May 23, 2024

Bhavana Tv

Its Your Channel

ಜೀವ ವೈವಿಧ್ಯ ಸಮಾಲೋಚನಾ ಸಭೆ

ಅರಣ್ಯ ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಜಿಪಂ ಹಾಗೂ ತಾಪಂ ಸಹಯೋಗದಲ್ಲಿ ತಾಪಂ ಸಭಾಭವನದಲ್ಲಿ ಬುಧವಾರ ಜೀವ ವೈವಿಧ್ಯ ಸಮಾಲೋಚನಾ ಸಭೆ ನಡೆಯಿತು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯ ಮಂಡಳಿಗಳು ಜೀವ ವೈವಿಧ್ಯಗಳ ರಕ್ಷಣೆಗಾಗಿ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕಿದೆ. ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ಮಂಡಳಿಗಳ ರಚನೆಯಾಗಬೇಕು. ಸಾಮಾಜಿಕ ಅರಣ್ಯ ಅಧಿಕಾರಿಗಳಿಂದ ಜೀವ ವೈವಿಧ್ಯ ದಾಖಲಾತಿ ನಡೆಯಬೇಕು. ಮಂಡಳಿ ಸ್ಥಾಪನೆಯಾಗಿ ದಶಕಗಳೇ ಕಳೆದರೂ ನಮ್ಮ ಹಕ್ಕುಗಳಬಗ್ಗೆ ತಿಳಿದಿಲ್ಲ. ತಾಲೂಕಿನ ನಿಸರ್ಗ ಸಂಪತ್ತಿನ ಬಳಕೆಯ ಮೇಲೆ ಮಂಡಳಿಗೆ ಹಕ್ಕಿದೆ. ವಾಣಿಜ್ಯಿಕ ಬಳಕೆಯಾದಾಗ ಲಾಭಾಂಶ ಪಡೆಯಬಹುದಾಗಿದೆ. ಪರಿಸರಕ್ಕೆ ಧಕ್ಕೆಯಾಗುವಂಥ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರವಹಿಸಬೇಕಿದೆ. ಮೇ. ೨೨ ರ ಜೀವ ವೈವಿಧ್ಯತಾ ದಿನದಂದು ಆಯಾ ತಾಲೂಕಾ ಮಟ್ಟದಲ್ಲಿ ಅಪರೂಪದ ಕೃಷಿಕರಿಗೆ ಪ್ರಶಸ್ತಿ ಸನ್ಮಾನ ನೀಡುವಂತಾಗಬೇಕು. ಕರಾವಳಿಗೆ ಬೇಕಾದ ಗಿಡಗಳನ್ನು ಅರಣ್ಯ ನರ್ಸರಿಗಳು ಸಿದ್ಧಪಡಿಸಬೇಕು. ಮುಖ್ಯವಾಗಿ ಗ್ರಾಮ ಸಭೆಗಳಲ್ಲಿ ಆಯಾ ಪ್ರದೇಶದ ಜೀವ ವೈವಿಧ್ಯತೆಗಳ ಮಾಹಿತಿ ಜನಸಾಮಾನ್ಯರಿಗೆ ತಲುಪಿಸಬೇಕು. ಇಂಥ ಹಲವಾರು ವಿಧಾಯಕ ಕಾರ್ಯಗಳು ಜೀವ ವೈವಿಧ್ಯತಾ ಸಮಿತಿಗಳಿಂದ ನಡೆಯಬೇಕು ಎಂದರು.
ಪರಿಸರ ವಿಜ್ಞಾನಿ ಡಾ. ಸುಭಾಷಚಂದ್ರನ್ ಮಾತನಾಡಿ, ೨೦೦೨ ರಲ್ಲೇ ಜೀವವೈವಿಧ್ಯತೆ ಕಾಯಿದೆ ಜಾರಿಗೆ ಬಂದರೂ ಈವರೆಗೆ ಪ್ರಾಥಮಿಕ ಹೆಜ್ಜೆಗಳನ್ನೇ ದಾಟಿಲ್ಲ. ಆಡುಸೋಗೆ, ಮುರುಗಲು, ಉಪ್ಪಾಗೆ, ಅಶೋಕೆ ಮುಂತಾದ ಬಹೂಪಯೋಗಿ ಔಷಧ ಸಸ್ಯಗಳನ್ನು ತಮ್ಮ ಪ್ರದೇಶದಿಂದ ಲಾರಿಗಟ್ಟಲೆ ಸಾಗಿಸಿ ವಾಣಿಜ್ಯಿಕ ಬಳಕೆ ಮಾಡಿದರೂ ಅದರ ಲಾಭಾಂಶ ಜೀವ ವೈವಿಧ್ಯ ಪ್ರದೇಶದ ಜನರಿಗೆ ಸಿಗುತ್ತಿಲ್ಲ, ಈ ನಿಟ್ಟಿನಲ್ಲಿ ಜೀವವೈವಿಧ್ಯ ಸಮಿತಿಗಳು ಹೆಚ್ಚು ಸಕ್ರಿಯವಾಗುವ ಅವಶ್ಯಕತೆ ಇದೆ ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ವಿಜಯಾ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ, ಸದಸ್ಯರಾದ ಪಾರ್ವತಿ ಗೌಡ, ಅನಸೂಯಾ ಅಂಬಿಗ, ಎಸಿಎಫ್ ಮಂಜುನಾಥ, ಆರ್‌ಎಫ್‌ಓ ಪ್ರವೀಣ, ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ, ಕತಗಾಲ, ಹಿರೇಗುತ್ತಿ ಆರ್?ಎಫ್?ಓಗಳು, ಸಾಮಾಜಿಕ ಅರಣ್ಯ ಅ?ಕಾರಿಗಳು ಇನ್ನಿತರರು ಇದ್ದರು. ಇಓ ಸಿ.ಟಿ.ನಾಯ್ಕ ಸ್ವಾಗತಿಸಿದರು.

error: