April 27, 2024

Bhavana Tv

Its Your Channel

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭ

ಉಡುಪಿ: ಹಿಂದೆ ತಪ್ಪು ಮಾಡಿದವರನ್ನು ಸಮಾಜದಿಂದ ಬಹಿಷ್ಕರಿಸಲಾಗುತಿತ್ತು. ಆದರೆ ಈಗ ಆರೋಪದ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೂಲಕ ಹೊರಗೆ ಬಂದವರನ್ನು ಹೊತ್ತು ಮೆರವಣಿಗೆ ಮಾಡುವ ಕಾಲ ಬಂದಿದೆ. ಮಾಧ್ಯಮದವರು ಸಮಾಜದ ಭಾವನೆ ಬದಲಿಸುವ ಪ್ರಯತ್ನ ಮಾಡಬೇಕು. ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಅಧಿಕಾರದಲ್ಲಿರುವವರಿಗೆ ತೋರಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಇಲ್ಲಿನ ಎಂಜಿಎA ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಜರುಗಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಡಿಯಲ್ಲಿ ಮೂರು ಸ್ಥರಗಳಿದ್ದರೂ ವಾಸ್ತವಿಕವಾಗಿ ಮಾಧ್ಯಮವನ್ನು ನಾಲ್ಕನೇ ಸ್ಥಂಭವಾಗಿ ಜನರು ಪರಿಗಣಿಸಿದ್ದಾರೆ. ಇದು ಮಾಧ್ಯಮದ ಮೇಲೆ ಜನರು ತೋರಿದ ಗೌರವ. ಸಂವಿಧಾನದ ಪುಸ್ತಕದಲ್ಲಿ ಇಲ್ಲದಿದ್ದರೂ ಜನರ ಮನಸ್ಸಿನಲ್ಲಿ ಮಾಧ್ಯಮ ಬೇರೂರಿದೆ ಎಂದರು.

ಸಮಾಜದಲ್ಲಿ ಆಗುವ ಅನ್ಯಾಯಗಳನ್ನು ಬಹಳ ಹತ್ತಿರದಿಂದಲೇ ಗಮನಿಸಿದ್ದೇನೆ. ಇಂದಿನ ಪರಿಸ್ಥಿತಿಗೆ ವ್ಯಕ್ತಿಗಳು ಕಾರಣರಲ್ಲ. ಸಮಾಜದ ಭಾವನೆ ಸಂಪೂರ್ಣ ಬದಲಾಗಿದೆ. ಇಂದು ನಾವಿರುವ ಸಮಾಜ ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುತ್ತಿದೆ. ದೇಶದ ಅಭಿವೃದ್ದಿಗಿಂತ ಹೆಚ್ಚು ದುರಾಸೆ ಅಭಿವೃದ್ದಿಯಾಗುತ್ತಿದೆ. ಇಂತಹ ಭಾವನೆಯನ್ನು ಬದಲಿಸುವ ಪ್ರಯತ್ನವನ್ನು ಮಾಧ್ಯಮಗಳು ಮಾಡಬೇಕು. ಮಾಧ್ಯಮದಿಂದಲೇ ಇವೆಲ್ಲವೂ ಸಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ನೈಪುಣ್ಯತೆ ಮತ್ತು ವೃತ್ತಿಪರತೆ ಅನೇಕ ರೀತಿಯ ಒತ್ತಡಗಳಿಂದ ನಲುಗುತ್ತಿದೆ. ಪತ್ರಕರ್ತರಿಂದ ಸಮಾಜ ಇನ್ನು ಹೆಚ್ಚಿನ ನಿರೀಕ್ಷೆ ಮಾಡುತ್ತಿದೆ. ನಾವು ಆ ಭರವಸೆಯನ್ನು ಕಳೆದುಕೊಳ್ಳಬಾರದು. ವೃತ್ತಿಯಲ್ಲಿ ನಮಗೆ ಬದ್ದತೆ, ಜವಾಬ್ದಾರಿ ಇರಬೇಕು ಎಂದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ರಜತ ಮಹೋತ್ಸವ ಸಮಿತಿಯ ಸಂಚಾಲಕ ಮೊಹಮ್ಮದ್ ಷರೀಫ್, ಕಾರ್ಯದರ್ಶಿ ಜಯಕರ್ ಸುವರ್ಣ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಶಿರೂರು, ಜಿಲ್ಲಾ ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಸಂಘದ ಸ್ಥಾಪಕ ಉಪಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಉಪಸ್ಥಿತರಿದ್ದರು.

ಕಲಾವಿದ ಮಹೇಶ್ ಮರ್ಣೆ, ರಾಮಾಂಜಿ ನಮ್ಮ ಭೂಮಿ, ಶಶಿಧರ ಮಾಸ್ತಿಬೈಲು, ಅಶ್ವಥ ಆಚಾರ್ಯ, ಜಯಕರ ಸುವರ್ಣ ಹಾಗೂ ಜನಾರ್ದನ ಕೊಡವೂರು ಅವರನ್ನು ಗೌರವಿಸಲಾಯಿತು.
ಜಿಲ್ಲಾ ಸಂಘದ ಪ್ರ.ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಮೈಕಲ್ ಸಾಸ್ತಾನ ಸಂಘದ ಸ್ಥಾಪಕ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಪಟ್ಟಿ ವಾಚಿಸಿದರು. ಉಮೇಶ್ ಮಾರ್ಪಳ್ಳಿ ನೂತನ ತಾಲೂಕು ಸಂಘಗಳ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಜಯಕರ ಸುವರ್ಣ ಧನ್ಯವಾದವಿತ್ತರು. ಕೆ.ಸಿ ರಾಜೇಶ್ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಮಂಗಳೂರಿನ ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಅವರು ಬರೆದ ನಮ್ಮ ಉಡುಪಿ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಸಂಘದ ಸ್ಥಾಪಕ ಸದಸ್ಯರನ್ನು ಗೌರವಿಸಲಾಯಿತು.

ವರದಿ: ಅರುಣ ಭಟ್ ಕಾರ್ಕಳ

error: