April 29, 2024

Bhavana Tv

Its Your Channel

ಆರ್ಥಿಕ ಸಂಸ್ಥೆಗಳು ಕೇವಲ ಲಾಭ ಮಾಡುವ ಉದ್ದೇಶದಿಂದ ಹುಟ್ಟದೇ ಸಮಾಜ ಸೇವೆಯನ್ನೂ ಮಾಡುವಂತಾಗಬೇಕು-ಶಾಸಕ ದಿನಕರ ಶೆಟ್ಟಿ

ಕುಮಟಾ: ಆರ್ಥಿಕ ಸಂಸ್ಥೆಗಳು ಕೇವಲ ಲಾಭ ಮಾಡುವ ಉದ್ದೇಶದಿಂದ ಹುಟ್ಟದೇ ಸಮಾಜ ಸೇವೆಯನ್ನೂ ಮಾಡುವಂತಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಅವರು ಹೇಳಿದರು.

ಲೋಕೇಶ್ವರ ಸಭಾಭವನ, ಕಾಗಾಲದಲ್ಲಿ ನಡೆದ ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. ಕುಮಟಾ ಹಾಗೂ ಸುಲಭ ಸೇವಾ ಸಂಸ್ಥೆ (ರಿ), ಕುಮಟಾದ ನೂತನ ಶಾಖೆಯ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಲಭ ಸೇವಾ ಸಂಸ್ಥೆಯು ಮುಖ್ಯವಾಗಿ ಸಮಾಜಕ್ಕೆ ಸೇವೆ ಮಾಡುವ ನಿಟ್ಟಿನಲ್ಲಿಯೇ ಹುಟ್ಟಿದೆ. ಬ್ಯಾಂಕ್‌ಗಳು ಕೇವಲ ಶ್ರೀಮಂತರಿಗೆ ಮಾತ್ರ ಉಪಯೋಗವಾಗದೇ, ಬಡ ಜನರಿಗೂ ಬ್ಯಾಂಕ್ ಸೌಲಭ್ಯ ಸಿಗುವಂತಾಗಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಕರಾವಳಿ ಮುಂಜಾವು ದಿನ ಪತ್ರಿಕೆಯ ಪ್ರಧಾನ ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ, ಸಹಕಾರಿ ಎಂಬ ಶಬ್ದದಲ್ಲಿಯೇ ಮಹಾನ್ ಶಕ್ತಿಯಿದೆ. ಸಹಕಾರ ಎಂಬುದು ದೇಶವನ್ನು ಕಟ್ಟುವಂತಹ ಎಲ್ಲರೂ ಒಟ್ಟಾಗಿ ಬಾಳುವಂತಹ, ಯಾವುದೇ ಮೇಲು-ಕೀಳು ಎಂಬ ಭಾವನೆಯಿಲ್ಲದೇ ಬದುಕುವ ಉದ್ದೇಶವಾಗಿದೆ. ಸಹಕಾರಿ ಸಂಘಗಳು ಸರಕಾರ ಮಾಡುವಂತಹ ಕೆಲಸವನ್ನು ನಿರ್ವಹಿಸುತ್ತಿದೆ. ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಿದ್ದಲ್ಲಿ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದ ಅವರು ಸುಲಭ ಸೌಹಾರ್ದವು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ತುಳಸಿ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ. ಆದರೆ ಅದೇ ಖುಷಿಯೇ ಬದುಕು ನೀಡುವುದಿಲ್ಲ. ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಯೇನು ಹುಟ್ಟಿದ್ದರೆ ಅದು ಹಾಲಕ್ಕಿ ಸಮಾಜದಿಂದಲೇ. ಹೀಗಾಗಿ ಈ ಸಮಾಜಕ್ಕೆ ಕೇವಲ ಪ್ರಶಸ್ತಿ ಜೀವನ ನೀಡುವುದಿಲ್ಲ. ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದಲ್ಲಿ ಮಾತ್ರ ಆ ಸಮಾಜಕ್ಕೆ ನ್ಯಾಯವನ್ನು ಕೊಡಿಸಿದಂತಾಗುತ್ತದೆ ಎಂದರು.
ವಿಶೇಷ ಸನ್ಮಾನಿತರಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ, ಆಶಾ ಕಾರ್ಯಕರ್ತೆಯರು, ಸ್ವ ಉದ್ಯೋಗಿಗಳು, ಟೆಂಪೋ ಚಾಲಕರ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಬಾಡ ಗ್ರಾ.ಂ ಪಂ ಅಧ್ಯಕ್ಷ ದಾವೂದ ಬಿಕ್ಬಾ, ಕಾಗಾಲ ಗ್ರಾ.ಪಂ.ಅಧ್ಯಕ್ಷ ಶಶಿಕಾಂತ ನಾಯ್ಕ, ನ್ಯಾಯವಾದಿ ಆರ್.ಜಿ.ನಾಯ್ಕ, ಮಾಜಿ ಜಿ.ಪಂ.ಸದಸ್ಯ ರತ್ನಾಕರ ನಾಯ್ಕ, ನಿವೃತ್ತ ಮುಖ್ಯಾಧ್ಯಾಪಕ ಜಿ.ಕೆ.ಪಟಗಾರ, ಸುಲಭ ಸಂಸ್ಥೆಯ ಪ್ರೇರಕ ನಾಗೇಶ ನಾರಾಯಣ ನಾಯ್ಕ, ಹಾಲಕ್ಕಿ ಸಮುದಾಯದ ಯಜಮಾನ ನಾಗೇಶ ಗೌಡ ಹಾಗೂ ಇತರರು ಶುಭ ಹಾರೈಸಿದರು.
ವ್ಯವಸ್ಥಾಪಕ ನಿರ್ದೇಶಕರು, ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ಹಾಗೂ ಸುಲಭ ಸೇವಾ ಸಂಸ್ಥೆಯ ಅಧ್ಯಕ್ಷರಾದ ದಿವಾಕರ ಅಘನಾಶಿನಿ ಸ್ವಾಗತಿಸಿದರು. ಸುದೀಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾ ವೆಂಕಟೇಶ ನಾಯ್ಕ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: