May 13, 2024

Bhavana Tv

Its Your Channel

ನಮ್ಮ ಮನಸ್ಸಿನಲ್ಲಿರುವ ಅಜ್ಞಾನದ ಅಂಧಕಾರವನ್ನು ಶಿವನಾಮ ಸ್ಮರಣೆ ಹಾಗೂ ಜಾಗರಣೆಯಿಂದ ಅಳಿಸಿಹಾಕಲು ಸಾಧ್ಯವಿದೆ- ಸಚಿವ ಡಾ.ನಾರಾಯಣಗೌಡ

ಕೆ.ಆರ್.ಪೇಟೆ: ನಮ್ಮ ಮನಸ್ಸಿನಲ್ಲಿರುವ ಅಜ್ಞಾನದ ಅಂಧಕಾರವನ್ನು ಶಿವನಾಮ ಸ್ಮರಣೆ ಹಾಗೂ ಜಾಗರಣೆಯಿಂದ ಅಳಿಸಿಹಾಕಲು ಸಾಧ್ಯವಿದೆ. ಆದ್ದರಿಂದ ನಾವು ಭಕ್ತಿಮಾರ್ಗದಲ್ಲಿ ಸಾಗುವ ಮೂಲಕ ದೈವದ ಸಾಕ್ಷಾತ್ಕಾರ ಸಾಧಿಸಿ ಜೀವನದಲ್ಲಿ ಯಶಸ್ಸುಗಳಿಸಿ ಮುನ್ನಡೆಯುವ ಸಂಕಲ್ಪ ಮಾಡಬೇಕು ಎಂದು ರಾಜ್ಯದ ಯುವಜನ ಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಹೇಳಿದರು ..

ಅವರು ಇಂದು ಪಟ್ಟಣದ ಸುಭಾಷ್ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಶಾಖಾ ಕಛೇರಿಯಲ್ಲಿ ಆಯೋಜಿಸಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು….

ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಸದಾ ಒತ್ತಡದಲ್ಲಿ ಮುಳುಗಿರುವ ನಮಗೆ ದೈವದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಹೊಂದಲು ಸಾಧ್ಯವಿದೆ. ಆದ್ದರಿಂದ ನಾವು ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಹಾದಿಯಲ್ಲಿಯೇ ಸಾಗುವ ಮೂಲಕ ಸರ್ವಶ್ರೇಷ್ಠ ಸಾಧನೆಯನ್ನು ಮಾಡಲು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದ ಸಚಿವ ನಾರಾಯಣಗೌಡ ಶಿವರಾತ್ರಿಯ ಪವಿತ್ರವಾದ ಈ ದಿನದಂದು ಶಿವನ ನಾಮವನ್ನು ಸ್ಮರಣೆ ಮಾಡಿ, ಭಗವಂತನ ಪೂಜೆ ಪುರಸ್ಕಾರಗಳನ್ನು ಶ್ರಧ್ಧಾಭಕ್ತಿಯಿಂದ ಮಾಡಿದರೆ ಸಾಕು ನಮ್ಮ ಮನಸ್ಸಿನ ಕ್ಲೇಷವನ್ನು ಕಳೆದು ಸಾರ್ಥಕತೆ ಹೊಂದಲು ಸಾಧ್ಯವಿದೆ. ಪವಿತ್ರ ಶಿವರಾತ್ರಿಯ ದಿನವಾದ ನಾವು ಇಂದು ನಮ್ಮ ಜೀವನದ ಮಾರ್ಗವನ್ನು ಬದಲಾವಣೆ ಮಾಡಿಕೊಂಡು ಬದಲಾವಣೆಯ ದಿಕ್ಕಿನಲ್ಲಿ ಮುನ್ನಡೆದರೆ ಸಾಕು ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕಿ ಆರೋಗ್ಯವಂತ ಸಮ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದು ಎಂದು ಹೇಳಿದ ನಾರಾಯಣಗೌಡ ತಂದೆತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು..
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೆ.ಆರ್.ಪೇಟೆ ಶಾಖೆಯ ವ್ಯವಸ್ಥಾಕರಾದ ಉಮಾಅಕ್ಕ ಕಾರ್ಯಕ್ರಮದ ನೇತೃತ್ವ ವಹಿಸಿ ಧ್ವಜಾರೋಹಣ ಮಾಡಿದರು. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಮಾಜಿಸದಸ್ಯೆ ಬಿ.ಎನ್.ಪದ್ಮಾವತಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಮಾಜಿನಿರ್ದೇಶಕ ಕೆ.ಆರ್.ಪುಟ್ಟಸ್ವಾಮಿ, ಸಚಿವರ ಆಪ್ತಸಹಾಯಕರಾದ ಕಿಕ್ಕೇರಿಕುಮಾರ್, ಸಾರಂಗಿ ಮಂಜುನಾಥಗೌಡ, ಉಧ್ಯಮಿ ಮೋಹನ್ ಮತ್ತಿತರರು ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು ಸಾವಿರಾರು ಜನರು ಸರತಿಯ ಸಾಲಿನಲ್ಲಿ ನಿಂತು ದಯಾಮಯನಾದ ಭಗವಂತ ಪರಶಿವನ ದರ್ಶನ ಪಡೆದು ಕೃತಾರ್ಥರಾದರು…

ಕೆ.ಆರ್.ಪೇಟೆ ಪಟ್ಟಣದ ಭ್ರಮರಾಂಭ ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ನಾರಾಯಣಗೌಡ ಶಿವಲಿಂಗಕ್ಕೆ ವಿಶೇಷವಾಗಿ ಅಭಿಷೇಕ ಮಾಡಿ ಧನ್ಯತಾ ಭಾವವನ್ನು ಮೆರೆದರು. ಕೆ.ಆರ್.ಪೇಟೆ ತಾಲ್ಲೂಕಿನ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿನ ಶ್ರೀ ಸಂಗಮೇಶ್ವರ, ಶ್ರೀ ಪಾರ್ವತಿ ಅಮ್ಮನವರು ಹಾಗೂ ಬಾಲಕ ಮಹದೇಶ್ವರರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು..
ತಾಲ್ಲೂಕಿನ ಕಲ್ಲಹಳ್ಳಿಯ ಪುರಾಣ ಪ್ರಸಿದ್ಧವಾದ ಶ್ರೀಲಕ್ಷ್ಮೀ ಸಮೇತ ಭೂವರಹನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀರಂಗಪಟ್ಟಣದ ಪಾಲಹಳ್ಳಿಯ ಪೈಲ್ವಾನ್ ಮಹದೇವ, ಸೋಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಜನೀಗೌಡ, ಗಂಜಿಗೆರೆ ವಿಜಯಕುಮಾರ್, ಮಾಧು, ದಾದಾಪೀರ್, ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: