April 29, 2024

Bhavana Tv

Its Your Channel

ವಿಶ್ವ ತಂಬಾಕು ವಿರೋಧಿ ದಿನ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ

ಕೆ.ಆರ್.ಪೇಟೆ:-ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸದೇ ತಂಬಾಕಿನಿAದಾಗುವ ದುಷ್ಪರಿಣಾಮಗಳ ಬಗ್ಗೆ ಶ್ರೀ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕರೆ ನೀಡಿದರು ..

ಅವರು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು..

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ಯಾವುದೂ ಇಲ್ಲ, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಸಾವಿನ ಮನೆಯ ಬಾಗಿಲನ್ನು ತಟ್ಟುವಂತೆ ಮಾಡುವ ನಿಕೋಟಿನ್ ಎಂಬ ವಿಷಕಾರಿ ವಸ್ತುವು ತಂಬಾಕಿನಲ್ಲಿರುವುದರಿAದ ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಹಾಗೂ ಮಹಿಳೆಯರು ತಂಬಾಕು ವಸ್ತುಗಳ ಬಳಕೆಯಿಂದ ದೂರವಿದ್ದು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಮಹಾಬಲಕುಲಾಲ್ ಮನವಿ ಮಾಡಿದರು..

ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿರುವ ಧರ್ಮಸ್ಥಳ ಸಂಸ್ಥೆಯು ತಂಬಾಕಿನಿAದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಕುಡಿತ, ಮಾದಕ ವಸ್ತುಗಳ ಬಳಕೆಯಿಂದ ಆಗುವ ಕೆಡಕುಗಳ ಬಗ್ಗೆ ಜಾಗೃತಿ ಮೂಡಿಸಿ ಕ್ಷಣಿಕ ಸುಖದ ಆಸೆಗೆ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳದಂತೆ ಮನವಿ ಮಾಡುತ್ತಿದ್ದಾರೆ. ಯುವಜನರು ತಂಬಾಕು ಸೇರಿದಂತೆ ಮಾದಕ ವಸ್ತುಗಳ ದಾಸರಾಗಿ ಸಮಾಜಕಂಟಕರಾಗಿ ತಂದೆತಾಯಿಗಳಿಗೆ ಹಾಗೂ ಸಮಾಜಕ್ಕೆ ಹೊರೆಯಾಗದೇ ಶಿಸ್ತುಬದ್ಧವಾದ ಆರೋಗ್ಯವಂತ ಜೀವನ ನಡೆಸಿ ಇತರರಿಗೆ ಮಾದರಿಯಾಗಬೇಕು ಎಂದು ಇನ್ಸ್ ಪೆಕ್ಟರ್ ದೀಪಕ್ ಕರೆ ನೀಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಚಂದ್ರಶೇಖರ್, ಧರ್ಮಸ್ಥಳ ಜನಜಾಗೃತಿ ಹೋರಾಟ ಸಮಿತಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಸ್ತ್ರೀ ಶಕ್ತಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಮೇಲ್ವಿಚಾರಕರಾದ ಅನ್ನಪೂರ್ಣ, ಕಾವ್ಯಹರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: