May 2, 2024

Bhavana Tv

Its Your Channel

ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಲ್ಲಿ `NSS’ ಘಟಕ ಕಡ್ಡಾಯ : ಸಚಿವ ನಾರಾಯಣಗೌಡ

ಬೆಂಗಳೂರು, : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ಲ ಖಾಸಗಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಎನ್‍ಎಸ್‍ಎಸ್ ಘಟಕವನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಆರ್ ನಾರಾಯಣಗೌಡ ಹೇಳಿದರು.

ಗುರುವಾರ ವಿಕಾಸ ಸೌಧದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ.ನಾರಾಯಣಗೌಡ ಮಾತನಾಡಿದರು.

2021-22ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಸ್ವಾತಂತ್ರ್ಯ ಪೂರ್ವದ ಹೋರಾಟ, ಸ್ವಾತಂತ್ರ್ಯದ ನಂತರದ ಸಾಧನೆಗಳು, ಮುಂದಿನ ಗುರಿಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮದ ಕ್ರಿಯಾ ಯೋಜನೆ ರೂಪಿಸಿ ಆಕರ್ಷಕವಾಗಿ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಈ ವೇಳೆ ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ 13 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೂ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಲಾಗುವುದು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಗಣರಾಜ್ಯೋತ್ಸವ ಪೂರ್ವಭಾವಿ ಪಥಸಂಚಲನದ ಆಯ್ಕೆ ಶಿಬಿರ ಮತ್ತು ಪಥಸಂಚಲನ ತರಬೇತಿ ಶಿಬಿರ ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು.

ಮಂಗಳೂರು ವಿವಿ, ಗುಲ್ಬರ್ಗ ವಿವಿ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಬೆಂಗಳೂರು, ಕುವೆಂಪು ವಿವಿ ಶಿವಮೊಗ್ಗ, ಕರ್ನಾಟಕ ವಿವಿ ಧಾರವಾಡ, ಕರ್ನಾಟಕ ರಾಜ್ಯ ಕಾನೂನು ವಿವಿ ಹುಬ್ಬಳ್ಳಿ, ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿವಿ ಬೀದರ್, ಬೆಂಗಳೂರು ಕೇಂದ್ರ ವಿವಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರ ಮತ್ತು ಮಂಡ್ಯ ವಿಶ್ವ ವಿದ್ಯಾಲಯದಲ್ಲಿ ಭಾವೈಕ್ಯತಾ ಶಿಬಿರ ಆಯೋಜಿಸಲು ತೀರ್ಮಾನಿಸಲಾಯಿತು.

2021-22 ನೇ ಸಾಲಿನಲ್ಲಿ ಯುವಜನೋತ್ಸವ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ರಾಜ್ಯಮಟ್ಟದ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

source: Oneindia

error: