April 30, 2024

Bhavana Tv

Its Your Channel

ಅಕಾಡೆಮಿ ಅಧ್ಯಕ್ಷರ ವೀರಬಾಹುಕ, ಮೋಹನರ ಚಂದ್ರಮತಿ!

ಸಿದ್ದಾಪುರ: ಸತ್ಯವನ್ನೇ ಪ್ರತಿಪಾದಿಸುವ ರಾಜಾ ಸತ್ಯ ಹರಿಶ್ಚಂದ್ರ ಯಕ್ಷಗಾನ ಸತ್ಯಕ್ಕೆ ಸಾವಿಲ್ಲ ಎಂಬುದನ್ನು ಪ್ರತಿಪಾದಿಸುತ್ತ ಪ್ರೇಕ್ಷಕರಲ್ಲಿ ಸತ್ಯದ ಅರಿವನ್ನು ಬಿತ್ತಿ ಬೆಳಗಿಸಿತು.

ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿಯ ರಾತ್ರಿ ಜಾನಕೈ ತಿಮ್ಮಪ್ಪ ಹೆಗಡೆ ಅವರ ವಿರಚಿತ ಸತ್ಯಪ್ರತಿಪಾದನೆಯ ಕಥಾನಕ ಸತ್ಯ ಹರಿಶ್ಚಂದ್ರ ಬಿಚ್ಚುಕೊಂಡಿತು. ಇದರ ವಿಶೇಷತೆ ಎಂದರೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ವೀರ ಬಾಹುಕನಾಗಿ, ಸೆಲ್ಕೋ ಇಂಡಿಯಾದ ಸಿಇಓ, ಪ್ರಸಿದ್ಧ ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಅವರು ಚಂದ್ರಮತಿಯಾಗಿ ಗಮನ ಸೆಳೆದರು.
ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಿದರು. ಮುಮ್ಮೇಳದಲ್ಲಿ ಕಲಾವಿದರಾದ ವಿನಾಯಕ ಹೆಗಡೆ ಕಲಗದ್ದೆ ಸತ್ಯ ಹರಿಶ್ಚಂದ್ರನಾಗಿ, ಡಾ.ಜಿ.ಎಲ್.ಹೆಗಡೆ ಕುಮಟಾ ವೀರ ಬಾಹುಕನಾಗಿ, ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಚಂದ್ರಮತಿಯಾಗಿ, ಸಂಜಯಕುಮಾರ ಬಿಳಿಯೂರು ವಿಶ್ವಾಮಿತ್ರನಾಗಿ ಗಮನ ಸೆಳೆದರು. ನಕ್ಷತ್ರಿಕನಾಗಿ ನಾಗೇಂದ್ರ ಮುರೂರು, ಬ್ರಾಹ್ಮಣನಾಗಿ ಮಹಾಬಲೇಶ್ವರ ಇಟಗಿ, ದೇವೇಂದ್ರನಾಗಿ ವೆಂಕಟೇಶ ಬೊಗ್ರಿಮಕ್ಕಿ, ಮಾತಂಗಕನ್ಯೆಯಾಗಿ ಅವಿನಾಶ ಕೊಪ್ಪ, ಲೋಹಿತಾಶ್ವನಾಗಿ ತುಳಸಿ ಹೆಗಡೆ ಶಿರಸಿ ಕಥಾನಕ ಕಟ್ಟಿಕೊಟ್ಟರು. ಹಳೆ ಬೇರು ಹೊಸ ಚಿಗುರಿನ ಮಿಳಿತ, ವೃತ್ತಿ, ಪ್ರವೃತ್ತಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನಕ್ಕೆ ಪ್ರಸಾದನವನ್ನು ಎಂ.ಆರ್.ನಾಯ್ಕ ಕರ್ಸೇಬೈಲ್ ಮತ್ತು ಅವರ ಬಳಗ ನೀಡಿತು.
ಇದಕ್ಕೂ ಮುನ್ನ ವಿದ್ಯಾ ವಾಚಸ್ಪತಿ ಪದವಿ ಪಡೆದ ವಿ.ಕೆರೇಕೈ ಉಮಾಕಾಂತ ಭಟ್ ಅವರನ್ನು ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ವಿನಾಯಕ ಹೆಗಡೆ ಕಲಗದ್ದೆ ಸಮ್ಮಾನಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಕೆರೇಕೈ, ಇದನ್ನು ನಾಟ್ಯ ವಿನಾಯಕನ ಪ್ರಸಾದ ಎಂದು ಸ್ವೀಕರಿಸುತ್ತೇನೆ ಎಂದರು.
ಈ ವೇಳೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಯಕ್ಷ ರಾತ್ರಿಗೆ ಚಾಲನೆ ನೀಡಿದರು. ಪ್ರಸಿದ್ಧ ಜೋತಿಷಿ ಮೋಹನಕುಮಾರ ಜೈನ್, ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪಾಲ್ಗೊಂಡಿದ್ದರು.

error: