ಹೊನ್ನಾವರ: ಒಗ್ಗಟ್ಟಾಗಿ ಏಕ ಮನಸ್ಸಿನಿಂದ ಕಾರ್ಯಪ್ರವೃತ್ತರಾದರೆ ಸುಲಭವಾಗಿ ಕೈಗೊಂಡ ಕಾರ್ಯ ನೇರವೇರಲಿದೆ ಎನ್ನುವುದಕ್ಕೆ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ದಿಯೇ ಸಾಕ್ಷಿ ಎಂದು ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ನುಡಿದರು.
ಮುಗ್ವಾ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಮಹಾದ್ವಾರದ ಉದ್ಘಾಟನೆ, ರಜತ ಕಲಶ ಪ್ರತಿಷ್ಠೆ, ರಾಜಗೋಪುರ ಕಲಶ ಪ್ರತಿಷ್ಠೆ, ಬ್ರಹ್ಮಕಲಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮ ಅಮೃತಹಸ್ತದಿಂದ ನೇರವೇರಿಸಿದ ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಶ್ರೀಗಳು ಸಮಾಜದಲ್ಲಿ ವೈರತ್ವ ಭಾವನೆ ಪರಿಹರಿಸಲು ಮಠ ಹುಟ್ಟಿಕೊಂಡಿದೆ. ಸನಾತನ ಧರ್ಮ ಉಳಿಸಿ ಎಲ್ಲಾ ಮತಗಳನ್ನು ಒಗ್ಗೂಡಿಸಿ ಶಂಕರಾರ್ಚಯರು ಮಠಗಳನ್ನು ಮರು ಸ್ಥಾಪಿಸಿದರು. ಮನುಷ್ಯ ಜನ್ಮ ಸಕಲ ಜೀವರಾಶಿಗಳಿಗಿಂತಲೂ ಭಿನ್ನವಾಗಿದೆ. ಈ ಜೀವನ ಪಾವನವಾಗಲು ಧಾರ್ಮಿಕ ಆಚರಣೆಗೆ ಅವಕಾಶಕ್ಕಾಗಿ ದೇವಾಲಯಗಳು ನಿರ್ಮಾಣವಾದವು. ಇಂತಹ ದೇವಾಲಯಗಳಿಂದ ಆಧ್ಯಾತ್ಮಿಕವಾಗಿ ಇನ್ನಷ್ಟು ಶಕ್ತಿ ನೀಡಲಿದ್ದು, ನಾವಿರುವ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕೇವಲ ಹಣ ಸಂಪಾದನೆಗಾಗಿ ಮಾತ್ರ ಜೀವನ ನಡೆಸದೆ, ಹಣದಿಂದ ದಾನ, ಅನುಭವಿಸುವಿಕೆಯ ಗುಣ ರೂಡಿಸಿಕೊಳ್ಳದೇ ಹೋದಲ್ಲಿ ಅದು ನಾಶವಾಗಲಿದೆ. ಕ್ಷೇತ್ರದಲ್ಲಿರುವ ಪುಷ್ಕರಣೆ ಅಭಿವೃದ್ದಿ ಚಿಂತನೆ ನಡೆಸುವಂತೆ ಸೂಚಿಸಿದರು. ಶ್ರೀ ಕ್ಷೇತ್ರದ ಅಭಿವೃದ್ದಿಯಿಂದ ಪ್ರತಿಯೊರ್ವರ ಮನದ ವಿಷ ಹಾಗೂ ಸಮಾಜದ ವಿಷ ದೂರವಾಗಿ ಇಲ್ಲಿಗೆ ಆಗಮಿಸುವ ಭಕ್ತರ ಸಂಕಷ್ಟ ದೂರವಾಗಲಿದೆ ಎಂದು ಹಾರೈಸಿದರು.
ಇದೇ ವೇಳೆ “ದಕ್ಷಿಣ ನಾಸಿಕ್ ಕ್ಷೇತ್ರ ಮಹಿಮೆ” ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ದೇವಾಲಯದ ಕಟ್ಟಡ ನಿರ್ಮಾಣ ಕಾರ್ಯ ಮಾಡಿದವರನ್ನು, ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಸನಾತನ ಧರ್ಮ ಈ ಜಗತ್ತಿಗೆ ಸಾರಿ ಹೇಳುವ ಜೊತೆಗೆ ನಾಲ್ಕು ದಿಕ್ಕಿನಲ್ಲಿ ಮಠ ಸ್ಥಾಪಿಸಿದರು. ಆದರೆ ಅವರ ಸಾಧನೆಯನ್ನು ನಾವು ಓದಿ ತಿಳಿದುಕೊಂಡರು ನೋಡಲು ಸಾಧ್ಯವಾಗಿಲ್ಲ. ಆದರೆ ಅವರ ಪ್ರತಿರೂಪವಾದ ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ. ಎಲ್ಲಾ ಸಮಾಜವನ್ನು ಒಗ್ಗೂಡಿಸುವ ಜೊತೆ ಅನೇಕ ಯೋಜನೆಗಳು ಮಠದಿಂದ ಯಶ್ವಸಿಯಾಗಿ ಜಾರಿಯಾಗುತ್ತಿದೆ ಎಂದರು.
ಶ್ರೀಕುಮಾರ ಸಂಸ್ಥೆಯ ಮಾಲಕ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ ಈ ಹಿಂದೆ ವ್ಯವಹಾರಿಕವಾಗಿ ನಷ್ಟದಲ್ಲಿದ್ದಾಗ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಗುರುಗಳು ಒಳಿತಾಗಲಿದೆ ಕ್ಷೇತ್ರದ ಆರಾಧನೆ ಸಲಹೆ ನೀಡಿದ್ದರು. ಸುಬ್ರಹ್ಮಣ್ಯ ದೇವರು ಹಾಗೂ ಗುರುಗಳ ಆರ್ಶಿವಾದದ ಪರಿಣಾಮ ಇಂದು ಈ ಮಟ್ಟಕ್ಕೆ ಶ್ರೀ ಕುಮಾರ ಸಂಸ್ಥೆ ಬೆಳೆದಿದೆ ಎಂದರು.
ವೇದಿಕೆಯಲ್ಲಿ ಮುಗ್ವಾ ಗ್ರಾ.ಪಂ.ಅಧ್ಯಕ್ಷೆ ಗೌರಿ ಅಂಬಿಗ, ಸದಸ್ಯರಾದ ಗೋವಿಂದ ಭಟ್, ತೇಜಸ್ವಿನಿ ಹೆಗಡೆ, ಆಶಾ ಹೆಗಡೆ, ದೇವಾಲಯದ ಕಾರ್ಯದರ್ಶಿ ಎನ್.ಎಂ.ಭಟ್, ಟ್ರಸ್ಟಿಗಳಾದ ಎಸ್.ವಿ.ಭಟ್ ಉಪಸ್ಥಿತರಿದ್ದರು. ಸತ್ಯನಾರಾಯಣ ತೋಟಿ ಪ್ರಾಸ್ತವಿಕ ಮಾತನಾಡಿದರೆ, ನಾಗರಾಜ ಹೆಗಡೆ ಖಾಸ್ಕಂಡ ಕಾರ್ಯಕ್ರಮ ನಿರ್ವಹಿಸಿದರು.
More Stories
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ
ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಕಡವೆಯೊಂದು ಗಂಭೀರ ಗಾಯ
ಜಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಎರಡು ವಾಹನ ವಶಕ್ಕೆ