April 30, 2024

Bhavana Tv

Its Your Channel

ತುಂಬಿ ಹರಿಯುತ್ತಿರುವ ಚಿತ್ರಾವತಿ ನದಿ: ಜಿಲ್ಲಾಧಿಕಾರಿ ಆರ್.ಲತಾ ಭೇಟಿ

ಬಾಗೇಪಲ್ಲಿ: ತಾಲ್ಲೂಕಿನ ಚಿತ್ರಾವತಿ ಮೇಲುಸೇತುವೆ ಇಕ್ಕೆಲಗಳಲ್ಲಿ ಸೇರಿದಂತೆ ಕೆರೆ,ಕಟ್ಟೆ, ರಾಜಕಾಲುವೆಗಳನ್ನು ಯಾರೇ ಪ್ರಭಾವಿ ವ್ಯಕ್ತಿಗಳಾಗಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಹಾಗೂ ತೆರವು ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಭರವಸೆ ನೀಡಿದರು.

ತಾಲ್ಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ಹಾಗೂ ಸಂತೇಮೈದಾನದ, ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿನ ಚಿತ್ರಾವತಿ ಮೇಲುಸೇತುವೆಗಳಿಗೆ ಹಾಗೂ ಗಂಜಿ ಕೇಂದ್ರಕ್ಕೆ ಭೇಟಿ ಮಾಡಿ ಸ್ಥಳಕ್ಕೆ ಶನಿವಾರ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು.

ನAತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಾದ್ಯಂತ ಅತ್ಯಧಿಕ ಮಳೆ ಆಗಿರುವ ವರದಿ ಬಂದಿದೆ. ಇದರಿಂದ ಚಿತ್ರಾವತಿ ಅಣೆಕಟ್ಟಿನಲ್ಲಿ, ೨ ಮೇಲುಸೇತುವೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಚಿತ್ರಾವತಿ ಮೇಲುಸೇತುವೆಗಳ ಇಕ್ಕೆಲಗಳಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿರುವ ವರದಿಯಾಗಿದೆ. ಎಷ್ಟೇ ಪ್ರಭಾವಶಾಲಿಗಳು, ರಾಜಕೀಯ ವ್ಯಕ್ತಿಗಳು ಇದ್ದರೂ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹಾಗೂ ಅಕ್ರಮವಾಗಿ ಒತ್ತುವರಿ ತೆರವು ಗೊಳಿಸಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ರಾಗಿ ೩೩ ಸಾವಿರ ಹೆಕ್ಟರ್, ೩೦ ಸಾವಿರ ಹೆಕ್ಟರ್ ಮುಸಕಿನ ಜೋಳ ಹಾನಿ ಆಗಿದೆ. ಜಂಟಿ ಸರ್ವೆ ಮಾಡುವಂತೆ ಜಿಲ್ಲಾ, ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ಹೆಚ್ಚಾಗಿರುವುದರಿಂದ ರೈತರ ಬೆಳೆಗಳು ನಾಶ ಆಗಿದೆ. ೨ ಹಾಗೂ ೩ ದಿನಗಳಲ್ಲಿ ಮಳೆ ಮತ್ತೆ ಹೆಚ್ಚಾಗುವ ಸಾಧ್ಯತೆಯೂ ಇರುವುದರಿಂದ, ಇದುವರಿಗೂ ನಿಖರವಾದ ಬೆಳೆ ನಷ್ಟಗಳ ಮಾಹಿತಿ ಪಡೆಯಲು ಆಗಿಲ್ಲ ಎಂದು ತಿಳಿಸಿದರು.

ಮಳೆ ಕಡಿಮೆ ಆದ ನಂತರ ಅಧಿಕಾರಿಗಳಿಂದ ಸರ್ವೆ ಮಾಡಿಸಿ ಮಾಹಿತಿಯಂತೆ ರೈತರಿಗೆ ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಹಳೇ, ಶಿಥಿಲಾವ್ಯಸ್ಥೆ ಇರುವ, ಗುಡಿಸಲು ಮನೆಗಳಲ್ಲಿ ನೀರು ಸಂಗ್ರಹ ಆಗಿ ತೇವಾಂಶ ಹೆಚ್ಚಾಗಿ ಕಟ್ಟಡಗಳು ಕುಸಿಯುವ ಸಂಭವ ಇದ್ದು, ಜನರು ಎಚ್ಚರಿಂದ ಇರಬೇಕು. ಜಾನುವಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕೆರೆ, ಕಾಲುವೆ, ಕಟ್ಟೆ, ಸೇತುವೆಗಳ ಕಡೆ ಜನರು ಹೋಗದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಚಿತ್ರಾವತಿ ಅಣೆಕಟ್ಟಿನಲ್ಲಿ,ಮೇಲುಸೇತುವೆಗಳಲ್ಲಿ ಹರಿಯುತ್ತಿರುವ ನೀರಿನ ಒಳಹರಿವು, ಸೂಕ್ತ ಭದ್ರತೆಗಳ ಬಗ್ಗೆ ಹಾಗೂ ಗಂಜಿ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಆರ್.ಲತಾ, ತಹಶೀಲ್ದಾರ್ ಡಿ.ಎ.ದಿವಾಕರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್.ರಾಮಲಿಂಗಾರೆಡ್ಡಿ ರವರಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ
ತಹಶೀಲ್ದಾರ್ ಜಿಲ್ಲಾ ಉಪವಿಭಾಗಾಧಿಕಾರಿ ರಘುನಂದನ್, ಡಿ.ಎ.ದಿವಾಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ, ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೆ.ಎಸ್.ರಾಮಲಿಂಗಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್, ಕೃಷಿ ಅಧಿಕಾರಿ ಕೆ.ಸಿ.ಮಂಜುನಾಥ್, ರೇಷ್ಮೆ ಅಧಿಕಾರಿ ಡಾ.ಚಿನ್ನಕೈವಾರಮಯ್ಯ, ತಾಲ್ಲೂಕು ಸಾಕ್ಷರತಾ ಅಧಿಕಾರಿ ಎನ್.ಶಿವಪ್ಪ ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: