April 25, 2024

Bhavana Tv

Its Your Channel

ಕೊರೊನಾ ಯೋಧರಿಗೆ ಧನ್ಯವಾದ ತಿಳಿಸಿದ ಸೋನಿಯಾ ಗಾಂಧಿ

ನವದೆಹಲಿ: ಕೊರೊನಾ ವೈರಸ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ‘ಕೊರೊನಾ ಯೋಧರನ್ನು’ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ವಿಡಿಯೊ ಮೂಲಕ ಪ್ರಶಂಸಿಸಿದ್ದಾರೆ. ವೈದ್ಯರು, ಪೌರಕಾರ್ಮಿಕರು, ಪೊಲೀಸ್‌ ಸಿಬ್ಬಂದಿ ಮುಂದೆ ನಿಂತು ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಅಭಿನಂದನೆ ಸಲ್ಲಿಸಿದ್ದು, ಜನರು ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಬೆಳಿಗ್ಗೆ 10ಕ್ಕೆ ಮಾತನಾಡಲಿದ್ದಾರೆ. ಅದಕ್ಕೂ ಮುನ್ನ ಸೋನಿಯಾ ಗಾಂಧಿ ಅವರ ವಿಡಿಯೊ ಬಿಡುಗಡೆಯಾಗಿದೆ. ‘ಸುರಕ್ಷತಾ ಕವಚಗಳಲ್ಲಿದೆಯೂ ನಮ್ಮ ಕೊರೊನಾ ಯೋಧರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸೋಂಕಿತರ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೂ ಲಾಕ್‌ಡೌನ್‌ ಅನುಸರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಹೇಳಿದ್ದಾರೆ.

‘ಲಾಕ್‌ಡೌನ್‌ ಯಶಸ್ವಿಗೊಳಿಸಲು ಪೊಲೀಸರು ಹಾಗೂ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಪನ್ಮೂಲಗಳ ಕೊರೆತೆ ನಡುವೆಯೂ ಪೌರಕಾರ್ಮಿಕರು ಸೋಂಕು ವ್ಯಾಪಿಸುವುದನ್ನು ತಡೆಯಲು ಸ್ವಚ್ಛತಾ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಅಗತ್ಯ ಸೇವೆಗಳ ಪೂರೈಕೆಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ನಾವು ಅವರಿಗೆ ಸಹಕಾರ ನೀಡದಿದ್ದರೆ, ಅವರು ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ವರದಿಯಾಗುತ್ತಿವೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧದವಾದುದು, ಇದು ತಪ್ಪು. ಈ ಹೋರಾಟದಲ್ಲಿ ನಾವೆಲ್ಲರೂ ಅವರಿಗೆ ಬೆಂಬಲ ನೀಡಬೇಕು’ ಎಂದಿದ್ದಾರೆ.

‘ನಿಮ್ಮಲ್ಲಿ ಅನೇಕರು ಸ್ಯಾನಿಟೈಸರ್‌ ಹಾಗೂ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ವೈಯಕ್ತಿಕವಾಗಿ ಸಮರದಲ್ಲಿ ಹೋರಾಟ ನಡೆಸಿದ್ದೀರಿ. ನೀವೆಲ್ಲರೂ ಸಹ ಪ್ರಶಂಸನೀಯರು. ಪಕ್ಷ ರಾಜ್ಯಗಳಲ್ಲಿ ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಈ ಹೋರಾಟದಲ್ಲಿ ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರೂ ನಿಮ್ಮೊಂದಿಗಿದ್ದಾರೆ’ ಎಂದು ಐದು ನಿಮಿಷಗಳ ವಿಡಿಯೊದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದಿಸಿದ್ದಾರೆ.

ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಇಂದು ಕೊನೆಯಾಗುತ್ತಿದ್ದು, ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್‌ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಕೆಲವು ರಾಜ್ಯ ಸರ್ಕಾರಗಳು ಏಪ್ರಿಲ್‌ 30ರ ವರೆಗೂ ಲಾಕ್‌ಡೌನ್‌ ಮುಂದುವರಿಸುವುದಾಗಿ ಘೋಷಿಸಿವೆ.

source : prajavani

error: