April 28, 2024

Bhavana Tv

Its Your Channel

ಹೇಮಗಿರಿ ಜಾತ್ರೆ ರಥೋತ್ಸವ ನಿಷೇಧಿಸಿ ಜಿಲ್ಲಾಧಿಕಾರಿ ಅಶ್ವಥಿ ಆದೇಶ

ಕೋವಿಡ್ 3ನೇ ಅಲೆ ಸೋಂಕು ಹೆಚ್ಚಳದಿಂದಾಗಿ ಹೇಮಗಿರಿ ಜಾತ್ರೆ ರಥೋತ್ಸವ ನಿಷೇಧಿಸಿ ಜಿಲ್ಲಾಧಿಕಾರಿ ಅಶ್ವಥಿ ಆದೇಶ..ಹೇಮಗಿರಿಯಲ್ಲಿ ತಹಶೀಲ್ದಾರ್ ರೂಪ ಅಧ್ಯಕ್ಷತೆಯಲ್ಲಿ ರೈತರು ಜನಪ್ರತಿನಿಧಿಗಳ ಸಮಾಲೋಚನಾ ಸಭೆ..ಸಭೆಯಲ್ಲಿ ವಾಗ್ಯುದ್ಧ..ಬಿಸಿ ಬಿಸಿ ಚರ್ಚೆ …

ಕೃಷ್ಣರಾಜಪೇಟೆ :-ಭೃಗು ಮಹರ್ಷಿಗಳ ತಪೋಭೂಮಿಯಾಗಿರುವ ರಾಜ್ಯದಾದ್ಯಂತ ರಾಸುಗಳ ಜಾತ್ರೆಗೆ ಹೆಸರುವಾಸಿಯಾದ ಹೇಮಗಿರಿ ದನಗಳ ಜಾತ್ರೆಯನ್ನು ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ನಿಷೇಧಿಸಿ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಹೇಮಗಿರಿ ಗ್ರಾಮದ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ತಹಶೀಲ್ದಾರ್ ಎಂ.ವಿ.ರೂಪ ಅವರ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆಯು ನಡೆಯಿತು…

ನಿಮ್ಮ ದಮ್ಮಯ್ಯ ತಹಶೀಲ್ದಾರ್ ಮೇಡಂನೋರೇ ನಾಲ್ಕು ದಿನಗಳ ಮಟ್ಟಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ದನಗಳ ಜಾತ್ರೆ ನಡೆಯಲು ಅವಕಾಶ ಮಾಡಿಕೊಡಿ ನೆರೆಯ ಮೈಸೂರು ಜಿಲ್ಲೆಯ ಚುಂಚನಕಟ್ಟೆ ಜಾತ್ರೆ ಹಾಗೂ ಹಾಸನ ಜಿಲ್ಲೆ ಶ್ರವಣಬೆಳಗೊಳ ಸಮೀಪದ ಬೂಕನಬೆಟ್ಟದ ಜಾತ್ರೆಗೆ ಅಲ್ಲಿನ ಜಿಲ್ಲಾಡಳಿತಗಳು ಅವಕಾಶವನ್ನು ಮಾಡಿಕೊಟ್ಟಿವೆ ಅದೇ ಮಾದರಿಯಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧವಾದ ಹೇಮಗಿರಿಯ ದನಗಳ ಜಾತ್ರೆಗೂ ಅವಕಾಶ ಮಾಡಿಕೊಡಿ, ಜಾತ್ರೆಯಲ್ಲಿ ಭಾಗವಹಿಸಲು ರೈತ ಬಾಂಧವರು ಈಗಾಗಲೇ ತಮ್ಮ ರಾಸುಗಳನ್ನು ಚೆನ್ನಾಗಿ ಮೇಯಿಸಿ ಸಿದ್ಧಮಾಡಿಟ್ಟುಕೊಂಡಿದ್ದಾರೆ ಜಾತ್ರೆಯಲ್ಲಿ ರಾಸುಗಳು ಭಾಗವಹಿಸುವುದು ಈ ಹಿಂದಿನಿAದಲೂ ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದಿರುವ ಸಂಸ್ಕೃತಿಯಾಗಿದೆ ಆದ್ದರಿಂದ ರೈತರ ಆಸೆಗೆ ತಣ್ಣೀರೆರೆಚಬೇಡಿ ಜಿಲ್ಲಾಧಿಕಾರಿಗಳೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಿ ನಾಲ್ಕು ದಿನಗಳ ಮಟ್ಟಿಗೆ ದನಗಳ ಜಾತ್ರೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಬಂಡಿಹೊಳೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುನೀಲ್, ಮುಖಂಡರಾದ ರಾಮೇಗೌಡ, ರಾಮಕೃಷ್ಣೇಗೌಡ, ವಡ್ಡರಹಳ್ಳಿ ಮಹದೇವ, ಅಗ್ರಹಾರಬಾಚಹಳ್ಳಿ ನಾಗೇಶ್, ಕಾಯಿಮಂಜೇಗೌಡ ಅವರು ಮನವಿ ಮಾಡಿದರೂ ತಹಶೀಲ್ದಾರ್ ರೂಪ ಅವರು ರೈತರ ಆಗ್ರಹಕ್ಕೆ ಜಗ್ಗಲಿಲ್ಲ. ಜಿಲ್ಲಾಧಿಕಾರಿಗಳ ಆದೇಶದಂತೆ ಜಾತ್ರೆ ನಡೆಸಲು ಅವಕಾಶವಿಲ್ಲ ಆದರೆ ದೇವರ ದರ್ಶನಕ್ಕೆ ಕಡ್ಡಾಯ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಅವಕಾಶ ಮಾಡಿಕೊಡಲಾಗುವುದು. ದಯಮಾಡಿ ಸಹಕರಿಸಬೇಕು ಎಂದು ತಿಳಿಸಿದಾಗ ರೈತರು ಹಾಗೂ ತಹಶೀಲ್ದಾರ್ ರೂಪ ಅವರ ನಡುವೆ ವಾಗ್ಯುದ್ಧವೇ ನಡೆಯಿತು …

ಅಂತಿಮವಾಗಿ ಮಾತನಾಡಿದ ತಹಶೀಲ್ದಾರ್ ರೂಪ ಜೀವವಿದ್ದರೆ ಜೀವನ, ಆರೋಗ್ಯ ಚೆನ್ನಾಗಿದ್ದರೆ ಜಾತ್ರೆ, ರಥೋತ್ಸವ ಆದ್ದರಿಂದ ನಾವು ಕೋವಿಡ್ 3ನೇ ಅಲೆಯ ತೀವ್ರತೆ ಹೆಚ್ಚಾಗುತ್ತಿರುವುದರಿಂದ ದಯಮಾಡಿ ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಿ, ದಯಮಾಡಿ ಸಹಕರಿಸಿ ಜಾತ್ರೆಗೆ ರಾಸುಗಳು ಬರುವ ನಾಲ್ಕು ಭಾಗಗಳಲ್ಲಿಯೂ ಗೇಟುಗಳನ್ನು ನಿರ್ಮಿಸಿ ದನಗಳು ಹಾಗೂ ರಾಸುಗಳು ಜಾತ್ರಾ ಮಾಳಕ್ಕೆ ಬರದಂತೆ ನಿರ್ಬಂಧ ವಿಧಿಸಲಾಗುವುದು ಜಿಲ್ಲಾಧಿಕಾರಿಗಳ ಆದೇಶದಂತೆ ಜಾತ್ರೆ ರಥೋತ್ಸವಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ ಆದ್ದರಿಂದ ರಾಸುಗಳ ಜಾತ್ರೆಗೆ ಅವಕಾಶವಿಲ್ಲ ದಯಮಾಡಿ ಸಹಕರಿಸಬೇಕು ಎಂದು ರೂಪ ಮನವಿ ಮಾಡಿದರು.

ಹೇಮಗಿರಿ ಜಾತ್ರೆಯು ರಾಜ್ಯದಲ್ಲಿಯೇ ಹೆಸರುವಾಸಿಯಾದ ಜಾತ್ರೆಯಾಗಿದ್ದು ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಜಾತ್ರೆಯ ಸೊಬಗು ಕಳೆಗುಂದುತ್ತಿದೆ. ಆದ್ದರಿಂದ ಜಾತ್ರೆಯ ವೈಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯವಾಗಿ ಆಗಲೇಬೇಕಾದ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡು ಮಾಡಿಸಲು ತಾಲೂಕು ಆಡಳಿತವು ಬದ್ಧವಾಗಿದೆ. ಈಗ ಪರಿಸ್ಥಿತಿಯು ಕೆಟ್ಟದ್ದಾಗಿರುವುದರಿಂದ ಆರೋಗ್ಯ ಸಂವರ್ಧನೆಯ ಕಡೆಗೆ ಗಮನ ಹರಿಸೋಣ, ಮುಂದಿನ ವರ್ಷ ಅದ್ದೂರಿಯಾಗಿ ಜಾತ್ರೆಯನ್ನು ನಡೆಸೋಣ ಎಂದು ತಿಳಿಸಿದ ತಹಶೀಲ್ದಾರ್ ರೂಪ ಸಭೆಯನ್ನು ಮುಕ್ತಾಯಗೊಳಿಸಿದರು…

ಜಾತ್ರಾ ಮಹೋತ್ಸವ ಕುರಿತ ಸಮಾಲೋಚನಾ ಸಭೆಯಲ್ಲಿ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪ್ರಮೋದ್, ವಲಯ ಅರಣ್ಯಾಧಿಕಾರಿಗಳಾದ ಗಂಗಾಧರ, ರಾಜಶ್ವನಿರೀಕ್ಷಕಿ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿ ಪೂಜಾ, ಪುರಸಭೆ ಮುಖ್ಯಾಧಿಕಾರಿ ಕುಮಾರ್, ಮುಖಂಡರಾದ ಕಾಯಿ ಮಂಜೇಗೌಡ, ಅಗ್ರಹಾರಬಾಚಹಳ್ಳಿ ನಾಗೇಶ್, ಬಂಡಿಹೊಳೆಅಶೊಕ್, ವಿಶ್ವನಾಥೇಗೌಡ, ರಂಗನಾಥ್, ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವೇದಬ್ರಹ್ಮ ರಾಮಭಟ್ಟ, ನಾದಸ್ವರವಿಧ್ವಾಂಸ ಲಿಂಗರಾಜು, ಶೇಷಾಧ್ರಿ, ಬಿಬಿಕಾವಲು ಗೋಪಾಲ್, ಬಂಡಿಹೊಳೆ ಮಂಜುನಾಥ್, ಜಯರಾಮೇಗೌಡ, ಲಕ್ಷ್ಮೀಪುರ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: