಯ್ಕ್, ಕಳೆದ ವಾರದ ಅತಿಯಾದ ಮಳೆಯ ರಜೆಯಲ್ಲಿ ಮನೆಯಲ್ಲೇ ವಾಟರ್ ಪಂಪ್ ಮಾದರಿ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಶಾಲೆ ರಜೆ ಇದ್ದಾಗ ಮನೆಯಲ್ಲಿ ಮೊಬೈಲ್ ಹಿಡಿದು, ಗೇಮ್ ಆಡಿ ಕಾರ್ಟೂನ್ ನೋಡುವ ಮಕ್ಕಳೇ ಹೆಚ್ಚಿರುವ ಈಗಿನ ದಿನದಲ್ಲಿ, ಇವನು ಇದೇ ರಜೆಯಲ್ಲಿ ಅಪರೂಪದ ಸಾಧನೆ ಮಾಡಿದ್ದಾನೆ. ಆರಿದ್ರಾ ಮಳೆಯ ಅಬ್ಬರಕ್ಕೆ ಕಳೆದ ವಾರ ಐದು ದಿನ ಶಾಲೆಗೆ ರಜೆ ನೀಡಲಾಗಿತ್ತು. ಸದಾ ಸಂಶೋಧನಾತ್ಮಕ ಮನೋಭಾವದ ವಿದ್ಯಾರ್ಥಿ ಆಕಾಶ್ ಈ ರಜಾ ದಿನವನ್ನು ಸದುಪಯೋಗ ಪಡಿಸಿಕೊಂಡು ಈಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಮಾಗೋಡ್ ಹೊಸಗದ್ದೆಯ ಮಹಾಲಕ್ಷ್ಮಿ ಮತ್ತು ಗೋಪಾಲ ನಾಯ್ಕ ದಂಪತಿ ಮಗನಾದ ಆಕಾಶ್, ಹತ್ತಿರದ ಕೊಡ್ಲಗದ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಾನೆ. ಇವನ ಆವಿಷ್ಕಾರದ ಆಸಕ್ತಿಯನ್ನು ಮನಗಂಡ ತಂದೆ ಗೋಪಾಲ ನಾಯ್ಕ್ ಇವನಿಗೆ ಪೂರಕವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅದರಂತೆಯೇ ಆಕಾಶ್ ಇಂದು ನಿರುಪಯುಕ್ತ ವಸ್ತುಗಳನ್ನು ಬಳಸಿ ವಾಟರ್ ಪಂಪ್ ಮಾದರಿ ತಯಾರಿಸಿದ್ದಾನೆ. ಸೋಮವಾರ ಶಾಲೆ ಆರಂಭವಾದಾಗ ತಾನು ತಯಾರಿಸಿದ ವಾಟರ್ ಪಂಪ್ ಮಾದರಿಯ ಪ್ರಾತ್ಯಕ್ಷಿಕೆಯನ್ನು ಶಾಲೆಯಲ್ಲಿ ತೋರಿಸಿ, ಗುರುಗಳ ಹಾಗೂ ಸಹಪಾಠಿಗಳ ಶ್ಲಾಘನೆಗೆ ಸಾಕ್ಷಿಯಾಗಿದ್ದಾನೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಆಕಾಶ್ ಮಾತನಾಡಿ “ನಿರಂತರ ಸುರಿಯುವ ಮಳೆಗೆ ಶಾಲೆ ರಜೆ ಸಿಕ್ಕಿದ್ದರಿಂದ, ಬಿಡುವಿನ ವೇಳೆಯಲ್ಲಿ ನೀರು ಜಗ್ಗುವ ಪುಟ್ಟ ಯಂತ್ರ ತಯಾರಿಸಿದ್ದೇನೆ” ಎಂದು, ಯಂತ್ರಕ್ಕೆ ಬಳಸಿದ ಸಾಮಗ್ರಿಗಳನ್ನು ಪರಿಚಯಿಸಿದನು.

ಶಾಲೆಯ ಮುಖ್ಯ ಶಿಕ್ಷಕ ಮಾರುತಿ ನಾಯ್ಕ್ ಮಾತನಾಡಿ “ಇವನ ಅನ್ವೇಷಣಾ ಪ್ರವೃತ್ತಿ ಸದಾ ಮುಂದುವರಿಯುತ್ತಿರಲಿ. ಈ ಹಿಂದೆಯೂ ಸಹ ಪಿವಿಸಿ ಪೈಪ್ ಬಳಸಿ ‘ಕಳೆ ಕಟಿಂಗ್’ ಮಷಿನ್ ತಯಾರಿಸಿದ್ದ. ಇವನ ಕ್ರಿಯಾಶೀಲತೆಗೆ ತಂದೆ ಗೋಪಾಲ ನಾಯ್ಕ್ ಸೂಕ್ತ ಉತ್ತೇಜನ ನೀಡುತ್ತಿದ್ದಾರೆ. ಇವನ ಸಾಧನೆ ಎಲ್ಲ ಮಕ್ಕಳಿಗೂ ಪ್ರೇರಣೆಯಾಗಬೇಕು” ಎಂದರು.

ಆಕಾಶ್ ನ ತಂದೆ ಗೋಪಾಲ ನಾಯ್ಕ್ ಮಾತನಾಡಿ “ನನ್ನ ಮಗ ಮೊಬೈಲ್ ಮೂಲಕ ಇಂಟರ್ನೆಟ್ ನಲ್ಲಿ ಈ ತರದ ಹೊಸ ಹೊಸ ಆವಿಷ್ಕಾರಗಳ ಕುರಿತಾಗಿ ಹುಡುಕುತ್ತಿರುತ್ತಾನೆ. ಅದನ್ನೇ ಗಮನದಲ್ಲಿಟ್ಟುಕೊಂಡು ತಾನೂ ಪ್ರಯತ್ನಿಸುತ್ತಾನೆ” ಎಂದರು.

ಆಕಾಶ್ ನ ಉಜ್ವಲ ಭವಿಷ್ಯ ಆಕಾಶದೇತ್ತರಕೆ ಪ್ರಜ್ವಲಿಸಲೆಂದು, ಶಿಕ್ಷಕ ವೃಂದ, ಕುಟುಂಬದವರು, ಹಾಗೂ ಊರಿನವರು ಶುಭ ಹಾರೈಸಿದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: