March 17, 2024

Bhavana Tv

Its Your Channel

ನಮ್ಮೂರಿನಲ್ಲಿ ಕರೊನಾ ಶಂಕಿತರಿಗೆ ಆಶ್ರಯಬೇಡ ಎಂದ ಸಾರ್ವಜನಿಕರು

ಕುಮಟಾ ; ನಮ್ಮೂರಿನಲ್ಲಿ ಕರೊನಾ ಶಂಕಿತರಿಗೆ ಆಶ್ರಯಬೇಡ ಎಂದು ಹೆಗಡೆಯ ತಣ್ಣೀರಕುಳಿಯ ಮೊರಾರ್ಜಿ ವಸತಿ ಶಾಲೆಗೆ ಮಂಚ ಹಾಗೂ ಹಾಸಿಗೆ ಹೊತ್ತೊಯ್ಯುತ್ತಿದ್ದ ವಾಹನಗಳನ್ನು ಹೆಗಡೆಯ ಪಂಚಾಯಿತಿ ಎದುರು ತಡೆದು ಸಾರ್ವಜನಿಕರು ಸೋಮವಾರ ಸಾಯಂಕಾಲ ಹಟಾತ್ ಪ್ರತಿಭಟನೆ ನಡೆಸಿದರು.
ತಾಲೂಕಾಡಳಿತ ಮೊರಾರ್ಜಿ ವಸತಿ ಶಾಲೆಯಲ್ಲಿ ಕರೊನಾ ಶಂಕಿತರನ್ನು ತಂದು ಶುಶ್ರೂಷೆ ಮಾಡಲು ಸಿದ್ಧತೆ ನಡೆಸಿದೆ. ಅಲ್ಲಿಗೆ ಕಾಯಿಲೆ ಪೀಡಿತರಾಗಿ ಬರುವವರು ಕರೊನಾ ಶಂಕಿತರೋ, ಸೋಂಕಿತರೋ ತಿಳಿದಿರುವದಿಲ್ಲ. ಎಲ್ಲಿಯೋ ಇರುವ ಮಾರಿಯನ್ನು ಮನೆಗೆ ಹೊಕ್ಕಿಸಿಕೊಂಡಂತೆ ಕರೊನಾ ಸೋಂಕು ನಮ್ಮ ಗ್ರಾಮಕ್ಕೂ ಹಬ್ಬಿದರೇನು ಗತಿ ಎಂದು ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದರು.


ಈ ವೇಳೆ ತಾಲೂಕು ಆರೋಗ್ಯಾಽಕಾರಿ ಡಾ. ಆಜ್ಞಾ ನಾಯಕ, ಸಿಪಿಐ ಪರಮೇಶ್ವರ ಗುನಗಾ, ಪಿಎಸ್​ಐ ಆನಂದ ಮೂರ್ತಿ, ಪಿಎಸ್​ಐ ಸುಧಾ ಹರಿಕಂತ್ರ ಹಾಗೂ ಸಿಬ್ಬಂದಿಗಳು ಬಂದು ಸಾರ್ವಜನಿಕರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಶಂಕಿತರಿಗೆ ಪ್ರತ್ಯೇಕ ವಾರ್ಡಿನ ವ್ಯವಸ್ಥೆ ಇದೆ. ಒಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತರು ಆಗಮಿಸಿದಲ್ಲಿ ಸೂಕ್ತ ತಪಾಸಣೆ ಆಗುವವರೆಗೆ ಪ್ರತ್ಯೇಕ ವಾರ್ಡುಗಳ ವ್ಯವಸ್ಥೆ ಅನಿವಾರ್ಯವಾಗಿದ್ದರಿಂದ ಜಿಲ್ಲಾಡಳಿತದ ನಿರ್ದೇಶನದಂತೆ ಮೊರಾರ್ಜಿ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಸುತ್ತಮುತ್ತಲೂ ಸನಿಹದಲ್ಲಿ ಜನವಸತಿಯೂ ಇಲ್ಲ. ಇಷ್ಟಕ್ಕೂ ಕರೊನಾ ವೈರಾಣು ಗಾಳಿಯಲ್ಲಿ ಹರಡುವಂಥದ್ದಲ್ಲ ಎಂದು ವಿವರಿಸಿದರು.
ಆದರೂ ಜನರು ಒಪ್ಪದಿದ್ದಾಗ ಪೊಲೀಸರು ಜನರನ್ನು ಗದರಿಸಿ ಚದುರಿಸಿದರಲ್ಲದೇ ಮಂಚ ಹಾಗೂ ಹಾಸಿಗೆ ಸಾಗಾಟಕ್ಕೆ ಅನುವು ಮಾಡಿಕೊಟ್ಟರು. ಘಟನೆಯ ಕುರಿತು ಉಪವಿಭಾಗಾಧಿಕಾರಿಗಳಿಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಉಪವಿಭಾಗಾಽಕಾರಿ ಅಜಿತ್ ಎಂ.ರೈ ಅವರು, ಕರೊನಾ ಶಂಕಿತರಿಗೆ ಪ್ರತ್ಯೇಕವಾರ್ಡುಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕಾದ್ದು ಸರ್ಕಾರದ ನಿರ್ಧಾರವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು. ಹೆಗಡೆಯಲ್ಲಿ ಅನಗತ್ಯವಾಗಿ ಪ್ರತಿಭಟನೆ ಮಾಡಿದಂತಾಗಿದೆ. ಕುಮಟಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಶಂಕಿತರು ಕಂಡುಬಂದಲ್ಲಿ ತಾತ್ಕಾಲಿಕ ವ್ಯವಸ್ಥೆಗಾಗಿ ಹೆಗಡೆ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಶಂಕಿತರಲ್ಲಿ ಸೋಂಕು ದೃಢಪಟ್ಟಲ್ಲಿ ಬೇರೆಡೆ ಸ್ಥಳಾಂತರಿಸಬೇಕಾಗುತ್ತದೆ. ಜನರು ವಿನಾಕಾರಣ ಭಯ ಪರುವುದ ಬೇಡ. ನಾಳೆ ಪುನಃ ನಮ್ಮ ಕಾರ್ಯದಲ್ಲಿ ತಡೆಯುಂಟುಮಾಡಿದರೆ ಕಾನೂನು ಕ್ರಮಕ್ಕೂ ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

error: