May 30, 2023

Bhavana Tv

Its Your Channel

ಕವಿಗೆ ಸಾವಿಲ್ಲ.ಯಾಕೆಂದರೆ ಆತ ತನ್ನ ಕವಿತೆಗಳಲ್ಲಿ ಬದುಕಿರುತ್ತಾನೆ. ಡಾ|| ಶ್ರೀಪಾದ ಶೆಟ್ಟಿ

ಕನ್ನಡಿಗರ ಮನೆ ಮತ್ತು ಮನವನ್ನು ತಮ್ಮದೆ ಆದ ವಿಭಿನ್ನ ವಸ್ತು ಮತ್ತು ಶೈಲಿಯ ಕವನಗಳ ಮೂಲಕ ತಲುಪಿದ ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ ಅಹ್ಮದ ಅವರು ಕಾಲದ ತೊರೆಯಲ್ಲಿ ಇನ್ನೊಮ್ಮೆ ಕಾಣದಂತೆ ಕಾಣೆಯಾದರು.
ಅವರೊಬ್ಬ ಅಪರೂಪದ ಪ್ರಾಜ್ಞ. ಅವರ ನಿತ್ಯೋತ್ಸವ ಎಂಬ ಕವನ ಸಂಕಲನವನ್ನು ಬಿ.ಎ.೧ ರ ಕನ್ನಡ ಐಚ್ಚಿಕ ತರಗತಿಗೆ ಪಾಠ ಮಾಡುವ ಅವಕಾಶ ನನಗೆ ಒದಗಿ ಬಂದಿತ್ತು. ಕವಿತೆಗಳನ್ನು ಪಾಠ ಮಾಡುವುದೆಂದರೆ ನನಗೆ ಇನ್ನಿಲ್ಲದ ಉತ್ಸಾಹ.ಕಾವ್ಯದ ಆಶಯ ಮತ್ತು ವರ್ಣನೆಯಲ್ಲಿ ತನ್ಮಯನಾಗಿ ಸಮಯದ ಪರಿವೆಯೆ ಇಲ್ಲದೆ ಅದರಲ್ಲಿಯೆ ಕಳೆದು ಹೋಗುವ ಆನಂದ ಅವರ್ಣನೀಯ.ಅದರಲ್ಲಿ ನಿಸಾರರ ಲಲಿತವಹ ಕನ್ನಡದ ಕವಿತೆಯ ವರ್ಣನೆ ಸುಲಿದ ಬಾಳೆಯ ಹಣ್ಣು,ಅಳಿದ ಉಷ್ಣದ ಹಾಲು,ಕಳೆದ ಸಿಗುರಿನ ಕಬ್ಬನ್ನು ಸವಿವ ಅಪರಿಮಿತವಾದ ಆನಂದ.ಅವರ ಕವನದ ವಸ್ತು,ಭಾವ,ಭಾಷೆ,ಛಂದಸ್ಸು,ಶೈಲಿ,ಲಯ,ಲಾಲಿತ್ಯ ಒಂದಕ್ಕಿAತ ಇನ್ನೊಂದು ಮಿಗಿಲು.ಅವರ ಕವಿತೆಯ ಕೆಲವು ಸಾಲುಗಳು ಸುಭಾಷಿತದಂತೆ,ಗಾದೆಯ ಮಾತುಗಳಂತೆ ಚಿತ್ತ ಬಿತ್ತಿಯಲ್ಲಿ ಅಚ್ಚೊತ್ತಿ ನಿಲ್ಲುವ ಗುಣವನ್ನು ಹೊಂದಿದ್ದವು.

 • ಸ್ವರ್ಗವೆ ಇಲ್ಲಿದೆ ನಿಸರ್ಗದಲ್ಲಿ
 • ಹೆರರಿಗಾಳಾಗಿಸುತ ಬೇಡಿಸದಿರು.ಕೊಡು ವೈನತೇಯ ಶಕ್ತಿ ಸಿಂಹ ಪರಾಕ್ರಮ
 • ಚೆಲುವೆದುರಿನಲ್ಲಿ ಸತತ ಹೊಸತಾಗ ಬೇಕು ಕಣ್ಣು ಈ ಪೃಥ್ವಿ ತಾನಲ್ಲವೊ ಬರಿಯ ಮಣ್ಣು
 • ಇಂದು ಗೆಳೆಯನ ಮದುವೆ ಹೊಸ ನೀರಿಗಿಳಿವುದು ಆತನ ನಾವೆ.ಉತ್ತರೀಯಕೆ ಸೀರೆ ನಿರಿಗೆಯ ಗಂಟು ಹೊಸತಾಗಿ ಹಬ್ಬುವುದು ನಂಟು
 • ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯಿ!
  ಒಂದೆ ನೆಲದ ರಸ ಹೀರಲೇನು ಸಿಹಿ ಕಹಿಯ ರುಚಿಯ ಕಾಯಿ.
  ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ
  ಇನ್ನೊಬ್ಬ ಆಚರಿಸುತಿಹ ವೈಭವದ ಹುಟ್ಟು ಹಬ್ಬ
  ಹೀಗೆ ಕವಿ ನಿಸಾರ ಅಹಮದ್ ಅವರ ಕವಿತೆಗಳು ಜೀವನದ ಸತ್ಯವನ್ನು ಸಾದರ ಪಡಿಸುತ್ತಾ ಹೋಗುತ್ತವೆ.ನಿತ್ಯೋತ್ಸವ ಕವನ ಸಂಕಲನದ ಕವನಗಳನ್ನು ಕಳೆದ ಶತಮಾನದ ೮೦ ರ ದಶಕದಲ್ಲಿ ಕೇಳಿ ಖುಷಿ ಪಟ್ಟವರು ಬಹಳಷ್ಟು ಜನ.ಟೇಪ್ ರೆಕಾರ್ಡರ್ ಬಂದ ಹೊಸತರಲ್ಲಿ ವಿದ್ಯಾರ್ಥಿಗಳಿಗೆ ಅವರ ನಿತ್ಯೋತ್ಸವದ ಹಾಡುಗಳನ್ನು ಕೇಳಿಸಿ ಸಂತೃಪ್ತಿ ಅನುಭವಿಸಿದವನು ನಾನು.
  ಅವರ ರಂಗೋಲಿ ಮತ್ತು ಮಗ,ಕುರಿಗಳು ಸಾರ್ ಕುರಿಗಳು,ಬೆಣ್ಣೆ ಕದ್ದನಮ್ಮ ಕೃಷ್ಣ,ಮನಸು ಗಾಂಧಿ ಬಜಾರು,ಸಂಜೆ ಐದರ ಮಳೆ,ಮಾಸ್ತಿಯವರ ಕುರಿತ ಕವನ ಒಂದೊAದು ನಿಸಾರ ಅಹಮದರ ಸೃಜನಶೀಲತೆಯ ಮೂಸೆಯಲ್ಲಿ ಪಡಿಮೂಡಿದ ಚಿತ್ತಾಪಹಾರಿಯಾದ ಚಿತ್ತಾರಗಳು. ನಿಸಾರ ನನಗೆ ಪ್ರಿಯರಾದ ಕವಿ.ಹಾಗೆ ಅಕಬರ ಅಲಿ, ಬಿ.ಎ.ಸನದಿ, ಡಾ.ಎಸ್.ಕೆ.ಕರೀಮ್ ಖಾನ್ ನನ್ನನ್ನು ಗಾಢವಾಗಿ ಪ್ರಭಾವಿಸಿದ ಕವಿ ಚೇತನಗಳು.ಅವರ ಒಡನಾಟ ಮತ್ತು ಅಕ್ಕರೆಯ ಸಕ್ಕರೆಯ ಸವಿಯುಂಡವನು ನಾನು
  ೧೯೮೯ ರಲ್ಲಿ ಕವಿ ನಿಸಾರ ಅಹಮ್ಮದರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಯರಾಗಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರು.ಆಗ ನಾನು ಅಂಕೋಲಾ ಜಿ.ಸಿ.ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿದ್ದೆ.ಕಾರವಾರ ಮತ್ತು ಅಂಕೋಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ.
  ಅಂಕೋಲಾದಲ್ಲಿ ಅವರೊಂದಿಗೆ ಮಾತನಾಡುತ್ತ ಸರ್ ನಿಮ್ಮ ಕುರಿಗಳು ಸಾರ್ ಕುರಿಗಳು ಕವನ ನನಗೆ ತುಂಬಾ ಇಷ್ಟ ಎಂದೆ.ಹತ್ತಿರ ಕರೆದ ಕವಿ ನಿಸಾರ, ಶ್ರೀಪಾದ ನೀವು ನನ್ನ ಮನವನ್ನು ನೋಯಿಸಿದಿರಿ ಎಂದರು.ಅಚ್ಚರಿಯಿAದ ಯಾಕೆ ಸರ್ ಎಂದೆ. ಅದು ನಾನು ೧೯೬೯ ರಲ್ಲಿ ಬರೆದ ಕವನ.ಈಗ ಮೂವತ್ತು ವರ್ಷ ಕಳೆದಿದೆ ಇನ್ನು ನನ್ನ ಜನಗಳು ಕುರಿಗಳಾಗಿದ್ದಾರೆ ಇದು ನೋವಿನ ಸಂಗತಿ ಎಂದರು.ನಿಮ್ಮ ಮುಕ್ರೀರು ನಾವ್ ಮುಕ್ರೀರು ಕವನ ಚೆನ್ನಾಗಿದೆ.ನನ್ನ ಕವನದ ಪಲ್ಲವಿ ನಿಮ್ಮನ್ನು ಪ್ರಭಾವಿಸಿದಂತಿದೆ ಎಂದು ಬೆನ್ನು ತಟ್ಟಿದರು.
  ೨೦೦೮ ನೆ ಇಸ್ವಿಯಲ್ಲಿ ಶಿವಮೊಗ್ಗೆಯಲ್ಲಿ ನಡೆದ ನಿಸಾರ ಅಧ್ಯಕ್ಷತೆಯ ಅ.ಭಾ.ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವಿಗೆ ವಂದಿಸಿ ಬಂದಿದ್ದೆ.ಆಗ ಪ್ರಿಯತಮೆಗೆ ಎಂಬ ಅಂಕಣ ಬರಹದಲ್ಲಿ ನಿಸಾರರ ಬಗ್ಗೆ ಮೂರು ಕಂತು ಅಂಕಣ ಬರೆದಿದ್ದೆ.ಅದು ನನ್ನ ಬಯಕೆ ತೋಟದ ಬೇಲಿ ಪುಸ್ತಕದಲ್ಲಿ ಪ್ರಕಟವಾಗಿದೆ.
  ಕನ್ನಡ ನುಡಿಯ ಸಾರವನ್ನು ತಮ್ಮ ಲೋಕ ಗ್ರಹಿಕೆ,ಸಂವೇದನಾಶೀಲ ಗುಣ,ಗುಣಪಕ್ಷಪಾತಿತನ, ಸೌಹಾರ್ದ ಮನೋಭಾವದೊಂದಿಗೆ ಕನ್ನಡಿಗರ ಮನದಲ್ಲಿ ನಿತ್ಯ ನಿರಂತರವಾಗಿ ನೆಲೆನಂತ ಕವಿ ಚೇತನ ಕೆ.ಎಸ್.ನಿಸಾರ ಅಹಮ್ಮದ್ ಅವರಿಗೆ ನನ್ನ ಮನದಾಳದ ಅಭಿವಂದನೆಗಳು ಎಂದು ಸಾಹಿತಿ ಶ್ರೀಪಾದ ಶೆಟ್ಟರು ನುಡಿನಮನ ಸಲ್ಲಿಸಿದ್ದಾರೆ.

About Post Author

error: