April 28, 2024

Bhavana Tv

Its Your Channel

ಸೋಮೇಶ್ವರ ದೇವರ ವರ್ಧಂತಿ ಉತ್ಸವದ ಅಂಗವಾಗಿ “ನಾಗಮಂಡಲ” ಎಂಬ ಅಪರೂಪದ ಪೌರಾಣಿಕ ಯಕ್ಷಗಾನ

ಹೊನ್ನಾವರ ತಾಲೂಕಿನ ಜನ್ನಕಡ್ಕಲ್ ಸಾನಡಿ ಸೋಮೇಶ್ವರ ದೇವರ ವರ್ಧಂತಿ ಉತ್ಸವದ ಅಂಗವಾಗಿ, ರಾತ್ರಿ ಪ್ರದರ್ಶನಗೊಂಡ “ನಾಗಮಂಡಲ” ಎಂಬ ಅಪರೂಪದ ಪೌರಾಣಿಕ ಯಕ್ಷಗಾನ ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು.

ಪರಮ ಶಿವನು ಸದ್ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾ ಸೋಮೇಶ್ವರನಾಗಿ ಜನ್ನಕಡ್ಕಲ್ ಗ್ರಾಮದ ಸಾನಡಿಯಲ್ಲಿ ನೆಲೆಸಿರುವನು. ಇಲ್ಲಿ ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗದೇವರ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶ್ರೀ ಸೋಮೇಶ್ವರ ದೇವರ ವರ್ದಂತಿ ಉತ್ಸವವು ವೈದಿಕರಾದ ಕಟ್ಟೆ ಶಂಕರ ಭಟ್ಟರ ಆಚಾರ್ಯತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ರುದ್ರಾಕ್ಷಿಹೋಮ, ಬಲಿಪೂಜೆ, ರಂಗಪೂಜೆ, ಅನ್ನಸಂತರ್ಪಣೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.

ರಾತ್ರಿ “ಶ್ರೀ ಸುಪ್ರಸನ್ನ ಮಹಾಗಣಪತಿ ಯಕ್ಷಗಾನ ಮಂಡಳಿ ಜಡ್ಡಿಕೇರಿ” ಇವರಿಂದ “ನಾಗಮಂಡಲ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಇದರಲ್ಲಿ ಬರುವ ‘ನಾಗನೃತ್ಯ, ವ್ಯಾಘ್ರ ಪ್ರವೇಶ’ ನೆರದಿದ್ದ ಕಲಾಭಿಮಾನಿಗಳನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಅಂಕೋಲಾರು ತಮ್ಮ ಸುಶ್ರಾವ್ಯ ಗಾಯನ ಹಾಗೂ ಕ್ರಿಯಾಶೀಲತೆಯಿಂದ, ಈ ಅಪರೂಪದ ಪ್ರಸಂಗವನ್ನು ಯಶಸ್ವಿಗೊಳಿಸಿ ಜನಮನ ಮೆಚ್ಚುಗೆ ಗಳಿಸಿದರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಊರಿನ ಹಾಗೂ ಪರಊರಿನ ಭಕ್ತಾದಿಗಳೆಲ್ಲ ಭಾಗವಹಿಸಿ ತಮ್ಮ ತಮ್ಮ ಶಕ್ತಿಯನುಸಾರ ಸೇವೆ ಸಲ್ಲಿಸಿ ಪುನೀತರಾದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: