May 15, 2024

Bhavana Tv

Its Your Channel

ಅಕ್ಟೋಬರ್ 13ರಿಂದ 16 ರವರೆಗೆ ಕೃಷ್ಣರಾಜಪೇಟೆಯ ಪವಿತ್ರ ತ್ರಿವೇಣಿ ಸಂಗಮದಲ್ಲಿ ದಕ್ಷಿಣ ಭಾರತದ ಮಹಾ ಕುಂಭಮೇಳ

ಕೆ.ಆರ್.ಪೇಟೆ :- ದಕ್ಷಿಣ ಭಾರತದ ಮಹಾ ಕುಂಭಮೇಳವು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಪವಿತ್ರ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13, 14, 15 ಮತ್ತು 16 ರಂದು ನಡೆಯಲಿದೆ ..

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯಪುರ, ಅಂಬಿಗರಹಳ್ಳಿ, ಸಂಗಾಪುರ ಗ್ರಾಮಗಳ ಸಮೀಪದಲ್ಲಿರುವ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ಮೂರು ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಿ ಹರ ಗುರು ಚರಮೂರ್ತಿಗಳು ಹಾಗೂ ಸಾಧುಸಂತರ ಸಮಕ್ಷಮದಲ್ಲಿ ಪುಣ್ಯಸ್ನಾನ ಮಾಡಲು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಕೈಗೊಂಡಿದ್ದಾರೆ..

ಪವಾಡಪುರುಷರಾದ ಶ್ರೀ ಮಲೈಮಹದೇಶ್ವರರು ಬಾಲಕರಾಗಿದ್ದಾಗ ಪ್ರಪ್ರಥಮವಾಗಿ ಪವಾಡ ನಡೆಸಿ ತಾವು ಹೊಂದಿದ್ದ ಕೆಂಪು ವಸ್ತ್ರವನ್ನೇ ನೀರ ಮೇಲೆ ಹಾಸಿ, ಹರಿಗೋಲನ್ನಾಗಿ ಮಾಡಿಕೊಂಡು ವಿಶಾಲವಾದ ನದಿಯನ್ನು ದಾಟಿಕೊಂಡು ನೆರೆಯ ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರಕ್ಕೆ ಹೋಗಿದ್ದು ಇತಿಹಾಸದ ಪುಟಗಳಲ್ಲಿ, ಜನಪದರ ಹಾಡುಗಳಲ್ಲಿ ದಾಖಲಾಗಿದೆ ..

ಉತ್ತರ ಭಾರತದ ನಾಗಾ ಸಾಧುಗಳು ಹಾಗೂ ಸಾಧು ಸಂತರ ನೇತೃತ್ವದಲ್ಲಿ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರನ್ನು ಎಂಟು ವರ್ಷಗಳ ನಂತರ ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕರೆಸಿ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಧಾರ್ಮಿಕ ಕಾರ್ಯಕ್ರಮವನ್ನು ರೂಪಿಸಲು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ.ಶ್ರೀ ಶ್ರೀ ನಿರ್ಮಲಾನಂದನಾಥ ಶ್ರೀಗಳು, ಸುತ್ತೂರು ಪೀಠದ ಶ್ರೀ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಎರಡು ಮೂರು ಸುತ್ತಿನ ಸಮಾಲೋಚನೆಯನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಸಚಿವರು ನಡೆಸಿದ್ದಾರೆ…

ಕೃಷ್ಣರಾಜಸಾಗರ ಜಲಾಶಯವು ತುಂಬಿತುಳುಕುತ್ತಿರುವ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದ ಸುತ್ತಲೂ ಜಲಾಶಯದ ಹಿನ್ನೀರಿನ ಜಲರಾಶಿಯು ಹರಡಿದ್ದು, ಕಣ್ಣು ಹಾಯಿಸಿದಷ್ಟು ಪ್ರದೇಶವೆಲ್ಲವೂ ಜಲರಾಶಿಯ ವೈಭವವೇ ಗೋಚರಿಸುತ್ತಿದೆ. ಹೆಲಿಟೂರಿಸಂ ಸೇರಿದಂತೆ ವಿವಿಧ ಜಲಸಾಹಸ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ತ್ರಿವೇಣಿ ಸಂಗಮಕ್ಷೇತ್ರಕ್ಕೆ ಜನಸಾಗರವೇ ಹರಿದು ಬರುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಜಿಲ್ಲಾಡಳಿತವು ಮಹದೇಶ್ವರ ಬೆಟ್ಟ, ಮಂಡ್ಯ ಮೈಸೂರು ಸೇರಿದಂತೆ ಮೂರು ಕಡೆಗಳಿಂದ ಶ್ರೀ ಮಲೈಮಹದೇಶ್ವರ ಜ್ಯೋತಿ ರಥಯಾತ್ರೆಯನ್ನು ನಡೆಸಿ ಮಹಾಕುಂಭಮೇಳದ ಮಹತ್ವದ ಬಗ್ಗೆ ಶ್ರೀ ಸಾಮಾನ್ಯರಿಗೆ ಅರಿವಿನ ಜಾಗೃತಿಯನ್ನು ಮೂಡಿಸಿ ಅಕ್ಟೋಬರ್ 12 ನೇ ತಾರೀಖು ಮೂರು ರಥಗಳು ಕೆ.ಆರ್.ಪೇಟೆಗೆ ಬಂದು 13 ನೇ ತಾರೀಖು ಅದ್ದೂರಿ ಮೆರವಣಿಗೆಯ ಮೂಲಕ ತ್ರಿವೇಣಿ ಸಂಗಮ ಕ್ಷೇತ್ರವನ್ನು ತಲುಪಲಿವೆ .

ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಬಾಲಕ ಮಲೈಮಹದೇಶ್ವರರು ಪವಾಡ ನಡೆಸಿದ ಸವಿ ನೆನಪಿಗಾಗಿ ಜಲರಾಶಿಗೆ ಹೊಂದಿಕೊAಡAತೆ ಭವ್ಯವಾದ ದೇವಾಲಯವನ್ನು ಭಕ್ತಾದಿಗಳ ಸಹಕಾರದೊಂದಿಗೆ ನಿರ್ಮಿಸಿದ್ದು ಅಕ್ಟೋಬರ್ 13 ರಂದು ವಿಶೇಷ ಪೂಜೆಪುರಸ್ಕಾರಗಳನ್ನು ನಡೆಸಿ ಮಹದೇಶ್ವರರ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮಹಾಕುಂಭಮೇಳದ ಅಂಗವಾಗಿ ವಾರಣಾಸಿಯಿಂದ ಆಗಮಿಸುವ ಆಗಮಿಕರು ಹಾಗೂ ವಿಪ್ರಬಾಂಧವರು 13,14, 15,16 ರಂದು ಗಂಗಾರತಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ..

ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ನಿರ್ಮಿಸಿರುವ ಪಾಳುಬಿದ್ದಿದ್ದ ಯಾತ್ರಿನಿವಾಸ ಕಟ್ಟಡಕ್ಕೆ ಹೊಸ ಸ್ಪರ್ಶವು ಸಿಕ್ಕಿದ್ದು ಮಹಾ ಕುಂಭಮೇಳದ ಯಶಸ್ಸಿಗೆ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ಖ್ಯಾತಿಯ ಮೋಹನ ಆಳ್ವ, ಕನ್ನಡವೇ ಸತ್ಯ ಕಾರ್ಯಕ್ರಮ ಸಂಘಟಕ ರಂಗಣ್ಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ನಿರ್ದೇಶಕ ಮಂಜುನಾಥ್ ಅವರ ಸಲಹೆ ಸೂಚನೆ ಮಾರ್ಗದರ್ಶನ ಪಡೆದು ಸಾಹಸ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಓ ಶಾಂತಾ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಸಚಿವ ನಾರಾಯಣಗೌಡರ ಆಪ್ತಕಾರ್ಯದರ್ಶಿ ಪ್ರಭಾಕರ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪ, ಸಂಗಮ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಡಾ.ಅಂಚಿ ಸಣ್ಣಸ್ವಾಮಿಗೌಡ ಅವರ ನೇತೃತ್ವದಲ್ಲಿ ನಾಲ್ಕೈದು ಸುತ್ತುಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯು ನಡೆದಿದೆ ..

ಮಹಾಕುಂಭ ಮೇಳವು ನಡೆಯಲಿರುವ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ 5ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಪ್ರವಾಸಿಗಳಿಗೆ ಹಾಗೂ ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಬಸ್ ಸೌಲಭ್ಯ ಸೇರಿದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು 07 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ. ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡ ಅವರು ಮಹಾಕುಂಭಮೇಳವನ್ನು ಯಶಸ್ವಿಯಾಗಿ ನಡೆಸಲು ಸಂಕಲ್ಪ ಮಾಡಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವನ್ನು ಬಳಸಿಕೊಂಡು ಹತ್ತಾರು ಸುತ್ತಿನ ಸಭೆ ನಡೆಸಿ ಕಾರ್ಯೋನ್ಮುಖರಾಗಿದ್ದಾರೆ..

ಮಹಾಕುಂಭ ಮೇಳದ ಯಶಸ್ಸಿಗಾಗಿ ತ್ರಿವೇಣಿ ಸಂಗಮದ ಯಾತ್ರಿನಿವಾಸದಲ್ಲಿ ಜಿಲ್ಲಾಧಿಕಾರಿ ಅಶ್ವಥಿ ಅವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವ ನಾರಾಯಣಗೌಡ ಅವರು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಸಂಚರಿಸಿ ಯಾವ ಸ್ಥಳದಲ್ಲಿ ಏನೇನು ಸೌಲಭ್ಯಗಳಿರಬೇಕು, ಹೆಲಿಟೂರಿಸಂ ನಡೆಸಲು ಹೆಲಿಪ್ಯಾಡ್ ಎಲ್ಲಿ ನಿರ್ಮಾಣವಾಗಬೇಕು, ಜಲಸಾಹಸ ಕ್ರೀಡೆಗಳನ್ನು ಎಲ್ಲಿ ನಡೆಸಬೇಕು, ವಾಹನಗಳ ಪಾರ್ಕಿಂಗ್ ಪ್ರದೇಶ, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸಮರೋಪಾಧಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ .

ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಅಕ್ಟೋಬರ್ 13,14,15 ಹಾಗೂ 16ರಂದು ನಡೆಯಲಿರುವ ಮಹಾಕುಂಭಮೇಳ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು ಮಹಾಕುಂಭಮೇಳವು ತಾಲ್ಲೂಕಿನ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಅದ್ದೂರಿ ಧಾರ್ಮಿಕ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿರುವುದು ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯಲ್ಲಿ ಸಂಚಲನ ಮೂಡಿಸಿದೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: