April 27, 2024

Bhavana Tv

Its Your Channel

ಉಚಿತವಾಗಿ ಮಾಸ್ಕ ಹೊಲಿದು ಕೊಡುತ್ತಿರುವ ವಿಕಲಚೇತನ ಟೈಲರ್ ಮಂಜುನಾಥ್

ಕೆ.ಆರ್. ಪೇಟೆ :ಕೃಷ್ಣರಾಜಪೇಟೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕು ತಡೆಗೆ ಜನತೆಗೆ ಅಗತ್ಯವಾಗಿ ಬೇಕಾಗಿರುವ ಮಾಸ್ಕುಗಳನ್ನು ವಿಕಲಚೇತನ ಟೈಲರ್ ಒಬ್ಬರು ಗ್ರಾಮೀಣ ಜನತೆಗೆ ಉಚಿತವಾಗಿ ಹೊಲೆದು ಕೊಡುವ ಮೂಲಕ ದುಪ್ಪಟ್ಟು ದರಕ್ಕೆ ಮಾಸ್ಕುಗಳನ್ನು ಮಾರುತ್ತಿರುವ ಔಷಧಿ ಅಂಗಡಿಯವರಿಗೆ ನಾಚಿಕೆಯಾಗುವಂತಹ ಪುಣ್ಯದ ಕೆಲಸ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ನಾಗರಾಜೇಗೌಡ ಮತ್ತು ಸಾಕಮ್ಮ ದಂಪತಿಗಳ ಪುತ್ರ ಮಂಜುನಾಥ್ ಅವರು ಒಂದು ಕಾಲು ಇಲ್ಲದೆ ಕೃತಕ ಕಾಲು ಜೋಡಣೆಯ ಮೂಲಕ ಕಳೆದ ೧೨ ವರ್ಷಗಳಿಂದ ಟೈಲರ್ ವೃತ್ತಿ ಮಾಡುತ್ತಾ ತಮ್ಮ ತಾಯಿ ಸಾಕಮ್ಮ, ಅಜ್ಜಿ ಬೋರಮ್ಮ ಅವರನ್ನು ಸಹ ಸಾಕಿ ಸಲುಹುವ ಜವಾಬ್ದಾರಿಯೂ ಸಹ ಮಂಜುನಾಥ್ ಅವರ ಮೇಲಿದೆ. ಕುಟುಂಬದ ಬಡತನದ ಹಿನ್ನೆಲೆಯಲ್ಲಿ ಸುಮಾರು ೨೫ ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋದ ಅಪ್ಪ ನಾಗರಾಜೇಗೌಡ ಅವರ ದುಃಖದಿಂದ ದಿನ ದೂಡುತ್ತಾ ಜೀವನ ನಿರ್ವಹಣೆಗಾಗಿ ಟೈಲರ್ ವೃತ್ತಿಯನ್ನು ಮಂಜುನಾಥ್ ಮಾಡುತ್ತಿದ್ದಾರೆ. ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಅಗತ್ಯವಾಗಿ ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವ ಮಾಸ್ಕುಗಳ ಅಭಾವವು ಮಾರುಕಟ್ಟೆಯಲ್ಲಿ ಇರುವುದನ್ನು ತಿಳಿದು ಸ್ವತಃ ಟೈಲರ್ ಆಗಿರುವ ನಾನೇಕೆ ಮಾಸ್ಕುಗಳನ್ನು ತಯಾರಿಸಿಕೊಡುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಬಾರದು ಎಂದು ನಿರ್ಧರಿಸಿ ಕಳೆದ ಒಂದು ವಾರದಿಂದಲೂ ಬಟ್ಟೆಯಿಂದ ಮಾಸ್ಕುಗಳನ್ನು ಹೊಲೆದು ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆಗೆ ಉಚಿತವಾಗಿ ನೀಡುತ್ತಿದ್ದಾರೆ.

ಕೆಲವರು ನೀನೊಬ್ಬ ವಿಕಲಚೇತನ ಜೀವನ ನಿರ್ವಹಣೆ ನಡೆಯಬೇಕಲ್ಲವೇ ಎಂದು ಕೇಳುತ್ತಾರೆ ಅವರೇ ಸ್ವಯಂ ಪ್ರೇರಿತರಾಗಿ ಕೈಲಾದಷ್ಟು ಹಣ ನೀಡುತ್ತಿದ್ದಾರೆ. ಯಾರಿಗೂ ಬಲವಂತ ಮಾಡುತ್ತಿಲ್ಲ. ದೇಶವನ್ನು ಕಾಡುತ್ತಿರುವ ಕೊರೋನಾ ಮಹಾಮಾರಿಯು ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಆಗುವವರೆವಿಗೂ ನನ್ನ ಶಕ್ತಿ ಮೀರಿ ಮಾಸ್ಕುಗಳನ್ನು ಹೊಲೆದು ಕೊಡುತ್ತೇನೆ ಎನ್ನುತ್ತಾರೆ ವಿಕಲಚೇತನ ಟೈಲರ್ ಮಂಜುನಾಥ್ ಅವರು.
ಮಂಜುನಾಥ್ ಅವರಿಗೆ ಸಹಾಯ ಮಾಡಲು ಇಚ್ಚಿಸುವವರು ಮಂಜುನಾಥ್ ಅವರ ಮೊಬೈಲ್ ಸಂಖ್ಯೆ: ೯೬೩೨೩೬೧೮೬೪ಅನ್ನು ಸಂಪರ್ಕಿಸಬಹುದು. ಅಥವಾ ಮಂಜುನಾಥ್ ಅವರ ಉಳಿತಾಯ ಖಾತೆ ನಂ: ೬೪೧೨೧೧೨೯೭೫೯ ಐ.ಎಸ್.ಎಫ್.ಸಿ.ಕೋಡ್: SಃI SಃIಓ೦೦೪೦೦೩೯ ಕೆ.ಆರ್.ಪೇಟೆ ಶಾಖೆ ಇಲ್ಲಿ ಸಂಪರ್ಕಿಸಬಹುದಾಗಿದೆ.

ವಿಶೇಷ ವರದಿ.. ಕೆ.ಆರ್.ನೀಲಕಂಠ
ಕೃಷ್ಣರಾಜಪೇಟೆ.

error: