May 3, 2024

Bhavana Tv

Its Your Channel

ಜಾಕ್ವೆಲ್ ಕಾಮಗಾರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸುವಲ್ಲಿ ಶಾಸಕ ಸುರೇಶ್ ಗೌಡ ಯಶಸ್ವಿ

ನಾಗಮಂಗಲ: ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾರ್ಕೋನಹಳ್ಳಿ ಜಲಾಶಯದಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠ ಮತ್ತು ನಾಗಮಂಗಲ ತಾಲ್ಲೂಕಿಗೆ ನಿರೀಕ್ಷಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತಡೆ ಉಂಟಾಗಿದ್ದ ಮಹತ್ವದ ಜಾಕ್ವೆಲ್ ಕಾಮಗಾರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸುವಲ್ಲಿ ಶಾಸಕ ಸುರೇಶ್ ಗೌಡ ಕೊನೆಗೂ ಯಶಸ್ವಿಯಾಗಿದ್ದಾರೆ.

ಕುಣಿಗಲ್ ಮತ್ತು ನಾಗಮಂಗಲ ತಾಲ್ಲೂಕಿನ ಗಡಿಯಲ್ಲಿರುವ ಮಾರ್ಕೋಹಳ್ಳಿ ಜಲಾಶಯದ ಕೋಡಿ ಬಳಿ ನೀರೆತ್ತುವ ಜಾಕ್ವೆಲ್ ನಿರ್ಮಾಣದಿಂದ ಡ್ಯಾಮ್ ಸುರಕ್ಷತೆಗೆ ಧಕ್ಕೆ ಹಾಗೂ ಕುಣಿಗಲ್ ಕ್ಷೇತ್ರದ ಕೃಷಿ ಭೂಮಿಗೆ ನೀರಿನ ಕೊರತೆ ಎದುರಾಗಲಿದೆ ಎಂದು ಶಾಸಕ ಡಾ ರಂಗನಾಥ್ ಕಾಮಗಾರಿ ನಡೆಸದಂತೆ ತಡೆಯುಂಟು ಮಾಡಿದ್ದರು.

ತುಮಕೂರು ಮತ್ತು ಮಂಡ್ಯ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಕಾಡಿದ್ದ ಜಾಕ್ವೆಲ್ ವಿವಾದವನ್ನ ಸ್ವಾಮಿಜಿ ನೇತೃತ್ವದಲ್ಲಿ ಬಗೆಹರಿದಿದ್ದು, ಇಂದು ಸಂಸದ ಡಿಕೆ ಸುರೇಶ್, ಹಾಗೂ ಸಚಿವ ನಾರಾಯಣಗೌಡ ಉಪಸ್ಥಿತಿಯೊಂದಿಗೆ ಯಾವುದೆ ಗೊಂದಲಕ್ಕೆ ಆಸ್ಪದವಿಲ್ಲದೆ ಸರಳ ಸಮಾರಂಭದಲ್ಲಿ ಗುದ್ದಲಿಪೂಜೆ ನೆರವೇರಿದೆ.

ಈ ವೇಳೆ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶಾಸಕರು ಮತ್ತು ಸಂಸದರ ಸಹಕಾರದೊಂದಿಗೆ ಶ್ರೀ ಬಾಲಗಂಗಾಧರನಾಥ ಶ್ರೀಗಳ ಮೂವತ್ತು ವರ್ಷಗಳ ಕನಸು ನನಸಾಗಿದೆ

ಜಲಾಶಯದಿಂದ ಕೇವಲ ಒಂದು ಟಿಎಂಸಿ ನೀರು ಮಾತ್ರವೇ ಬಳಕೆಯಾಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವುದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕುಣಿಗಲ್ ಮತ್ತು ನಾಗಮಂಗಲ ತಾಲೂಕಿನ ಮಠದ ಭಕ್ತರೇ ಆಗಿದ್ದಾರೆ ಆದ್ದರಿಂದ ನೀರಿಗಾಗಿ ಎರಡು ಕ್ಷೇತ್ರಗಳ ಶಾಸಕರು ಮತ್ತು ಜನತೆ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ನೀರಿನ ವಿಚಾರಕ್ಕೆ ಗೌತಮ ಬುದ್ದ ರಾಜ್ಯ ತೊರೆದು ಜ್ಞಾನೋದಯ ಪಡೆದ ಕಥೆ ಹೇಳಿದರು.

ಶಾಸಕ ಸುರೇಶ್ ಗೌಡ ಮಾತನಾಡಿ ಚುಂಚಶ್ರೀಗಳ ಆಶೀರ್ವಾದದೊಂದಿಗೆ ನಾಗಮಂಗಲ ತಾಲ್ಲೂಕಿನ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ೬ ತಿಂಗಳಲ್ಲಿ ಲಭ್ಯವಾಗಲಿದೆ ಯೋಜನೆ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್, ಕುಣಿಗಲ್ ಶಾಸಕ ಡಾ.ರಂಗನಾಥ್, ಎಂಎಲ್ ಸಿ ಅಪ್ಪಾಜಿ ಗೌಡ, ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ, ಸಿಇಓ ದಿವ್ಯ ಪ್ರಭ ಇತರೆ ಅಧಿಕಾರಿಗಳು ಹಾಜರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: