April 29, 2024

Bhavana Tv

Its Your Channel

ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಚಾಲನೆ

ಕೆ.ಆರ್.ಪೇಟೆ ತಾಲ್ಲೂಕಿನ ಮರಡಿಲಿಂಗೇಶ್ವರ ಕ್ಷೇತ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಎರಡು ದಿನಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಚಾಲನೆ..ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಕ್ರೀಡಾಪಟುಗಳ ಗಮನ ಸೆಳೆದ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ….

ಕೆ.ಆರ್.ಪೇಟೆ ತಾಲ್ಲೂಕಿನ ಮಾರ್ಗೋನಹಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯೂತ್ ಟೀಮ್ ನೇತೃತ್ವದಲ್ಲಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್ ಕ್ರಿಕೆಟ್ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು..

ಕೃಷ್ಣರಾಜಪೇಟೆ ತಾಲ್ಲೂಕಿನ ಮಾರ್ಗೋನಹಳ್ಳಿಯ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಶಾಲೆಯ ಕ್ರೀಡಾಂಗಣದಲ್ಲಿ ಆರಂಭವಾದ ಎರಡು ದಿನಗಳ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್ ಮತ್ತು ಬಿ.ಪ್ರಕಾಶ್ ಚಾಲನೆ ನೀಡಿದರು..

ನೆರೆದಿದ್ದ ಕ್ರೀಡಾಪಟುಗಳು ಹಾಗೂ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಯುವಜನರು ಕ್ರೀಡೆ ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸೋಮಾರಿತನದಿಂದ ಹೊರಬಂದು ಕ್ರಿಯಾಶೀಲತೆ ಹಾಗೂ ಲವಲವಿಕೆಯಿಂದ ಸಾಧನೆ ಮಾಡಬೇಕು.. ಯುವಜನರನ್ನು ನಿಷ್ಕ್ರಿಯಗೊಳಿಸುವ ಮೊಬೈಲ್ ಗೇಮ್ ಮತ್ತು ಚಾಟಿಂಗ್ ನಿಂದ ದೂರವಿದ್ದು ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಸೇರಿದಂತೆ ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು..

ಮಾಜಿಶಾಸಕ ಬಿ.ಪ್ರಕಾಶ್ ಮಾತನಾಡಿ ಯುವಜನರು ಲವಲವಿಕೆಯಿಂದ ಆರೋಗ್ಯವಂತರಾಗಿರಲು ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿ ಬೇಕಾಗಿವೆ. ಆದ್ದರಿಂದ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾಗದ ಕ್ರೀಡೆಯನ್ನು ಆಯ್ದುಕೊಂಡು ಕ್ರೀಡಾ ತರಬೇತುದಾರರ ಮಾರ್ಗದರ್ಶನ ಪಡೆದುಕೊಂಡು ಸಾಧನೆ ಮಾಡಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಪ್ರಕಾಶ್ ಕಿವಿಮಾತು ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಡಾ.ರಾಮಾನಾಯಕ್, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಆರ್.ಶ್ರೀನಿವಾಸ್, ಮಾಜಿಸದಸ್ಯ ಕುಮಾರ್, ನಂಜೇಗೌಡ, ಕ್ರೀಡಾಕೂಟದ ಆಯೋಜಕರಾದ ಎಂ.ಎಸ್.ಮಧು, ಯೋಗರಾಜು, ರಘು, ಎಂ.ಪ್ರದೀಪ, ಚಂದ್ರಶೇಖರ್, ಸಾಯಿಸುಮಿತ್ ಮತ್ತು ನಗರೂರು ಮಾರ್ಗೋನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು…

ರಾಜ್ಯದ ವಿವಿಧ ಭಾಗಗಳಿಂದ ೨೦ಕ್ಕೂ ಹೆಚ್ಚಿನ ತಂಡಗಳು ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಕ್ರೀಡಾಕೂಟದಲ್ಲಿ ಗೆದ್ದ ಪ್ರಥಮ ತಂಡಕ್ಕೆ ಜೋಡಿ ಟಗರುಗಳು ಮತ್ತು ಕಫ್ ಎರಡನೇ ಸ್ಥಾನ ಪಡೆದ ತಂಡಕ್ಕೆ ಜೋಡಿ ಹೋತಗಳು ಮತ್ತು ಕಫ್ ಬಹುಮಾನವನ್ನು ಆಯೋಜಕರು ಘೋಷಿಸಿದ್ದಾರೆ. ಟಗರುಗಳು ಮತ್ತು ಹೋತಗಳು ಅತಿಥಿಗಳು ಹಾಗೂ ಕ್ರೀಡಾಪಟುಗಳ ಆಕರ್ಷಣೆಯ ಕೇಂದ್ರವಾಗಿವೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: