May 12, 2024

Bhavana Tv

Its Your Channel

ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಕ್ಷೇತ್ರ ಹಾಗೂ ಶ್ರೀ ಅಭಯಹಸ್ತ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿಯ ಅಂಗವಾಗಿ ವಿಶೇಷ ಅಭಿಷೇಕ ಮತ್ತುಪೂಜೆ

ಕೃಷ್ಣರಾಜಪೇಟೆ ತಾಲ್ಲೂಕಿನ ಮಲ್ಕೋನಹಳ್ಳಿಯ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಕ್ಷೇತ್ರ ಹಾಗೂ ಮೋದೂರು ಗ್ರಾಮದ ಶ್ರೀ ಅಭಯಹಸ್ತ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮಜಯಂತಿಯ ಅಂಗವಾಗಿ ಮುಖ್ಯಪ್ರಾಣ, ಶ್ರೀರಾಮಭಕ್ತ ಹನುಮಂತರಾಯಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ ಪುರಸ್ಕಾರಗಳು ಜರುಗಿದವು.. ಸಾವಿರಾರು ಭಕ್ತರು ಹನುಮ ಜಯಂತಿಯಲ್ಲಿ ಭಾಗಿಯಾಗಿದ್ದರು..ಮುಗಿಲು ಮುಟ್ಟಿದ ಸಂಭ್ರಮ..ಮೊಳಗಿದ ಶ್ರೀರಾಮ ನಾಮ..ಸಾಮೂಹಿಕ ಅನ್ನಸಂತರ್ಪಣೆ ಕಾರ್ಯದಲ್ಲಿ ೧೦ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗಿ ….

ಮಲ್ಕೋನಹಳ್ಳಿ ಗ್ರಾಮದ ಹೊರವಲಯದಲ್ಲಿ ದಟ್ಟ ಅರಣ್ಯದ ಮಧ್ಯದಲ್ಲಿರುವ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಖ್ಯಪ್ರಾಣ ಹನುಮನ ಶಿಲಾಮೂರ್ತಿಯನ್ನು ವ್ಯಾಸ ಮಹರ್ಷಿಗಳು ಪ್ರತಿಷ್ಠಾಪಿಸಿದ್ದು ಅಭಯಹಸ್ತಧಾರಿಯಾಗಿರುವ ಆಂಜನೇಯಸ್ವಾಮಿ ಮೂರ್ತಿಯ ಪಾದತಳದಲ್ಲಿ ವರ್ಷದ ೩೬೫ ದಿನಗಳೂ ತೀರ್ಥದ ರೂಪದಲ್ಲಿ ನೀರು ಜಿನುಗುವುದು ಈ ದೇವಾಲಯದ ವಿಶೇಷವಾಗಿದೆ. ಹನುಮಜಯಂತಿಯ ಅಂಗವಾಗಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದ್ದು ಸಿಹಿತಿನಿಸುಗಳು, ಮಿಠಾಯಿ ಅಂಗಡಿಗಳು, ಕಡ್ಲೆಪುರಿ, ಬೆಂಡುಬತ್ತಾಸು ಅಂಗಡಿಗಳು, ಮಕ್ಕಳ ಆಟಿಕೆ ಗೊಂಬೆಗಳ ಅಂಗಡಿಗಳು ನೂರಾರು ಜಮಾಯಿಸಿದ್ದವು..ಮಲ್ಕೋನಹಳ್ಳಿ, ಚಟ್ಟಂಗೆರೆ, ರಾಜಘಟ್ಟ, ಬಳ್ಳೇಕೆರೆ, ಹುಣಸನಹಳ್ಳಿ, ಶೀಳನೆರೆ, ತೆಂಡೇಕೆರೆ, ಬಣ್ಣೇನಹಳ್ಳಿ, ಐಚನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಹನುಮ ಭಕ್ತರು ಪ್ರಸನ್ನ ಆಂಜನೇಯಸ್ವಾಮಿಯ ದರ್ಶನ ಪಡೆದು ಪುನೀತರಾದರು..
ಶ್ರೀರಾಮಚಂದ್ರಪ್ರಭುವು ವನವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಪಕ್ಕದಲ್ಲಿರುವ ಅಭಯಹಸ್ತ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು ಹನುಮಜಯಂತಿಯ ಅಂಗವಾಗಿ ೯೫ ಕೆಜಿ ತೂಕದ ಪಂಚಲೋಹದ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದಲ್ಲಿ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು..

ತಮಿಳುನಾಡಿನ ಕುಂಭಕೋಣA ನಿಂದ ತರಿಸಿರುವ ಶ್ರೀ ಆಂಜನೇಯಸ್ವಾಮಿಯು ಅಭಯ ಹಸ್ತವನ್ನು ತೋರಿಸಿ ಆಶೀರ್ವದಿಸುತ್ತಿರುವ ನಿಂತ ಭಂಗಿಯಲ್ಲಿರುವ ಪಂಚಲೋಹದ ೯೫ ಕೆ.ಜಿ ತೂಕದ ಆಂಜನೇಯಸ್ವಾಮಿಯ ಉತ್ಸವಮೂರ್ತಿಯು ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು.
ಉತ್ಸವಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ಹೋಮಹವನಗಳು, ಕಳಸಪೂಜೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು..

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಬೂಕನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗ್ಯಕುಮಾರ್, ಉಪಾಧ್ಯಕ್ಷೆ ಜ್ಯೋತಿಮಂಜು, ಶೀಳನೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಗಾಯತ್ರಿಸಿದ್ದೇಶ್, ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಜಿ.ಪಂ.ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಜಿಪಂ ಮಾಜಿಸದಸ್ಯೆ ನಾಗರತ್ನಮ್ಮಸುಬ್ಬಣ್ಣ, ಮಂಡ್ಯ ಜಿಲ್ಲಾ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಅಂಚನಹಳ್ಳಿ ಸುಬ್ಬಣ್ಣ, ಉಪತಹಶೀಲ್ದಾರ್ ಮಹೇಶ್, ರಾಜಶ್ವನಿರೀಕ್ಷಕರಾದ ರಾಜಮೂರ್ತಿ, ಆಗಮಿಕರಾದ ವೇದಬ್ರಹ್ಮ ಶ್ರೀನಿಧಿಐಯ್ಯರ್, ವಿಜಯಕುಮಾರ್ ಐಯ್ಯರ್, ಕೃಷ್ಣಮೂರ್ತಿ, ಗೋಪಾಲಕೃಷ್ಣ ಅವದಾನಿಗಳು, ಪ್ರಾಧ್ಯಾಪಕರಾದ ಮೋದೂರು ರಮೇಶ್, ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಭಕ್ತರ ದಂಡೇ ಎರಡೂ ಕ್ಷೇತ್ರಗಳಿಗೆ ಹರಿದು ಬಂದಿತ್ತು..

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: