May 12, 2024

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ಇತಿಹಾಸ ನಿರ್ಮಿಸಿದ ಬೃಹತ್ ಆರೋಗ್ಯ ಮೇಳಕ್ಕೆ ಚುಂಚಶ್ರೀಗಳು ಹಾಗೂ ಸಚಿವರಾದ ಡಾ.ನಾರಾಯಣಗೌಡ ಮತ್ತು ಗೋಪಾಲಯ್ಯರಿಂದ ಚಾಲನೆ

ಕೆ.ಆರ್.ಪೇಟೆಯ ಸರ್ಕಾರಿ ಎಂಜಿನಿಯರಿoಗ್ ಕಾಲೇಜು ಆವರಣದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಕ್ರಿಯಾಶೀಲ ಸಚಿವರಾದ ಡಾ.ನಾರಾಯಣಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಯವರು ಉದ್ಘಾಟಿಸಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಆರೋಗ್ಯ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಒಕ್ಕಲಿಗರ ದಂತ ವೈದ್ಯಕೀಯ ಕಾಲೇಜು, ಕಿದ್ವಾಯಿ ಆಸ್ಪತ್ರೆ, ಬಿಜಿಎಸ್ ಅಪೋಲೋ ಆಸ್ಪತ್ರೆ, ಎನೆಪೋಯಾ ಆಸ್ಪತ್ರೆ , ನಿಮ್ಹಾನ್ಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಶಾಸಕರೂ ಆದ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದಾರೆ .

ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದು, 25 ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಉಚಿತ ಕೃತಕ ಅಂಗಾAಗಗಳ ಜೋಡಣೆ, ಉಚಿತ ಕನ್ನಡಕ ವಿತರಣೆ, ಹೃದಯ ತಪಾಸಣೆ, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಸೇರಿದಂತೆ ಎಲ್ಲಾ ರೀತಿಯ ರೋಗಗಳ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಮನೆಯ ಆರೋಗ್ಯ ಚೆನ್ನಾಗಿದ್ದರೇ ದೇಶದ ಆರೋಗ್ಯ ಚೆನ್ನಾಗಿರುತ್ತೆ: ನಿರ್ಮಲಾನಂದನಾಥಶ್ರೀ

ಸಚಿವ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ಈ ಹಿಂದೆoದೂ ಕಾಣದಂತಹ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಬಹಳ ಸಂತೋಷವಾಗಿದೆ. ಬಹಳ ಕಡಿಮೆ ಸಮಯದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಕೋರೋನಾ ಹೋಗ್ತಿರುವ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಬಿಟ್ಟು ಹೋಗಿದ್ದು, ಅದರ ನಿರ್ವಹಣೆಗೆ ಈ ಆರೋಗ್ಯ ಶಿಬಿರ ಉಪಯುಕ್ತವಾಗಲಿದೆ. ದೇಶದ ಸಂಪತ್ತು ಅಂದ್ರೇ ಮಾನವ ಸಂಪತ್ತು. ಮನುಷ್ಯರು ಆರೋಗ್ಯವಾಗಿದ್ರೇ ದೇಶವೂ ಸಂಪದ್ಭರಿತವಾಗಿದೆ. ದೊಡ್ಡ ದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇವತ್ತು ನಿಮ್ಮ ಮನೆ ಬಾಗಿಲಿಗೆ ಬಂದಿವೆ. ಕೊರೋನಾ ಎರಡು ವರ್ಷ ನಮ್ಮನ್ನ ಕಾಡಿತ್ತು. ಸಾಮಾಜಿಕ ಚಟುವಟಿಕೆಗಳನ್ನು ಮಾಡುವುದಕ್ಕೆ ಸಾಕಷ್ಟು ಸಮಸ್ಯೆ ಆಯಿತು. ಜನರು ಸಾಕಷ್ಟು ಪರಿತಪಿಸುವಂತಾಯಿತು. ಬೆಡ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಸಾಕಷ್ಟು ಸಮಸ್ಯೆ ಆಗಿತ್ತು. ಇಂತಹ ಸಂದರ್ಭದಲ್ಲಿ ಸಚಿವ ಡಾ.ನಾರಾಯಣಗೌಡ ಅವರು ಉತ್ತಮ ಸೇವೆಯನ್ನು ಮಾಡಿದ್ದಾರೆ. ತಾಯಿ ಆರೋಗ್ಯ ಚೆನ್ನಾಗಿದ್ದರೇ, ಮನೆಯ ಆರೋಗ್ಯ ಚೆನ್ನಾಗಿರುತ್ತೆ. ಮನೆಯ ಆರೋಗ್ಯ ಚೆನ್ನಾಗಿದ್ರೇ ದೇಶದ ಆರೋಗ್ಯ ಚೆನ್ನಾಗಿರುತ್ತೆ. ಈ ಬೃಹತ್ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶ್ರೀನಿರ್ಮಲಾನಂದನಾಥ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಗ್ರಾಮೀಣ ಜನರಿಗೆ ಆರೋಗ್ಯವಿಲ್ಲದಿದ್ದರೇ, ಎಷ್ಟೇ ಸಂಪತ್ತಿದ್ದರೂ ಪ್ರಯೋಜನವಿಲ್ಲ: ಚಂದ್ರವನ ಸ್ವಾಮೀಜಿ

ಈ ಬೃಹತ್ ಆರೋಗ್ಯ ಶಿಬಿರ ಕಂಡು ನನಗೆ ತುಂಬಾ ಸಂತೋಷ ಆಗುತ್ತಿದೆ. ಇಂತಹ ಒಳ್ಳೇಯ ಕೆಲಸ ಮಾಡಿರುವ ಸಚಿವ ಡಾ.ನಾರಾಯಣಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೆ.ಆರ್. ಪೇಟೆ ಜನರ ಪಾಲಿಗೆ ಸಚಿವ ನಾರಾಯಣಗೌಡ ಮುತ್ತು. ಮುಂದಿನ ದಿನಗಳಲ್ಲಿ ಜನರ ಕಲ್ಯಾಣಕ್ಕಾಗಿ ದುಡಿಯುವವರ ಸಂಖ್ಯೆ ಕಡಿಮೆ ಆಗಲಿದೆ. ಏನಾದರೂ ಸಣ್ಣ ಕೆಲಸ ಆಗಬೇಕು ಅಂದರೂ ಸರ್ಕಾರವೇ ಮಾಡಲಿ ಎಂದು ಜನರು ಹೇಳುತ್ತಿದ್ದಾರೆ. ಒಬ್ಬ ಮನುಷ್ಯನಿಗೆ ಉತ್ತಮ ಆರೋಗ್ಯವಿಲ್ಲದಿದ್ದರೇ, ಅವನಿಗೆ ಎಷ್ಟೇ ಸಂಪತ್ತಿದ್ದರೂ ಏನು ಪ್ರಯೋಜನವಾಗಲ್ಲ. ಹಾಗಾಗಿ, ಎಲ್ಲರೂ ಆರೋಗ್ಯವನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಈ ಆರೋಗ್ಯ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ತ್ರಿನೇತ್ರ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರುಗಳಾದ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಆಶೀರ್ವಾದದಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ನಿರ್ಮಲಾನಂದನಾಥ ಸ್ವಾಮೀಜಿಗಳು ಕೂಡ ಅದೇ ರೀತಿ ಪ್ರೀತಿ, ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. 10 ವರ್ಷಗಳ ಹಿಂದೆ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇ, ಆಗ ಬಾಲಗಂಗಾಧರನಾಥ ಸ್ವಾಮೀಜಿಯವರು ಆಗಮಿಸಿ ಆಶೀರ್ವದಿಸಿದ್ರು. ಇವತ್ತು ನಿರ್ಮಲಾನಂದನಾಥ ಸ್ವಾಮೀಜಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ಆರೋಗ್ಯ ಸೇವೆ ನೀಡಬೇಕು ಎಂದು ಈ ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದೇವೆ. ಕಿದ್ವಾಯಿ, ನಿಮ್ಹಾನ್ಸ್, ಬಿಜಿಎಸ್, ಎನೆಪೊಯಾ ಆಸ್ಪತ್ರೆ ಸೇರಿದಂತೆ ದೊಡ್ಡದೊಡ್ಡ ಆಸ್ಪತ್ರೆಗಳಿಂದ ವೈದ್ಯರು ಬಂದಿದ್ದು, ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಉಚಿತ ಕನ್ನಡಕ, ಕೃತಕ ಅಂಗಾAಗಗಳು ಸೇರಿದಂತೆ ಎಲ್ಲಾ ರೀತಿಯ ತಪಾಸಣೆ ನಡೆಸಲಾಗುತ್ತಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಜನ ಸಾಮಾನ್ಯರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ನೀಡುವ ಕಾಯಕದಲ್ಲಿ ಸಚಿವ ಡಾ.ನಾರಾಯಣಗೌಡರ ಕಾರ್ಯ ಶ್ಲಾಘನೀಯವಾದದ್ದು: ಸಚಿವ ಗೋಪಾಲಯ್ಯ ಮೆಚ್ಚುಗೆ

ಬಹಳ ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಎಲ್ಲರೂ ಈ ರೀತಿಯ ಆರೋಗ್ಯ ತಪಾಸಣೆ ಆಯೋಜಿಸಲು ಸಾಧ್ಯವಿಲ್ಲ. ಅಂತಹ ಕೆಲಸವನ್ನು ಸಚಿವ ನಾರಾಯಣಗೌಡರು ಮಾಡಿದ್ದಾರೆ. ತಾಯಿ ನೆಲದ ಋಣವನ್ನು ತೀರಿಸಬೇಕು, ಕೆ.ಆರ್. ಪೇಟೆ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಎಂಬ ಹಠ, ಕನಸು ಹೊಂದಿದ್ದಾರೆ. ನಾನು ಮಂಡ್ಯ ಜಿಲ್ಲೆಯ ಉಸ್ತುವಾರಿಯಾಗಿದ್ರೂ ನಾರಾಯಣಗೌಡರ ಜೊತೆಯಾಗಿ ಕೆಲಸ ಮಾಡುತ್ತೇವೆ. ನಾವಿಬ್ಬರೂ ಅಣ್ಣತಮ್ಮಂದಿರ ರೀತಿಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇದೇ ತಿಂಗಳು 19 ರಂದು ಉದ್ಯೋಗ ಮೇಳವನ್ನು ಕೂಡ ಆಯೋಜಿಸಿದ್ದಾರೆ. ಜನರಿಗೆ ಮುಖ್ಯವಾಗಿ ಬೇಕಾಗಿರೋದು ಆರೋಗ್ಯ, ಶಿಕ್ಷಣ, ಉದ್ಯೋಗ. ಆ ನಿಟ್ಟಿನಲ್ಲಿ ನಾರಾಯಣಗೌಡರು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಗೋಪಾಲಯ್ಯನವರು ಹೇಳಿದರು.

ಕಾರ್ಯಕ್ರಮದಲ್ಲಿ ಆಯುಷ್ ಕಿಟ್, ಶ್ರವಣ ದೋಷ ಮಕ್ಕಳಿಗೆ ಡಿಜಿಟಲ್ ಶ್ರವಣ ಯಂತ್ರ ವಿತರಣೆ, ಉಚಿತ ಕನ್ನಡಕ, ಆಯುಷ್ ಔಷಧಗಳ ವೈದ್ಯಕೀಯ ಕಿಟ್, ಔಷಧ ಮಾತ್ರೆಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಾ.ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳು, ಜಿಲ್ಲಾಧಿಕಾರಿ ಅಶ್ವಥಿ ಹಾಗೂ ಸಚಿವ ಡಾ.ನಾರಾಯಣಗೌಡ ಅವರು ಆರೋಗ್ಯ ತಪಾಸಣೆ ಸ್ಥಳಗಳಿಗೆ ತೆರಳಿ ರೋಗಿಗಳೊಂದಿಗೆ ಕುಶಲೋಪರಿ ನಡೆಸಿ ಪರಿಶೀಲನೆ ನಡೆಸಿದರು. ಜೊತೆಗೆ ಆರೋಗ್ಯ ಶಿಬಿರಕ್ಕೆ ಬರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಸ್ವತಃ ಶ್ರೀಗಳು ಹಾಗೂ ಡಾ.ನಾರಾಯಣಗೌಡ ಹಾಗೂ ಜಿಲ್ಲಾಧಿಕಾರಿ ಅಶ್ವಥಿ ಅವರು ಊಟವನ್ನು ಬಡಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: