April 29, 2024

Bhavana Tv

Its Your Channel

ರೇವತಿ ನಕ್ಷತ್ರದ ಶುಭ ದಿನದ ಅಂಗವಾಗಿ ಭೂವರಹನಾಥ ಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಅಡ್ಡಪಲ್ಲಕಿ ಉತ್ಸವ.

ಕೆ.ಆರ್.ಪೇಟೆ :- ರೇವತಿ ನಕ್ಷತ್ರದ ಶುಭದಿನದ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಭೂವರಹನಾಥ ಕ್ಷೇತ್ರಕ್ಕೆ ಹರಿದುಬಂದ ಭಕ್ತ ಸಾಗರ.. ಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಅಡ್ಡಪಲ್ಲಕಿ ಉತ್ಸವ..ಮುಗಿಲು ಮುಟ್ಟಿದ ಸಂಭ್ರಮ.ಪರಕಾಲ ಶ್ರೀಗಳಿಂದ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ..ಮೊಳಗಿದ ಜಯಘೋಷಗಳು, ವೇದಮಂತ್ರಗಳು …

ರೇವತಿ ನಕ್ಷತ್ರದ ಶುಭ ದಿನದ ಅಂಗವಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಭೂವರಹನಾಥ ಕಲ್ಲಹಳ್ಳಿಯಲ್ಲಿ ಲಕ್ಷ್ಮೀಸಮೇತನಾದ ಭೂವರಹನಾಥ ಶಿಲಾಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಪುರಸ್ಕಾರಗಳು ಶ್ರಧ್ಧಾಭಕ್ತಿಯಿಂದ ನಡೆದವು …

ಮೈಸೂರಿನ ಪರಕಾಲ ಮಠದ ಪೀಠಾಧಿಪತಿಗಳಾದ ಶ್ರೀ ಲಕ್ಷ್ಮೀಹಯಗ್ರೀವ ಪರಕಾಲ ಸ್ವಾಮೀಜಿಗಳು ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ಭೂವರಹನಾಥಸ್ವಾಮಿಯು ಲೋಕಕಂಟಕ ದುಷ್ಠನಾದ ಅಸುರ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ಸಂರಕ್ಷಣೆ ಮಾಡಿದ್ದು ರೇವತಿ ನಕ್ಷತ್ರದ ಶುಭ ದಿನದಂದಾಗಿರುವುದರಿAದ ಸ್ವಾಮಿಗೆ ಪಟ್ಟಾಭಿಷೇಕ ಮಾಡಿ ಅಡ್ಡಪಲ್ಲಕಿ ಉತ್ಸವ ಮಾಡಿ ಸಂಭ್ರಮಾಚರಣೆ ನಡೆಸಲಾಯಿತು..ಜೈ ಗೋವಿಂದ, ಜೈ ಶ್ರೀನಿವಾಸ, ಜೈ ಭೂವರಾಹ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು..

ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಜೇನುತುಪ್ಪ, ಹಸುವಿನ ತುಪ್ಪ, ಮೊಸರು, ಪವಿತ್ರ ಗಂಗಾಜಲ ಹಾಗೂ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸೇವಂತಿಗೆ, ಕನಕಾಂಬರ, ಮಲ್ಲೆ, ಸಂಪಿಗೆ, ಜವನ, ತುಳಸಿ, ಪವಿತ್ರ ಪತ್ರೆಗಳು, ಸುಗಂಧರಾಜ, ಸ್ಪಟಿಕ, ಪಾರಿಜಾತ, ಕಮಲ ಸೇರಿದಂತೆ 58 ವಿವಿಧ ಬಗೆಯ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು ..

ದೇಶದಲ್ಲಿಯೇ ಅಪರೂಪದ್ದಾಗಿದ್ದು ಸುಮಾರು ಮೂರು ಸಾವಿರ ವರ್ಷಗಳಿಗೂ ಹೆಚ್ಚು ಪುರಾತನವಾದ ಅಪರೂಪದ ಸಾಲಿಗ್ರಾಮ ಶ್ರೀಕೃಷ್ಣಶಿಲೆಯಿಂದ ನಿರ್ಮಿಸಿರುವ ಭೂವರಹನಾಥ ಮೂರ್ತಿಗೆ ಭಾರೀ ಗಾತ್ರದ ಹೂಮಾಲೆಗಳಿಂದ ಅಲಂಕಾರ ಮಾಡಿ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು..

ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ನಿವಾಸ ರಾಘವನ್ ಅವರ ನೇತೃತ್ವದಲ್ಲಿ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರಧ್ಧಾಭಕ್ತಿಯಿಂದ ನಡೆದವು.. ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಸಿಹಿಪೊಂಗಲ್, ಬಿಸಿಬೇಳೆಬಾತ್ ಹಾಗೂ ಉಪ್ಪಿಟ್ಟು ಪ್ರಸಾದವನ್ನು ನೀಡಲಾಯಿತು..

ರಾಜ್ಯದ ನಾನಾ ಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ರೇವತಿ ನಕ್ಷತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..ಬೆಳಿಗ್ಗೆ 9 ಗಂಟೆಗೆ ಆರಂಭವಾದ ಅಭಿಷೇಕ ಹಾಗೂ ಪೂಜಾ ಕಾರ್ಯಕರ್ತರ ಮಧ್ಯಾಹ್ನ ಒಂದೂವರೆ ಗಂಟೆಯ ವೇಳೆಗೆ ಸಂಪನ್ನಗೊAಡಿತು…

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್, ಆಯೋಗದ ಸದಸ್ಯೆ ಬಿ.ವಿ.ಗೀತಾ, ಸಚಿವರಾದ ಡಾ.ನಾರಾಯಣಗೌಡರ ಧರ್ಮಪತ್ನಿ ದೇವಕಿ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ದಾನಿಗಳಾದ ದುಬೈ ಚಂದ್ರಶೇಖರ್, ಶ್ರೀಮತಿ ರಾಧಾರಾಘವನ್, ಡಾ.ಅಧಿತಿರಾಘವನ್, ಮಲ್ಲೇಶ್ವರಂ ಮಧು, ಬೆಂಗಳೂರು ದರ್ಶನ್, ಕೆಎಂಎಫ್ ನಿರ್ದೇಶಕ ಅಶೋಕ್, ಚಲನಚಿತ್ರ ನಿರ್ಮಾಪಕ ರಾಕಲೈನ್ ವೆಂಕಟೇಶ್ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರಹನಾಥಕಲ್ಲಹಳ್ಳಿಯ ಭೂವರಹನಾಥ ಕ್ಷೇತ್ರವು ಹೇಮಾವತಿ ನದಿಯ ದಂಡೆಯಲ್ಲಿದ್ದು ಕೃಷ್ಣರಾಜಸಾಗರವು ಭರ್ತಿಯಾಗಿರುವುದರಿಂದ ವಿಶಾಲವಾಗಿ ಹರಡಿರುವ ಜಲರಾಶಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದಾಗಿವೆ.. ತಿರುಮಲ-ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಭೂವರಹನಾಥ ದೇವಾಲಯವು ಅಭಿವೃದ್ಧಿ ಹೊಂದುತ್ತಿದ್ದು ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ಮೂರು ಪ್ರಾಕಾರಗಳ ದೇವಾಲಯ ಹಾಗೂ 172 ಅಡಿ ಎತ್ತರದ ರಾಜಗೋಪುರದ ನಿರ್ಮಾಣ ಮತ್ತು ಗ್ರಾಮೀಣ ಪ್ರದೇಶದ ಬಡಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ಕೇಂದ್ರೀಯ ಮಾದರಿಯ ಶಾಲೆಯ ನಿರ್ಮಾಣ ಕಾರ್ಯವು 30ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭರದಿಂದ ಸಾಗಿದೆ. ದಾನಿಗಳು ತನುಮನ ಧನ ಸಹಾಯ ಮಾಡಿ ಭವ್ಯವಾದ ದೇವಾಲಯ ಹಾಗೂ ಶಾಲೆಯ ಆರಂಭಕ್ಕೆ ಸಹಕರಿಸಬೇಕು ಎಂದು ಶ್ರೀನಿವಾಸರಾಘವನ್ ಮನವಿ ಮಾಡಿದರು …

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ
.

error: