May 14, 2024

Bhavana Tv

Its Your Channel

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ

ಕೆ.ಆರ್.ಪೇಟೆ:- ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ತಂಬಾಕು ಸೇವನೆಯು ಮಾರಕವಾಗಿದೆ. ಆದ್ದರಿಂದ ಯುವಜನರು ಹಾಗೂ ವಿದ್ಯಾರ್ಥಿಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿರಬೇಕು ಎಂದು ಜೆಎಂಎಫ್ ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಹೆಚ್. ಓಂಕಾರಮೂರ್ತಿ ಕರೆ ನೀಡಿದರು ..

ಅವರು ಇಂದು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು..

ಯುವಜನರು ಇಂದು ಕ್ಷಣಿಕ ಸುಖದ ಆಸೆಗೆ ಒಳಗಾಗಿ ತಂಬಾಕು ಹಾಗೂ ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಉತ್ಪನ್ನಗಳಲ್ಲಿರುವ ನಿಕೋಟಿನ್ ಎಂಬ ವಿಷಕಾರಿ ಅಂಶವು ಯುವಜನರನ್ನು ತಂಬಾಕು ಉತ್ಪನ್ನಗಳ ದಾಸರನ್ನಾಗಿ ಮಾಡುತ್ತಿದೆ ಆದ್ದರಿಂದ ತಂಬಾಕು ಉತ್ಪನ್ನಗಳ ಬಳಕೆಯಿಂದ ಯುವಜನರು ದೂರವಿರುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಕಬೇಕು ಎಂದು ನ್ಯಾಯಾಧೀಶರಾದ ಓಂಕಾರಮೂರ್ತಿ ಮನವಿ ಮಾಡಿದರು…

ವಕೀಲರ ಸಂಘದ ಮಾಜಿಅಧ್ಯಕ್ಷ ಹೆಚ್.ರವಿ ಮಾತನಾಡಿ ತಂಬಾಕು ಬಳಕೆಯು ಯುವಜನರನ್ನು ಮೃಗಗಳಂತೆ ಮಾಡುವುದಲ್ಲದೇ ಕಳ್ಳತನ ಸೇರಿದಂತೆ ಸಮಾಜಘಾತುಕ ಕೆಲಸಗಳಿಗೆ ಪ್ರೇರೇಪಿಸಿ ಸಮಾಜವನ್ನೇ ನಾಶಪಡಿಸುವ ಕೆಲಸವನ್ನು ಯುವಕರಿಂದ ಮಾಡಿಸಿ ಕೆಟ್ಟ ಕೆಲಸಗಳಿಗೆ ಪ್ರೇರೇಪಣೆ ನೀಡುತ್ತದೆ. ಆದ್ದರಿಂದ ತಂಬಾಕು ಬಳಕೆಯಿಂದ ಯುವಜನರು ಹಾಗೂ ವಿದ್ಯಾರ್ಥಿಗಳು ದೂರವಿರಬೇಕು ಎಂದು ರವಿ ಮನವಿ ಮಾಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಹಾಗೂ ಅಪರ ಸಿವಿಲ್ ನ್ಯಾಯಾಧೀಶರಾದ ಆರ್.ಶಕುಂತಲಾ ಮಾತನಾಡಿ ಬೀಡಿ, ಸಿಗರೇಟು, ಹೊಗೆಸೊಪ್ಪು, ಗುಟ್ಕಾ ಸೇರಿದಂತೆ ಇತರೆ ತಂಬಾಕು ವಸ್ತುಗಳು ಹಾಗೂ ಚರಸ್, ಅಫೀಮು ಸೇರಿದಂತಹ ಮಾದಕ ವಸ್ತುಗಳು ಮಾನವ ಕುಲವನ್ನೇ ಸರ್ವನಾಶ ಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ತಂಬಾಕು ಬಳಕೆಯಿಂದ ಸಾರ್ವಜನಿಕರು ದೂರವಿರುವಂತೆ ಅರಿವಿನ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು..

ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ವಿಜಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಉಪಾಧ್ಯಕ್ಷ ಬಿ.ಸಿ.ದಿನೇಶ್, ಜಂಟಿಕಾರ್ಯದರ್ಶಿ ಸಿ.ನಿರಂಜನ್, ಖಜಾಂಚಿ ಜಗಧೀಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

error: