April 29, 2024

Bhavana Tv

Its Your Channel

ಕುಮಟಾ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮಾನ್ಯ ಸಭೆ

ಕುಮಟಾ: ಕೇಂದ್ರ ಸರ್ಕಾರ ಜಾನುವಾರುಗಳ ಸಾಕಾಣಿಕೆ ನಿರ್ವಹಣೆಗಾಗಿ ಕಡಿಮೆ ಬಡ್ಡಿದರಲ್ಲಿ ಸಾಲ ನೀಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ನೂತನವಾಗಿ ಪರಿಚಯಿಸಿದೆ. ರೈತರು ಈ ಯೋಜನೆಯ ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿಶ್ವನಾಥ ಹೆಗಡೆ ತಿಳಿಸಿದರು.

ಅವರು ಸೋಮವಾರ ಕುಮಟಾ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಆಡಳಿತಾಧಿಕಾರಿ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿ ನೀಡಿದರು.
ಜಾನುವಾರುಗಳ ಪೋಷಣಾ ಸಾಲಕ್ಕೆ ತಾಲೂಕಿಗೆ 360 ಗುರಿ ನೀಡಿದ್ದು, ಈಗಾಗಲೇ 48 ಅರ್ಜಿಗಳು ಬಂದಿವೆ. ಮಿಶ್ರತಳಿ ದನಗಳ ನಿರ್ವಹಣೆಗೆ ಪ್ರತಿ ಹಸುವಿಗೆ 14 ಸಾವಿರದಂತೆ ಎರಡು ಹಸುಗಳಿಗೆ 28 ಸಾವಿರ ಸಾಲ ಸೌಲಭ್ಯ. ಪ್ರತಿ ಎಮ್ಮೆಗೆ 16 ಸಾವಿರದಂತೆ ಎರಡು ಎಮ್ಮೆಗೆ 32 ಸಾವಿರ, ಕುರಿಗೆ 24 ಸಾವಿರ, 2 ಸಾವಿರ ಕೋಳಿಗಳಿಗೆ 1.60 ಲಕ್ಷ ರೂ. ಸಾಲ ಶೇ.4 ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ ಎಂದರು.
ಕುಮಟಾ ತಾಲೂಕಿನಲ್ಲಿ 40 ಸಾವಿರ ಜಾನುವಾರುಗಳಿದ್ದು, ಎಲ್ಲ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ನೀಡುವುದನ್ನು ಈಗಾಗಲೇ ಆರಂಭಿಸಲಾಗಿದೆ. ಎಲ್ಲ ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ವಿನಂತಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ಮಾತನಾಡಿ, ಪೊಲಿಯೋದಲ್ಲಿ ಶೇ.75 ರಷ್ಟು ಸಾಧನೆ ಮಾಡಲಾಗಿದ್ದು, ಹೊಸದಾಗಿ 3 ಕ್ಷಯ ರೋಗಿಗಳನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮಲೇರಿಯಾದಲ್ಲಿ ಶೇ.85 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಬಂಕಿಕೋಡ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಾತಿಯಾಗಿದ್ದು, ಜ.23 ರಂದು ಪಲ್ಸ್ ಪೊಲಿಯೋ ಅಭಿಯಾನ ನಡೆಯಲಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದ ಅವರು, ಕೊವಿಡ್ ಲಸಿಕೆ ನೀಡುವಲ್ಲಿ ಶೇ.103 ರಷ್ಟು ಸಾಧನೆ ಮಾಡಿ ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಎರಡನೆಯ ಡೋಸ್‌ನಲ್ಲಿ ಶೇ.90 ರಷ್ಟು ಗುರಿ ಸಾಧಿಸಲಾಗಿದ್ದು, ಸುಮಾರು 5 ಸಾವಿರ ಜನರು ಎರಡನೆಯ ಲಸಿಕೆ ಪಡೆಯಬೇಕಾಗಿದೆ. ಸೆಕೆಂಡ್ ಡೋಸ್ ಪಡೆಯಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಯುವಕರೇ ಹೆಚ್ಚಾಗಿರುವುದು ಬೇಸರ ತಂದಿದೆ. ಅವರೆಲ್ಲರನ್ನೂ ಮನವೋಲಿಸಿ ಲಸಿಕೆ ನೀಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ನವೆಂಬರ್ ತಿಂಗಳಿನಿoದ ಈವರೆಗೆ 263 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 521 ಜನರಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, ಡಿಸೆಂಬರ್ ತಿಂಗಳಿನಲ್ಲಿ 98 ವರ್ಷದ ವೃದ್ಧ ಹಾಗೂ 75 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರಿಗೂ ಸೂಕ್ತ ಚಿಕಿತ್ಸೆ ನೀಡಿ, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಈವರೆಗೆ 37,002 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರಜ್ಞರ ಹುದ್ದೆ ಖಾಲಿಯಿದ್ದು, ಹೊಸದಾಗಿ ವೈದ್ಯರು ನೇಮಕವಾಗುವರೆಗೆ ನೇತ್ರ ತಪಾಸಣೆ ನಡೆಯುವುದಿಲ್ಲ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ ನಾಯ್ಕ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಆಚಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀ ಶಹಾಪೂರಮಠ, ವಲಯಾರಣ್ಯಾಧಿಕಾರಿ ಪ್ರವೀಣ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಣೇಶ ಪಟಗಾರ, ಲೊಕೊಪಯೋಗಿ ಇಲಾಖೆ ಅಭಿಯಂತರ ಸುದರ್ಶನ ಹೊನ್ನಾವರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ ಗೌಡ ಸೇರಿದಂತೆ ಮತ್ತಿತರರು ತಮ್ಮ ಇಲಾಖಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ತಾ.ಪಂ ಆಡಳಿತಾಧಿಕಾರಿ ಈಶ್ವರ ನಾಯ್ಕ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ ಇದ್ದರು.

error: