April 25, 2024

Bhavana Tv

Its Your Channel

ಆಲೆಮನೆ ಬೆಲ್ಲದ ಉಂಡೆಗೂ ಕೊರೋನಾ ವಕ್ರ ದೃಷ್ಟಿ

ಭಟ್ಕಳ: ತಾಲೂಕಿನ ಬೆಳಕೆ ಪಂಚಾಯತಿ ವ್ಯಾಪ್ತಿಯ ಕಾನಮದ್ಲು ಎಂಬ ಗ್ರಾಮದ ಸುತ್ತಮುತ್ತ ಆಲೆಮನೆ ಹಬ್ಬ ಶುರುವಾಗಿದ್ದು, ಶ್ರಮಪಟ್ಟು ತಯಾರಿಸಲಾಗುವ ಬೆಲ್ಲದ ಉಂಡೆಗಳನ್ನು ಈ ಕೊರೋನಾ ಕಂಟಕದ ನಡುವೆ ಮಾರಾಟ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಕರ್ನಾಟಕದ ಹಳ್ಳಿಗಳಲ್ಲಿ ಇನ್ನು ತನಕ ಜನಪದವಾಗಿ ಜೀವನ ನಡೆಸುವ ಜನರಿದ್ದು, ಹಲವಾರು ಜನಪದ ಉದ್ಯೋಗಗಳಿವೆ. ಇದೇ ಜನಪದ ಜೀವನದಲ್ಲಿ ಹಳ್ಳಿಗಳಲ್ಲಿ ಕಬ್ಬು ಬೆಳೆಯುವುದು ಹಾಗೂ ಅದನ್ನು ಕಡಿದು ಆಲೆಯಾಡುವುದು, ಅದರಿಂದ ಬಂದ ಬೆಲ್ಲದಲ್ಲಿ ಮನೆಬಳಕೆಗೆ ಬೇಕಾದಷ್ಟು ಇಟ್ಟುಕೊಂಡು, ಉಳಿದದ್ದನ್ನು ಮಾರುವುದು ಕೂಡ ಉದ್ಯೋಗವಾಗಿದೆ.

ಈ ಆಲೆಮನೆ ಎನ್ನುವುದು ಒಂದು ಸಂಪ್ರದಾಯದAತೆ ನಡೆದುಕೊಂಡು ಬರುತ್ತಿದ್ದು, ಊರಿಂದ ಊರಿಗೆ ಕಬ್ಬು ಬೆಳೆಗಾರರು ನಡೆಸಿಕೊಂಡು ಹೋಗುತ್ತಿದ್ದಾರೆ. ಕಬ್ಬು ಕಟಾವಿಗೆ ಬಂದ ಮೇಲೆ ಅದನ್ನು ಕಡಿದು ಆಲೆಮನೆಯಲ್ಲಿ ಕಬ್ಬಿ ರಸ ತೆಗೆದು ಬೆಲ್ಲದ ಉಂಡೆ ಮಾಡುತ್ತಾರೆ. ಆದರೆ ಸದ್ಯ ದೇಶಕ್ಕೆ ದೇಶವೇ ಕೋರೋನಾ ಸಾಂಕ್ರಾಮಿಕದಿAದ ತತ್ತರಿಸಿ ಹೋಗಿದ್ದು, ಇದರ ಪರಿಣಾಮ ಕಬ್ಬು ಬೆಳೆಗಾರರಿಂದ ಹಿಡಿದು ಆಲೆಮನೆಯ ತನಕ ತಟ್ಟಿದೆ.

ಸಂಕಷ್ಟದಲ್ಲಿ ಆಲೆಮನೆಯವರು: ಜನವರಿ ತಿಂಗಳಿನಿAದ ಜೂನ್ ತನಕ ಕಬ್ಬು ಬೆಳೆಯುವ ಇಲ್ಲಿನ ರೈತಾಪಿ ಜನರು, ಈ ಮಧ್ಯೆ ಕಬ್ಬು ಕಟಾವಿಗೆ ಬಂದ ಮೇಲೆ ಅದನ್ನು ಕತ್ತರಿಸಿ ಸ್ವಚ್ಛಗೊಳಿಸಿ ಮರಗಳ ಮಧ್ಯೆಯಲ್ಲಿ ಆಲೆಮನೆಯನ್ನು ನಿರ್ಮಿಸಿ ಕಬ್ಬಿನ ರಸವನ್ನು ಹಿಂಡಿ ತೆಗೆಯುತ್ತಾರೆ. ತಮ್ಮ ಕಷ್ಟದ ಜೀವನದ ಜೊತೆಗೆ ಆಲೆಮನೆಯನ್ನು ಅತ್ಯಂತ ಶ್ರದ್ಧೆಯಿಂದ ನಡೆಸುತ್ತಿದ್ದು, ಆದರೆ ಈ ವರ್ಷ ಕೊರೋನಾ ಈ ಆಲೆಮನೆಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಖರ್ಚು ಹೆಚ್ಚು, ನಷ್ಟದ ಭಯ: ಇವರು ಕಷ್ಟಪಟ್ಟು ಬೆವರು ಸುರಿಸಿ ಹಗಲು- ರಾತ್ರಿ ಕೆಲಸ ಮಾಡಿ ತಾವು ಕಹಿಯನ್ನು ಅನುಭವಿಸಿ ಜನರಿಗೆ ಸಿಹಿಯನ್ನು ನೀಡುತ್ತಿದ್ದು, ಈ ಕೊರೋನಾದಿಂದಾಗಿ ವ್ಯಾಪಾರ ಮಾಡುವುದು ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಈಗ ಆಲೆಮನೆಯವರು. ಪಕ್ಕದ ಬೈಂದೂರಿನಿAದ ಬೆಲ್ಲ ತಯಾರಿಕೆಯ ಸುಣ್ಣವನ್ನು ಖರೀದಿ ಮಾಡಬೇಕಿದ್ದು, ತಯಾರಿಕೆಯ ಯಂತ್ರದ ಸಾಗಾಟ, ಕಟ್ಟಿಗೆ ಸಾಗಾಟಕ್ಕೆ ರೈತರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಬೇಕಾಗಿದ್ದು, ಪೊಲೀಸರ ಭಯದಲ್ಲಿ ದಿಕ್ಕು ತೋಚದಂತಾಗಿದೆ. ಕಬ್ಬಿನ ಗದ್ದೆಯಲ್ಲಿ ೧೦- ೧೨ ಜನ, ಅವರಿಗೆ ತಿಂಡಿ, ಊಟ ಹಾಗೂ ಕಬ್ಬನ್ನು ಹಿಂಡುವ ಗಾಣದಲ್ಲಿ ೪ ಜನರು ಕೆಲಸ ಮಾಡಲಿದ್ದು, ಇನ್ನು ಒಂದು ದಿನಕ್ಕೆ ೩ ಸಾವಿರ ರೂ. ಖರ್ಚು ಬೀಳಲಿದೆ. ಆದರೆ, ಉತ್ಪನ್ನ ಮಾರಾಟವೇ ಆಗದಿದ್ದರೆ ಖರ್ಚು ನಿಭಾಯಿಸುವುದು ಹೇಗೆ ಎಂಬುದು ತಿಳಿಯದಂತಾಗಿದೆ.

ಕೃಷಿ ಇಲಾಖೆ ಗಮನ ಹರಿಸಲಿ:
ಮೊದಲು ಆಲೆಮನೆ ಆರಂಭದ ಸುದ್ದಿ ಕೇಳಿ ಜನರು ಆಲೆಮನೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಬೆಲ್ಲದ ಉಂಡೆಯನ್ನು ಖರೀದಿ ಮಾಡಿ ಹೋಗುತ್ತಿದ್ದರು. ಕೆಲವು ದಿನಸಿ, ಕಿರಾಣಿ ಅಂಗಡಿಕಾರರು ಸಿಹಿ ಬೆಲ್ಲದ ಉಂಡೆಯನ್ನು ಖರೀದಿ ಮಾಡಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಕಬ್ಬು ಬೆಳೆಗಾರರು ಉತ್ತಮ ರೀತಿಯಲ್ಲಿ ಹಣಗಳಿಸುತ್ತಿದ್ದರು. ಆದರೆ ಎಲ್ಲವೂ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಅಂಗಡಿ, ಮುಂಗಟ್ಟುಗಳೆಲ್ಲ ಬಂದ್ ಆಗಿವೆ. ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕಬ್ಬು ಬೆಳೆಯನ್ನು ಇಲಾಖೆಯೂ ಸ್ವಲ್ಪ ಮುತುವರ್ಜಿ ವಹಿಸಿ ಅವರ ಬೆಳೆಯ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂಬುದು ರೈತರ ಮನವಿಯಾಗಿದೆ.

ಹಸಿರು ಪಾಸ್ ವಿತರಣೆ: ಸಾಕಷ್ಟು ರೈತರು ತಮ್ಮ ಬೆಳೆಯನ್ನು ಸ್ಥಳೀಯವಾಗಿ ವ್ಯಾಪಾರ, ಸಾಗಾಟಕ್ಕೆ ಮುಂದಾಗಲು ಭಯಪಡುತ್ತಿದ್ದಾರೆ. ಹೆಚ್ಚಾಗಿ ಶಿರೂರು, ಬೈಂದೂರು ಕಡೆಗಳಲ್ಲಿಯೇ ಬೆಲ್ಲದ ವ್ಯಾಪಾರ ಮಾಡುವವರು ಹೆಚ್ಚಿದ್ದು, ಸದ್ಯ ಶಿರೂರು ಗಡಿ ಬಂದ್ ಹಿನ್ನೆಲೆ ಎಲ್ಲವೂ ಸ್ಥಗಿತಗೊಂಡಿದೆ. ಸ್ಥಳೀಯವಾಗಿ ವ್ಯಾಪಾರ, ಸಾಗಾಟಕ್ಕೆ ತೆರಳಿದರೆ ಪೊಲೀಸರು ವಾಹನವನ್ನು ಸೀಜ್ ಮಾಡಿದರೆ ಕಥೆ ಏನು ಎಂಬ ಭಯದಲ್ಲಿ ಊರ ಕಡೆಯಲ್ಲಿಯೇ ಇರುವಂತಾಗಿದೆ. ಆದರೆ, ಸರ್ಕಾರದ ಸುತ್ತೋಲೆಯಲ್ಲಿ ರೈತರ ಚಟುವಟಿಕೆಗೆ ಯಾವುದೇ ಸಮಸ್ಯೆ ಮಾಡಬಾರದೆಂದಿದೆ.

ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲೆಯ ರೈತರಿಗೆ ಅವರ ಬೆಳೆ ಸಾಗಾಟ, ವ್ಯಾಪಾರಕ್ಕೆ ಹಸಿರು ಪಾಸ್ ನೀಡುವ ಬಗ್ಗೆ ಸೂಚಿಸಲಾಗಿದೆ. ಈ ಬಗ್ಗೆ ಸಹಾಯಕ ಆಯುಕ್ತರೊಂದಿಗೆ ಬುಧವಾರದಂದು ಸಭೆ ನಡೆಸಲಾಗಿದ್ದು, ಕೆಲವೇ ದಿನದಲ್ಲಿ ಹಸಿರು ಪಾಸ ವಿತರಣೆ ಆಗಲಿದೆ ಎಂದು ತಿಳಿಸಿದ್ದಾರೆ.

ಆಲೆಮನೆಯ ಪ್ರಕ್ರಿಯೆ

ಕಬ್ಬು ಹೆಚ್ಚಾಗಿ ೧೦ ತಿಂಗಳ ಬೆಳೆ. ಆದರೆ ಅದನ್ನು ೧೦ ತಿಂಗಳಿಗೆ ಕಟಾವು ಮಾಡದೇ, ೧೧ ತಿಂಗಳ ನಂತರ ಕಟಾವು ಮಾಡಿ ನಂತರದಲ್ಲಿ ಆಲೆಗಿಟ್ಟು ಕಬ್ಬನ್ನು ಹಿಂಡಿ ಬೆಲ್ಲವನ್ನು ತಯಾರಿಸುವುದನ್ನೇ ಆಲೆಮನೆ ಎನ್ನಲಾಗುತ್ತದೆ. ಮೊದಲು ಮರದ ನೆರಳಿರುವ ನಿವೇಶನವನ್ನು ಆರಿಸಿ ಸಿದ್ಧಗೊಳಿಸುತ್ತಾರೆ. ನಂತರದಲ್ಲಿ ಕಬ್ಬನ್ನು ಹಿಂಡುವ ಗಾಣಕ್ಕೆ ಎತ್ತನ್ನು ಕಟ್ಟಿ, ಗಾಣಕ್ಕೆ ಕಬ್ಬನ್ನು ಹಾಕಿ, ಗಾಣಕ್ಕೆ ಎತ್ತನ್ನು ಕಟ್ಟಿದ ಮೇಲೆ ಒಬ್ಬಾತ ವೃತ್ತಾಕಾರವಾಗಿ ಎತ್ತನ್ನು ಓಡಿಸುವಾಗ ಗಾಣದಲ್ಲಿರುವ ಲೋಹದ ಆಲೆಗಳು ಕಬ್ಬನ್ನು ಹಿಂಡುತ್ತವೆ. ಆ ಗಾಣದಿಂದ ಬರುವ ಕಬ್ಬಿನ ರಸವು ಗಾಣದ ಕೆಳಗೆ ಮಾಡಿದ ದೊಡ್ಡ ಹೊಂಡದೊಳಗಿಟ್ಟ ಮಡಿಕೆಗೆ ಬಂದು ಸೇರುತ್ತದೆ. ಅಲ್ಲಿ ಶೇಖರಣೆಯಾದ ಕಬ್ಬಿನ ಹಾಲನ್ನು ಮತ್ತೊಂದು ಡಬ್ಬಿಯಲ್ಲಿ ತುಂಬಿಸಿ ಬೆಂಕಿಯಲ್ಲಿಟ್ಟ ಕೊಪ್ಪರಿಗೆಗೆ ಹಾಕುತ್ತಾರೆ. ಕೊಪ್ಪರಿಗೆಗೆ ಹಾಕಿದ ನಂತರದಲ್ಲಿ ಕಬ್ಬಿನ ಹಾಲು ಕಾದ ಮೇಲೆ ಬರುವ ವೇಸ್ಟೆಜ್ ತೆಗೆಯುತ್ತಾರೆ. ವೇಸ್ಟೆಜ್ ತೆಗೆದ ನಂತರದಲ್ಲಿ ಕೊಪ್ಪರಿಗೆಗೆಯಲ್ಲಿ ಕಾಯುತ್ತಿರುವ ಕಬ್ಬಿನ ಹಾvಲಿಗೆ ಸುಣ್ಣವನ್ನು ಸೇರಿಸುತ್ತಾರೆ. ಸುಣ್ಣದ ಮಿಶ್ರಣದ ನಂತರ ಕುದಿಯುತ್ತಿರುವ ಕಬ್ಬಿನ ಹಾಲು ಕಡು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಗಂಟೆಗಳಲ್ಲಿ ಬೆಲ್ಲದ ತಯಾರಿಕೆಗೆ ಸಿದ್ದವಾಗುತ್ತದೆ.

ಈ ಸಂದರ್ಭದಲ್ಲಿ ಬೆಲ್ಲ ತಯಾರಕರಾದ ಮಹೇಶ ನಾಯ್ಕ ಮಾತನಾಡಿ
ಕಬ್ಬು ಬೆಳೆದು ಇಷ್ಟು ವರ್ಷ ಬೆಲ್ಲ ತಯಾರಿಕೆ ಮಾಡುತ್ತಿದ್ದೆವು. ಆದರೆ ಈ ವರ್ಷ ಕೊರೋನಾ ಲಾಕ್‌ಡೌನ್‌ನಿಂದಾಗಿ ಬೆಲ್ಲದ ವ್ಯಾಪಾರ ಕಷ್ಟವಾಗಿದೆ. ಪೇಟೆ, ಸಂತೆಗೆ ತೆರಳಲು ಅವಕಾಶವಿಲ್ಲ. ಜೊತೆಗೆ ಕಬ್ಬು ಕಟಾವು ಮಾಡದೇ ಹಾಗೆ ಬಿಟ್ಟರೆ ತುಂಬಲಾಗದ ನಷ್ಟ ನಾವು ಎದುರಿಸಬೇಕಾಗುತ್ತದೆ ಎಂದರು..

ವಿಶೇಷ ವರದಿ : ಮಂಜು ಮುಟ್ಟಳ್ಳಿ

error: