May 18, 2024

Bhavana Tv

Its Your Channel

ಗಾಲ್ವನ್‌ನಲ್ಲಿ ಹುತಾತ್ಮರಾದ ಯೋಧರಿಗೆ ಮಾನವಿಕುರ್ವೆಯಲ್ಲಿ ಶ್ರದ್ಧಾಂಜಲಿ ಭಾರತೀಯ ಸೇನೆ ಬಲ ವಿಶ್ವಕ್ಕೆ ಗೊತ್ತಾಗಿದೆ: ಶ್ರೀಕಾಂತ ನಾಯ್ಕ

ಭಟ್ಕಳ: ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ವೀರ ಸೈನಿಕರನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ ಆಸರಕೇರಿ ಹೇಳಿದರು.

ತಾಲ್ಲೂಕಿನ ಮಾನವಿಕುರ್ವೆಯ ಕೊಂಕಣಿ ಖಾರ್ವಿ ವೀರಯೋಧರ ಬಳಗ, ಕುಟುಮೇಶ್ವರ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘ, ಕೊಂಕಣಿ ಖಾರ್ವಿ ಸಮಾಜ ಮಾವಿನಕುರ್ವೆ, ಕರಾವಳಿ ಯೂನಿಯನ್ ಮಾನವಿಕುರ್ವೆ, ಫಿಶಿಂಗ್ ಬೋಟ್ ಯೂನಿಯನ್ ಮಾವಿನಕುರ್ವೆ, ಅಮರಲಿಂಗೇಶ್ವರ ಯುವಕ ಮಂಡಳ, ಮಾನವಿಕುರ್ವೆ ಮೀನುಗಾರಿಕೆ ಸಹಕಾರಿ ಸಂಘದ ಆಶ್ರಯದಲ್ಲಿ ನಡೆದ ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿಯಲ್ಲಿರುವ ಎದುರಾಗುತ್ತಿರುವ ಸವಾಲುಗಳನ್ನು ಭಾರತೀಯ ಸೇನೆ ಸಮರ್ಥವಾಗಿ ಮೆಟ್ಟಿ ನಿಲ್ಲುತ್ತಿದೆ. ಉರಿ ದಾಳಿ ನಂತರ ನಡೆಸಿದ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿ ಮತ್ತು ಬರ್ಮಾ ದೇಶಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು ಭಾರತೀಯ ಸೇನೆಯ ಬಲ ಏನು ಎನ್ನುವುದು ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ನಾಯ್ಕ ಹೆಮ್ಮೆ ವ್ಯಕ್ತಪಡಿಸಿದರು.

ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ನಾರಾಯಣ ಖಾರ್ವಿ ಮಾತನಾಡಿ, ದೇಶದ ಯೋಧರ ಹುತಾತ್ಮತೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವರ್ತನೆಯನ್ನು ಖಂಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ೧೧ ಸಾವಿರ ಅಡಿ ಎತ್ತರದಲ್ಲಿರುವ ಗಾಲ್ವನ್ ಗಡಿಗೆ ಭೇಟಿ ನೀಡಿ ಭಾರತದ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿರುವುದು ಶ್ಲಾಘನೀಯ. ಪ್ರಧಾನಿಯವರ ಈ ಕ್ರಮವನ್ನೂ ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವುದು ದುರಂತ ಎಂದರು.

ನಿವೃತ್ತ ಸೈನಿಕ ವೆಂಕಟೇಶ್ ನಾಯ್ಕ ತಲಗೋಡ್, ಕೊಂಕಣಿ ಖಾರ್ವಿ ಸಮಾಜದ ಹಿರಿಯ ಮುಖಂಡ ವಸಂತ ಖಾರ್ವಿ ಮಾತನಾಡಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರಷ್ಟೇ ಸಾಲದು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕರಾವಳಿ ಯೂನಿಯನ್ ಅಧ್ಯಕ್ಷ ರತ್ನಾಕರ್ ಖಾರ್ವಿ, ಕುಟುಮೇಶ್ವರ ಸಹಕಾರಿ ಸಂಘದ ಅಧ್ಯಕ್ಷ ರಾಮಾ ಖಾರ್ವಿ, ಗೋವಿಂದ ಖಾರ್ವಿ ಹಾಜರಿದ್ದರು. ಕೊಂಕಣಿ ಖಾರ್ವಿ ವೀರಯೋಧರ ಬಳಗದ ರಮೇಶ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಪುರಂದರ ಖಾರ್ವಿ ವಂದಿಸಿದರು. ಶಿವ ಖಾರ್ವಿ ದೇಶಭಕ್ತಿ ಗೀತೆಗಳನ್ನು ಹಾಡಿದರು.

error: