May 18, 2024

Bhavana Tv

Its Your Channel

ಹೊನ್ನಾವರ ದಲ್ಲಿ ನಿರ್ಮಾಣವಾಗಲಿರುವ ಥೀಮ್ ಪಾರ್ಕ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಕ್ಕೆ ತಾಲೂಕಿನ ಜನತೆಯಲ್ಲಿ ಸಂತಸ

ಹೊನ್ನಾವರ ಫೆ. 18 : ಮುಖ್ಯಮಂತ್ರಿ ಬೊಮ್ಮಾಯಿಯವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್‌ಪಾರ್ಕ್ ನಿರ್ಮಾಣವನ್ನು ಹೇಳಿರುವುದರಿಂದ ಜಿಲ್ಲೆಯಲ್ಲಿ ಹರ್ಷ ಉಂಟಾಗಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯಾಗಲಿರುವ ಈ ಪಾರ್ಕ್ 54 ವರ್ಷ ಉತ್ತರಕನ್ನಡ ಮತ್ತು ಮಲೆನಾಡನ್ನು ಆಳಿದ ರಾಣಿ ಚೆನ್ನಭೈರಾದೇವಿಯ ಸಾಹಸ, ಸರ್ವಧರ್ಮ ಸಮನ್ವಯತೆ, ವಿದೇಶದೊಂದಿಗೆ ಆಯಾತ-ನಿರ್ಯಾತ ವ್ಯವಹಾರ, ಸ್ಥಳೀಯ ಕೃಷಿಕರಿಗೆ ಪ್ರೋತ್ಸಾಹ ಮೊದಲಾದ ವಿಷಯಗಳನ್ನೊಳಗೊಂಡಿದ್ದು ಜಿಲ್ಲೆಯ ಮಾತ್ರವಲ್ಲ ನಾಡಿನ ಯುವಜನರಿಗೆ ಸ್ಫೂರ್ತಿ ನೀಡುವಂತೆ ನಿರ್ಮಾಣ ಮಾಡಬೇಕು ಎಂಬುದು ಯೋಜನೆಯ ಗೌರವಾಧ್ಯಕ್ಷರೂ, ಮಾರ್ಗದರ್ಶಕರೂ ಆದ ಡಾ. ವೀರೇಂದ್ರ ಹೆಗ್ಗಡೆಯವರ ಯೋಜನೆಯಾಗಿದೆ.

ಡಾ. ಗಜಾನನ ಶರ್ಮಾ ಅವರ ರಾಣಿಚೆನ್ನಭೈರಾದೇವಿ ಕಾದಂಬರಿಯನ್ನು ಓದಿ ಸ್ಪೂರ್ತಿಗೊಂಡ ಪೂಜ್ಯ ಹೆಗ್ಗಡೆಯವರು ಮತ್ತು ಅವರ ಶ್ರೀಮತಿಯವರಾದ ಹೇಮಾವತಿ ಅಮ್ಮನವರು ಈ ಯೋಜನೆಗೆ ಮುಖ್ಯ ಪ್ರೇರಕರಾಗಿದ್ದು 9-10-2021ರಂದು ಹೊನ್ನಾವರದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಈ ಯೋಜನೆ ರೂಪಿಸಲು ನಿರ್ಧರಿಸಲಾಗಿತ್ತು. ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಮಿತಿ ರಚನೆಯಾಗಿತ್ತು. ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ಜಿಲ್ಲೆಯ ಎಲ್ಲ ಶಾಸಕರು, ಸಚಿವರು, ವಿಧಾನಸಭಾಧ್ಯಕ್ಷರು ಬೆಂಬಲ ವ್ಯಕ್ತಪಡಿಸಿದ್ದರು. ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು. ಅರಣ್ಯ ಇಲಾಖೆಯವರು ಯೋಜನೆಗೆ ಸಂಪೂರ್ಣ ಬೆಂಬಲ ನೀಡಿದ್ದರು. ವೀರೇದ್ರ ಹೆಗ್ಗಡೆಯವರು ಸ್ವತಃ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಅವರ ಸಮ್ಮತಿಯನ್ನು ಪಡೆದಿದ್ದರು. ಇಂದು ವಿಷಯ ಆಯವ್ಯಯದಲ್ಲಿ ಮಂಡನೆಯಾಗಿದೆ.
ಕಾಸರಕೋಡಿನಲ್ಲಿ ಕಾಂಡ್ಲಾವನ, ಇಕೋಬೀಚ್, ಅಪ್ಸರಕೊಂಡ, ಸ್ವಲ್ಪದೂರದಲ್ಲಿ ಇಡಗುಂಜಿ, ಮುರ್ಡೇಶ್ವರಗಳಿವೆ. ಇನ್ನೊಂದೆಡೆ ಗೋಕರ್ಣವಿದೆ. ಇದು ಮಧ್ಯವರ್ತಿ ಸ್ಥಳವಾದ ಕಾರಣ ಬಂದ ಪ್ರವಾಸಿಗರಿಗೆ ಇದು ಹೆಚ್ಚುವರಿ ಕೊಡುಗೆಯಾಗುತ್ತದೆ ಎಂದು ಹೆಗ್ಗಡೆಯವರು ಸಂಕಲ್ಪಿಸಿ ನಿರಂತರ ಪ್ರಯತ್ನದಲ್ಲಿದ್ದರು. ಅಂದಾಜು 8.5ಕೋಟಿ ರೂಪಾಯಿಗಳ ಯೋಜನಾ ನಕ್ಷೆಯೂ ಸಿದ್ಧವಾಗಿದೆ. ಚೆನ್ನಭೈರಾದೇವಿಯ ಸಾಹಸದ ಕಥೆಗಳನ್ನು ಕರ್ನಾಟಕದ ಜನ ವಿಶೇಷ ಆಸಕ್ತಿಯಿಂದ ಓದುತ್ತಿದ್ದು ಎರಡು ವರ್ಷದಲ್ಲಿ 8ಬಾರಿ ಮರುಮುದ್ರಣವಾಗಿದೆ. ಸಿನಿಮಾ ಹಕ್ಕುಗಳನ್ನು ಕೇಳತೊಡಗಿದ್ದಾರೆ. ಆದ್ದರಿಂದ ಥೀಮ್‌ಪಾರ್ಕ್ ಕುರಿತು ನಾಡಿನಲ್ಲಿ, ಜಿಲ್ಲೆಯಲ್ಲಿ ವಿಶೇಷ ಕುತೂಹಲವಿತ್ತು. ಈ ಯೋಜನೆಗೆ ಮಾರ್ಗದರ್ಶನ ನೀಡಿ ಇಲ್ಲಿಯವರೆಗೆ ನಡೆಸಿದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ, ಮುಖ್ಯಮಂತ್ರಿಗಳಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಥೀಮ್‌ಪಾರ್ಕ್ ನಿರ್ಮಾಣ ಸಮಿತಿಯ ವತಿಯಿಂದ ಕಾರ್ಯದರ್ಶಿ, ಪತ್ರಕರ್ತ ಜಿ.ಯು. ಭಟ್ ಅಭಿನಂದನೆ ಸಲ್ಲಿಸಿದ್ದಾರೆ.

error: