July 26, 2024

Bhavana Tv

Its Your Channel

ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೊನಾ ಮಾದರಿ ಸಂಗ್ರಹಣೆ ಕೇಂದ್ರ(ಕಿಯೋಸ್ಕ್) ಕುಮಟಾ ರೋಟರಿ ಕ್ಲಬ್ ಕೊಡುಗೆ

ಕುಮಟಾ ; ಕರೊನಾ ಶಂಕಿತರಿoದ ತಪಾಸಣೆಗಾಗಿ ಸುರಕ್ಷಿತವಾಗಿ ಮಾದರಿ ಸಂಗ್ರಹಿಸಲು ಅನುಕೂಲವಾಗುವಂತೆ ಕರೊನಾ ಮಾದರಿ ಸಂಗ್ರಹಣೆ ಕೇಂದ್ರ(ಕಿಯೋಸ್ಕ್)ವನ್ನು ಕುಮಟಾ ರೋಟರಿ ಕ್ಲಬ್‌ನವರು ಕೊಡುಗೆಯಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭಾನುವಾರ ಶಾಸಕ ದಿನಕರ ಶೆಟ್ಟಿ ಮೂಲಕ ನೀಡಿದರು.

ಬಳಿಕ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕರೊನಾ ಮಹಾಮಾರಿಯನ್ನು ಜಗತ್ತಿನಿಂದಲೇ ಮುಕ್ತಗೊಳಿಸಲು ನಾವೆಲ್ಲರೂ ಸಂಕಲ್ಪಿತರಾಗಬೇಕಿದೆ. ರೋಟರಿ ಕ್ಲಬ್‌ನವರು ನೀಡಿದ ಸುಸಜ್ಜಿತ ಕಿಯೋಸ್ಕ ಅತ್ಯಂತ ಮಹತ್ವದ್ದು ಮತ್ತು ನಮ್ಮ ಜಿಲ್ಲೆಯಲ್ಲೇ ಪ್ರಥಮ ಎಂದರು.
ರೋಟರಿ ಅಧ್ಯಕ್ಷ ಸುರೇಶ ಭಟ್ ಮಾತನಾಡಿ, ಕರೊನಾ ಮಾದರಿ ಸಂಗ್ರಹಣೆ ಕೇಂದ್ರವನ್ನು ಮಂಗಳೂರಿನಿoದ ರೋ. ಶಶಿಧರ ಪೈ ಅವರ ಸಹಕಾರದಲ್ಲಿ ಬಹಳ ಕಷ್ಟಪಟ್ಟು ತರಿಸಲಾಗಿದೆ. ಉಪವಿಭಾಗಾಧಿಕಾರಿಗಳ ಮುತುವರ್ಜಿಯಿಂದ ಲಾಕ್‌ಡೌನ್ ಅಡ್ಡಿಗಳನ್ನು ನಿವಾರಿಸಿಕೊಂಡು ಕುಮಟಾ ಆಸ್ಪತ್ರೆಗೆ ಮಾದರಿ ಸಂಗ್ರಹಣೆ ಕೇಂದ್ರ ಬಂದು ತಲುಪಿದೆ. ಈ ಆಸ್ಪತ್ರೆಗೆ ರೋಟರಿಯಿಂದ ೧೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಜೀವರಕ್ಷಕ ಉಪಕರಣಗಳನ್ನು ಕೊಡುಗೆಯಾಗಿ ನೀಡಲಿದ್ದೇವೆ ಎಂದರು.
ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಮಾತನಾಡಿ, ಕರೊನಾ ಮಾದರಿ ಸಂಗ್ರಹಣೆ ಕೇಂದ್ರದಿoದ ಪ್ರತಿನಿತ್ಯ ಸುರಕ್ಷಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾದರಿ ಸಂಗ್ರಹಿಸಲು ಅನುಕೂಲವಾಗುವ ಜೊತೆಗೆ ವಯಕ್ತಿಕ ಸುರಕ್ಷತೆ ದಿರಿಸು(ಪಿಪಿಇ) ವ್ಯರ್ಥವಾಗುವುದನ್ನು ತಪ್ಪಿಸುತ್ತದೆ. ಇಂಥ ಇನ್ನೊಂದು ಮಾದರಿ ಸಂಗ್ರಹಣೆ ಕೇಂದ್ರ ಅಂಕೋಲಾಕ್ಕೂ ತರಿಸುವ ಪ್ರಯತ್ನ ನಡೆದಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ, ಐಎಂಎ ಅಧ್ಯಕ್ಷೆ ಡಾ. ನಮೃತಾ ಶಾನಭಾಗ, ಡಾ. ಬಿ.ಎಂ.ಪೈ ಫೌಂಡೇಶನ್ ಟ್ರಸ್ಟಿ ತ್ರಿವಿಕ್ರಮ ಪೈ, ಡಾ. ಶ್ರೀನಿವಾಸ ನಾಯಕ, ಡಾ. ಸದಾನಂದ ಪೈ, ಡಾ. ನಾಗರತ್ನಾ ಪಟಗಾರ ಇನ್ನಿತರರು ಇದ್ದರು.
ಕರೊನಾ ಮಾದರಿ ಸಂಗ್ರಹಣೆ ಕೇಂದ್ರವನ್ನು ರೋ. ವಿವೇಕ ನಾಯಕ ಹುಬ್ಬಳ್ಳಿ, ಕುಮಟಾದ ತರಂಗ ಇಲೆಕ್ಟ್ರಾನಿಕ್ಸ , ಡಾ. ಬಿ.ಎಂ.ಪೈ ಚಾರಿಟೇಬಲ್ ಫೌಂಡೇಶನ್, ರೊ. ಸುರೇಶ ಭಟ್, ರೊ. ಡಾ. ದೀಪಕ ಡಿ. ನಾಯಕ, ರೊ. ಮೊಹಿಸಿನ್ ಖಾಜಿ, ರೊ.ಕಿರಣ ನಾಯಕ, ರೊ. ಸಂದೀಪ ವಿ. ನಾಯಕ, ರೊ. ವಸಂತ ಪಿ. ಶಾನಭಾಗ, ರೊ. ಜಿ.ಎಸ್.ಹೆಗಡೆ ಸಂಯುಕ್ತವಾಗಿ ಪ್ರಾಯೋಜಿಸಿದ್ದಾರೆ.

error: