April 27, 2024

Bhavana Tv

Its Your Channel

ಯಲ್ಲಾಪುರ ತಾಲೂಕಿನ ಕಿರವತ್ತಿಯ ಕಾರಕುಂಡಿಯಲ್ಲಿ ದಸರಾ ಹಬ್ಬದ ಅಂತಿಮ ಚರಣದ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ ತಾಲೂಕಿನ ಕಿರವತ್ತಿ ಪಂಚಾಯತ ಕಾರಕುಂಡಿ ಎನ್ನುವ ಪೂರ್ತಿಯಾಗಿ ದನಗರ ಗೌಳಿ ಸಮಾಜದ ಜನರು ವಾಸಿಸುವ ವಾಡೆ. ಸುಮಾರು ೫೨ ಮನೆಗಳು, ೪೦೦ ಕ್ಕೂ ಹೆಚ್ಚು ಜನರು ಪುಟ್ಟ ಗ್ರಾಮವದು. ಈ ವರ್ಷದ ದಸರಾ ಹಬ್ಬದ ಅಂತಿಮ ಚರಣದ ಕಾರ್ಯಕ್ರಮ ಅಲ್ಲಿ ನಡೆಯುತ್ತದೆ. ಇಡೀ ಊರಿನ ಜನ ಸಾಂಪ್ರದಾಯಕ ವೇಷಭೂಷಣ ತೊಟ್ಟು ಗ್ರಾಮದ ಚೌಕಿಯಲ್ಲಿ ಜಾತ್ರೆಗೆ ಸೇರುವಂತೆ ಸೇರಿದ್ದರು. ಅಲ್ಲಿ ಕಂಡ ಕೆಲವು ವಿಶಿಷ್ಟವಾಗಿ ಆಚರಿಸುವುದನ್ನು ಇಲ್ಲಿ ವಿವರಿಸಿದ್ದೇನೆ. ಗ್ರಾಮದ ಪ್ರಮುಖ ಬಜ್ಜು ಪಿಂಗಳೆ, ಈ ಹಬ್ಬದ ಅನೇಕ ವಿಶೇಷತೆಗಳನ್ನು ವಿವರಿಸಿದರು. ಇದೊಂದು ಇಡೀ ಗ್ರಾಮ ಸಾಮೂಹಿಕವಾಗಿ ಒಂದು ಕಡೆ ಸೇರಿ ಆಚರಿಸುವ ಉತ್ಸವವಾಗಿದೆ. ಆ ಗ್ರಾಮದ ಎಲ್ಲರ ಮನೆಯ ದೇವರುಗಳನ್ನು ಕಂಬಳಿ ಹಾಸಿ, ಅದರ ಮಧ್ಯ ಅಕ್ಕಿಯ ರಾಶಿಯನ್ನು ಪೇರಿಸಿ, ಮಧ್ಯದಲ್ಲಿ ತೆಂಗಿನಕಾಯಿ ಇಟ್ಟು ಸುತ್ತಲೂ ಎಲೆ ಹೂಗಳಿಂದ ಶೃಂಗರಿಸಿ, ಒಂದರ ಪಕ್ಕ ಒಂದು ಪ್ರತಿಷ್ಠಾಪಿಸಲಾಗುತ್ತದೆ. ಸಾಮೂಹಿಕ ಪ್ರಾರ್ಥನೆ ಆಗುತ್ತದೆ. ಇಡೀ ಗ್ರಾಮದ, ಗ್ರಾಮವಾಸಿಗಳ, ಸಮಾಜದ ಒಳಿತಿಗಾಗಿ ಗೌಳಿಗರ ಧಾರ್ಮಿಕ ಮುಖಂಡ ಉಚ್ಛಸ್ವರದಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಉಳಿದ ಎಲ್ಲರೂ ಸಾಮೂಹಿಕವಾಗಿ ಈ ಕ್ರೀಯೆಯಲ್ಲಿ ಭಾಗವಹಿಸುತ್ತಾರೆ. ನಂತರ ಎಲ್ಲರೂ ಎಲ್ಲ ದೇವರ ಎದುರು ಸರದಿಯಲ್ಲಿ ಹೋಗಿ ಶಿರಬಾಗಿ ನಮಸ್ಕರಿಸುತ್ತಾರೆ. ಇದೇ ಸಂದರ್ಭದಲ್ಲಿ ಅನೇಕರು ತಮ್ಮ ವಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ದೇವರ ಎದುರಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ಹಿಂದಿನ ವರ್ಷ ಬೇಡಿಕೊಂಡ ಹರಕೆಗಳನ್ನು ಈ ವರ್ಷ ಅಲ್ಲಿ ಪೂರೈಸುತ್ತಾರೆ. ಕೆಲವು ಹೆಂಗಸರಿಗೆ ಮೈಮೇಲೆ ದೇವರು ಬರುತ್ತದೆ. ಉಳಿದ ಹೆಂಗಸರು ಅವರನ್ನು ಸುಧಾರಿಸುತ್ತಾರೆ. ಆ ಗ್ರಾಮಕ್ಕೆ ಸಂಬAಧಿಸಿದವರು ಎಲ್ಲಿಯೇ ಕೆಲಸದಲ್ಲಿ ಇದ್ದರೂ ಈ ಸಂದರ್ಭದಲ್ಲಿ ಊರಿಗೆ ಬಂದೇ ಬರುತ್ತಾರೆ. ಗೌಳಿಗರ ವಿಶೇಷ ಉಡುಪಿನ (ಬಿಳಿ ನಿಲುವಂಗಿ, ಸೊಂಟಕ್ಕೆ ರುಮಾಲು ಹಾಗೂ ಪೇಠ) ನೃತ್ಯ ಹಾಗೂ ಅದಕ್ಕೆ ತಕ್ಕಂತೆ ಡೋಲು, ಗುಮ್ಮಟೆ ಪಾಂಗುಗಳ ಸದ್ದು ನೋಡುಗರ ಮೈ

ನವಿರೇಳಿಸುವಂತಹದ್ದಾಗಿರುತ್ತದೆ. ಇನ್ನೂ ಅನೇಕ ರೀತಿಯ ಧಾರ್ಮಿಕ ಸಂಪ್ರದಾಯಗಳು ಅಲ್ಲಿ ನಡೆಯುತ್ತವೆ. ಅಂತಿಮವಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದ ಪ್ರಸಾದವನ್ನು ಒಂದು ಕಡೆ ಸೇರಿಸಿ, ಸಹಭೋಜನದಂತೆ ಸ್ವೀಕರಿಸುತ್ತಾರೆ. ಬಡ ಗೌಳಿಗರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದ್ದರೂ, ಕಾಡಿನ ನಡುವೆ ವಾಸಿಸುತ್ತಿರುವ ಅವರ ಒಗ್ಗಟ್ಟು, ಧಾರ್ಮಿಕ ಶ್ರೀಮಂತಿಕೆಗೆ ನಾವು ತಲೆದೂಗಲೇಬೇಕು. ಇತ್ತೀಚಿನ ವರ್ಷಗಳಲ್ಲಿ ಗೌಳಿಗರ ವೇಷ,ಭೂಷಣ,ಉದ್ಯೋಗ, ವ್ಯವಹಾರಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ, ಯಾವುದೇ ವಿಶೇಷ ಬದಲಾವಣೆಗಳಿಲ್ಲದೇ, ನೂರಾರು ವರ್ಷಗಳಿಂದ ಸಂಪ್ರದಾಯಬಧ್ದವಾಗಿ ಆಚರಿಸಿಕೊಂಡು ಬರುತ್ತಿರುವ ಅವರ ಧಾರ್ಮಿಕ ಆಚರಣೆಗಳು ಹಾಗೂ ಈಗಿನ ಯುವ ಪೀಳಿಗೆ ತಾವೂ ಸಹ ಅದೇ ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಈ ಉತ್ಸವಗಳಲ್ಲಿ ಭಾಗವಹಿಸುವ ಪರಿ ಅನುಕರಣೀಯವಾಗಿದೆ. ಇದರ ನಡುವೆಯೂ, ದಿನನಿತ್ಯ ಓಡಾಡುವ ಅವರದೇ ಗ್ರಾಮದ ಅವರದೇ ಓಣಿಯಲ್ಲಿ ಅತ್ತಂದಿತ್ತ ಸಂಭ್ರಮದಲ್ಲಿ ಓಡಾಡುತ್ತಿದ್ದ, ಒಂದೇ ಓರಿಗೆಯ ಅನೇಕ ಗೌಳಿ ಹೆಣ್ಣು ಮಕ್ಕಳ ಡ್ರೆಸ್ ಕಲರ್ ಕಾಂಬಿನೇಷನ ಕೂಡ ನೋಡುಗರ ಗಮನಸೆಳೆಯುವದನ್ನು ಎಳೆಯಾಗಿ ಮಂಗಲಾ ರಾಮು ನಾಯ್ಕ ವಿವರಿಸಿ, ಇಂತಹ ಸಂಪ್ರದಾಯಬದ್ಧ ಆಚರಣೆ ಮುಂದುವರಿಯುವುದು ಅವಶ್ಯವಿದೆ ಎಂದು ತಿಳಿಸಿದರು.

error: