April 26, 2024

Bhavana Tv

Its Your Channel

ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರ

ಭೂತಚೇಷ್ಠೆ ಗಾಳಿಯ ಸಂಕೆಯ ನಿವಾರಕ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರ ..

ಕೆಂಪು ಕಲ್ಲಿನ ಬೆಟ್ಟದ ಹಚ್ಚ ಹಸುರಿನ ಹೊದಿಕೆಯ ಪುಣ್ಯಕ್ಷೇತ್ರವು ಭಕ್ತವೃಂದವನ್ನು ಕೈ ಬೀಸಿ ಕರೆಯುತ್ತಿದೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಬೈರಸಂದ್ರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿರುವ ಹದ್ದಿನಕಲ್ಲು ಆಂಜನೇಯ ಸ್ವಾಮಿ ದೇವಾಲಯವು ಪ್ರಕೃತಿಯ ರಮ್ಯ ರಮಣೀಯ ತಾಣದಲ್ಲಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಭೂತ, ಪಿಶಾಚಿ, ಮಾಯ-ಮಂತ್ರದ ಶಂಕೆಗೆ ಒಳಗಾಗಿರುವ ವ್ಯಕ್ತಿಗಳ ಗಾಳಿಯನ್ನು ಬಿಡಿಸುವ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕ್ಷೇತ್ರವು ರಾವಣನ ಪುತ್ರ ಇಂದ್ರಜಿತ್ತನನ್ನು ಆಂಜನೇಯನ ಜೊತೆ ಸಮನಾಗಿ ಪೂಜಿಸಿ ಎಡೆ ಒಪ್ಪಿಸುವ ದೇಶದ ಏಕೈಕ ಪುಣ್ಯ ಕ್ಷೇತ್ರವಾಗಿದೆ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರ…

ಮಂಗಳೂರು-ಬೆAಗಳೂರು ರಾಜ್ಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ನಲ್ಲಿರುವ ಟೋಲ್ ಕೇಂದ್ರದಿAದ ಮುಂದೆ ಬೆಂಗಳೂರಿನ ಕಡೆಗೆ ೨ಕಿ.ಮೀ ಮುಂದೆ ಸಾಗಿದರೆ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರಕ್ಕೆ ಸ್ವಾಗತಿಸುವ ಹೆಬ್ಬಾಗಿಲು ಕಾಣುತ್ತದೆ, ಈ ಹೆಬ್ಬಾಗಿಲಿನ ಒಳಗೆ ೪ ಕಿ.ಮೀ ಮುಂದೆ ಸಾಗಿದರೆ ಭೈರಸಂದ್ರ ಗ್ರಾಮವು ಸಿಗುತ್ತದೆ. ಈ ಗ್ರಾಮದಲ್ಲಿಯೇ ಹದ್ದಿನಕಲ್ಲು ಹನುಮಂತರಾಯಸ್ವಾಮಿಯ ಭವ್ಯ ದೇವಾಲಯವಿದ್ದು ದೇವಾಲಯದ ಪಕ್ಕದ ರಸ್ತೆಯಲ್ಲಿ ಮುಂದೆ ಸಾಗಿದರೆ ಹದ್ದಿನಕಲ್ಲು ಆಂಜನೇಯಸ್ವಾಮಿಯ ಕೆಂಪುಕಲ್ಲಿನ ಬೃಹತ್ ಬೆಟ್ಟವು ಎದುರಾಗುತ್ತದೆ. ಬೆಟ್ಟದಲ್ಲಿ ಸಾವಿರಾರು ವಾನರಗಳು ವಾಸವಾಗಿದ್ದು ಈ ಮಂಗಗಳು ಮಾಯಾಸುರ ಇಂದ್ರಜಿತ್ ಪ್ರಭುವಿಗೆ ಒಪ್ಪಿಸುವ ಮಾಂಸಾಹಾರಿ ಊಟವನ್ನೇ ಪ್ರಸಾದವಾಗಿ ಸ್ವೀಕರಿಸುತ್ತವೆ. ಬೆಟ್ಟದ ಕಡಿದಾದ ಒಂದು ಸಾವಿರ ಮೆಟ್ಟಿಲುಗಳನ್ನು ಕಷ್ಟಪಟ್ಟು ಏರಿದರೆ ಬೆಟ್ಟ ಹತ್ತಿದ ಆಯಾಸವೆಲ್ಲವೂ ದೂರಾಗುವ ಜೊತೆಗೆ ಕಲ್ಲಿನಲ್ಲಿ ಐಕ್ಯನಾಗಿರುವ ಗರುಡಗಂಭದಲ್ಲಿನ ಆಂಜನೇಯನ ಮೂರ್ತಿಯ ದರ್ಶನವಾಗುತ್ತದೆ. ಬೆಟ್ಟದ ಮೇಲಿನಿಂದ ಕಂಡು ಬರುವ ಹಸಿರು ಹೊಂದಿರುವ ಪ್ರಕೃತಿಯ ರಮ್ಯ ರಮಣೀಯ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿವೆ.


ದಾನಿಗಳು ಹಾಗೂ ಭಕ್ತರ ನೆರವಿನಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಆಂಜನೇಯಸ್ವಾಮಿಯ ದೇವಾಲಯವನ್ನು ನಿರ್ಮಿಸಿ ಪುನರುಜ್ಜೀವನ ಮಾಡಲಾಗಿದೆ. ಹರಕೆ ಹೊತ್ತ ಭಕ್ತರು ಆಂಜನೇಯಸ್ವಾಮಿಯ ಸರ್ವಾಲಂಕೃತ ಮೂರ್ತಿಯ ಅಡ್ಡಪಲ್ಲಕಿ ಉತ್ಸವವನ್ನು ನಡೆಸಿ ಹರಕೆ ತೀರಿಸಲು ದೇವಾಲಯದ ವ್ಯವಸ್ಥಾಪನಾ ಸಮಿತಿಯು ಅವಕಾಶ ಕಲ್ಪಿಸಿದೆ. ಪರುವುಗಳನ್ನು ಮತ್ತು ಪೂಜಾ ಕಾರ್ಯಗಳನ್ನು ನೆಂಟರಿಷ್ಟರು ಹಾಗೂ ಬಂಧುಗಳೊಡಗೂಡಿ ನಡೆಸಲು ವಿಶಾಲವಾದ ಸಭಾ ಭವನಗಳು ಹಾಗೂ ಮಂಟಪಗಳನ್ನು ನಿರ್ಮಿಸಲಾಗಿದೆ. ಹದ್ದಿನಕಲ್ಲು ಆಂಜನೇಯಸ್ವಾಮಿ ಬೆಟ್ಟದ ಕೆಳಗೆ ಹಾಗೂ ಮೇಲ್ಬಾಗದಲ್ಲಿ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ತಾಲೂಕು ಆಡಳಿತದ ವತಿಯಿಂದ ಕೈಗೊಳ್ಳಲಾಗಿದೆ. ದೇಶದಾಧ್ಯಂತ ರಾಮಭಕ್ತ ವಾಯುಪುತ್ರ ಆಂಜನೇಯನ ಬೃಹತ್ ಮೂರ್ತಿಗಳನ್ನು ನೋಡುತ್ತೇವೆ. ಆದರೆ ನಮ್ಮ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಡಿಗ್ರಾಮವಾದ ಭೈರಸಂದ್ರದಲ್ಲಿ ಇಂದ್ರಜಿತ್ ಸಮೇತನಾದ ಆಂಜನೇಯಸ್ವಾಮಿಯ ಮೂರ್ತಿಯಿರುವುದು ವಿಶೇಷವಾಗಿದೆ.
ದೇವಾಲಯದ ಆಡಳಿತ ವ್ಯವಹಾರವೆಲ್ಲವೂ ನಡೆಯುವುದು ಮಂಡ್ಯ ಜಿಲ್ಲೆಯಲ್ಲಿಯೇ ಆದರೂ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅಸಂಖ್ಯಾತ ಭಕ್ತಸಮೂಹವನ್ನು ಹೊಂದಿರುವುದು ಮಾತ್ರ ಅಚ್ಚರಿಯ ವಿಷಯವಾಗಿದೆ. ಭೂತಚೇಷ್ಟೆ, ಗಾಳಿಯ ಸಂಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಮ್ಮ ಜಿಲ್ಲೆಯ ಏಕೈಕ ಕ್ಷೇತ್ರವಾಗಿರುವ ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯವನ್ನು ಒಮ್ಮೆ ವೀಕ್ಷಿಸಿ ಕಣ್ತುಂಬಿಕೊಳ್ಳಲೇಬೇಕು.
ಪ್ರಕೃತಿಯ ರಮ್ಯ ರಮಣೀಯ ಪ್ರದೇಶದಲ್ಲಿರುವ ಈ ಕ್ಷೇತ್ರವು ಆಸ್ತಿಕ ಬಂಧುಗಳನ್ನು ಕೈಬೀಸಿ ಕರೆಯುತ್ತಿದೆ. ಭೈರಸಂದ್ರ ಗ್ರಾಮದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯವೂ ಪೂಜೆ ಪುರಸ್ಕಾರಗಳು ಹಾಗೂ ಉತ್ಸವಗಳು ನಡೆದರೆ, ಶನಿವಾರದ ವಿಶೇಷ ದಿನಗಳಂದು ಹಾಗೂ ಹಬ್ಬ ಹರಿದಿನಗಳು,ಹನುಮಜಯಂತಿಯAದು ಆಂಜನೇಯಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯುತ್ತವೆ. ಭೈರಸಂದ್ರ ಗ್ರಾಮದಲ್ಲಿರುವ ಹದ್ದಿನಕಲ್ಲು ಆಂಜನೇಯಸ್ವಾಮಿಯ ಜೀರ್ಣೋದ್ಧಾರಗೊಂಡಿರುವ ದೇವಾಲಯವು ಭಕ್ತರು ಹಾಗೂ ದಾನಿಗಳ ಸಹಕಾರದಿಂದ ವಿಶೇಷವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ. ತಿರುಮಲದಲ್ಲಿನ ಶ್ರೀ ವೆಂಕಟೇಶ್ವರಸ್ವಾಮಿಯ ದೇವಾಲಯದ ಗರ್ಭಗುಡಿಯ ಗೋಪುರದಂತೆ ಆಂಜನೇಯ ಸ್ವಾಮಿಯ ದೇವಾಲಯದ ಗರ್ಭಗುಡಿ ಗೋಪುರವನ್ನು ಬಂಗಾರದ ತಗಡುಗಳಿಂದ ಅಲಂಕಾರ ಮಾಡಲಾಗಿದೆ. ೮೦ ಅಡಿ ಎತ್ತರದ ರಾಜಗೋಪುರವು ಕಣ್ಮನಗಳನ್ನು ಸೆಳೆಯುತ್ತದೆ. ಗಾಳಿಯ ಸೋಂಕು, ಪೀಡೆ-ಪಿಶಾಚಿಗಳ ನಿರ್ಮೂಲನೆ ಹಾಗೂ ಶಾಂತಿ ನೆಮ್ಮದಿಯ ಜೀವನಕ್ಕೆ, ಬೇಡಿ ಬರುವ ಭಕ್ತರ ಅಭೀಷ್ಠೆಗಳನ್ನು ಈಡೇರಿಸಿ ಹರಸಿ ಆಶೀರ್ವದಿಸಿ ಅನುಗ್ರಹಿಸುತ್ತಿರುವ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರವು ನಮ್ಮ ಜಿಲ್ಲೆಯ ನಮ್ಮ ನೆಲದಲ್ಲಿಯೇ ಇರುವ ಅಪರೂಪದ ಪುಣ್ಯಕ್ಷೇತ್ರವಾಗಿದೆ. ಒಮ್ಮೆ ಈ ಕ್ಷೇತ್ರವನ್ನು ಸಂದರ್ಶಿಸಿ ಆಂಜನೇಯನ ಕೃಪೆಗೆ ಪಾತ್ರರಾದಾಗ ಸಿಗುವ ಆನಂದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.

ಈ ಬಗ್ಗೆ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ತಮ್ಮ ಅನಿಸಿಕೆಯನ್ನು ತಿಳಿಸಿದ್ದರು………ನಾಗಮಂಗಲ ತಾಲೂಕಿನ ಬೈರಸಂದ್ರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿರುವ
ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರವು ದೇಶದಲ್ಲಿಯೇ ಅಪರೂಪದ್ದಾಗಿರುವ ಪುಣ್ಯಕ್ಷೇತ್ರವಾಗಿದೆ. ಭಕ್ತರು ಹಾಗೂ ದಾನಿಗಳ ನೆರವಿನ ಮಹಾಪೂರದಿಂದ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. ಆಂಜನೇಯನ ಜೊತೆ ರಾವಣನ ಮಗ ಇಂದ್ರಜಿತ್‌ನನ್ನೂ ಪೂಜಿಸುವುದು ಹರಕೆ ಒಪ್ಪಿಸುವುದು ಇಲ್ಲಿನ ವೈಶಿಷ್ಠ್ಯವಾಗಿದೆ. ಭಕ್ತರು ಉಳಿದುಕೊಂಡು ಕ್ಷೇತ್ರವನ್ನು ದರ್ಶನ ಮಾಡಲು ಅವಕಾಶವಿದೆ. ಜೀವನದಲ್ಲಿ ಒಮ್ಮೆ ನೋಡಿ ದರ್ಶನ ಮಾಡಲೇಬೇಕಾದ ಕ್ಷೇತ್ರ ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ ಹಾಗೂ ಬೆಟ್ಟ ಎಂದಿದ್ದಾರೆ.
ದೇವಾಲಯದ ಪ್ರಧಾನ ಅರ್ಚಕರಾದ ಪ್ರವೀಣ್ ಶಾಸ್ತ್ರಿಗಳು ಮಾತನಾಡಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರವು ಆಂಜನೇಯಸ್ವಾಮಿ ಕ್ಷೇತ್ರಗಳಲ್ಲಿಯೇ ವಿಭಿನ್ನವಾದ ಕ್ಷೇತ್ರವಾಗಿದೆ. ಗಾಳಿ, ಪೀಡೆ ಪಿಶಾಚಿಗಳ ಶಂಕೆಗೆ ಶಾಶ್ವತವಾದ ಪರಿಹಾರವನ್ನು ದೊರಕಿಸಿಕೊಡುವ ಈ ಕ್ಷೇತ್ರದಲ್ಲಿ ಇಂದ್ರಜಾಲ ವಿದ್ಯೆಯನ್ನು ಕರಗತಮಾಡಿಕೊಂಡಿದ್ದ ರಾವಣನ ಪುತ್ರ ಇಂದ್ರಜಿತ್ತನನ್ನೂ ಪೂಜಿಸುವ ಏಕೈಕ ಕ್ಷೇತ್ರವಾಗಿದೆ. ಬೇಡಿ ಬಂದ ಭಕ್ತರನ್ನು ಹರಸಿ ಆಶೀರ್ವಧಿಸುತ್ತಿರುವ ಹನುಮನ ಖ್ಯಾತಿಯು ಅಪಾರವಾಗಿದೆ. ಹದ್ದಿನಕಲ್ಲು ಆಂಜನೇಯನ ಬೆಟ್ಟದಲ್ಲಿ ವಾಸಮಾಡುತ್ತಿರುವ ವಾನರಗಳು ಹಣ್ಣು ಕಾಯಿಯ ಜೊತೆಗೆ ಮಾಂಸಾಹಾರವನ್ನು ಸ್ವೀಕರಿಸುವುದು ಇಲ್ಲಿನ ವಿಶೇಷವಾಗಿದೆ ಎಂದರು.

ವಿಶೇಷ ವರದಿ. # ಕೆ.ಆರ್.ನೀಲಕಂಠ, ಮೊ.೯೭೪೧೨೩೯೬೯೭

error: