March 12, 2024

Bhavana Tv

Its Your Channel

ಕರಾವಳಿ ಉತ್ಸವದ ದಿನಾಂಕವನ್ನು ಬದಲಾಯಿಸುವಂತೆ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ಎನ್. ವಾಸರೆ ಜಿಲ್ಲಾಧಿಕಾರಿಗೆ ಮನವಿ

ಉತ್ತರ ಕನ್ನಡ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ 17 ಮತ್ತು 18 ರಂದು ಜೋಯಿಡಾದ ಉಳವಿಯಲ್ಲಿ ನಡೆಯಲಿದ್ದು ಅದೇ ದಿನ ಕರಾವಳಿ ಉತ್ಸವ ನಡೆಸುವುದು ಸಮಂಜಸವಾದುದಲ್ಲ. ಹಾಗಾಗಿ ಈ ಬಗ್ಗೆ ಪುನರ್ ಪರಿಶೀಲಿಸಿ ಕರಾವಳಿ ಉತ್ಸವದ ದಿನಾಂಕವನ್ನು ಬದಲಾಯಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿಯವರಲ್ಲಿ ಲಿಖಿತ ಮನವಿ ಮಾಡಿಕೊಂಡಿದ್ದಾರೆ.

ರವಿವಾರ ದಾಂಡೇಲಿಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳನ್ನು ಪ್ರವಾಸಿಗೃಹದಲ್ಲಿ ಭೇಟಿಯಾಗಿ ಚರ್ಚಿಸಿದ ಬಿ.ಎನ್. ವಾಸರೆಯವರು ಉಳವಿಯಲ್ಲಿ ಡಿಸೆಂಬರ 17 ಮತ್ತು 18 ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿದೆ . ಮತ್ತೆ ಮಾಧ್ಯಮಗಳಲ್ಲಿ ಕೂಡ ಬಿತ್ತರವಾಗಿದೆ. ಈಗಾಗಲೇ ಸಮ್ಮೇಳನದ ತಯಾರಿ ನಡೆಯುತ್ತಿದೆ. ಈ ನಡುವೆ ಶನಿವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಸಭೆ ನಡೆದು ಕರಾವಳಿ ಉತ್ಸವವನ್ನು 2022ರ ಡಿಸೆಂಬರ 16,17,18ರಂದು ನಿಗದಿಪಡಿಸಿರುವಿರೆಂದು ಮಾಹಿತಿ ಲಭ್ಯವಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವ ದಿನವೇ ಕರಾವಳಿ ಉತ್ಸವ ನಡೆದರೆ ಜಿಲ್ಲೆಯಲ್ಲಿ ಎರಡು ಜಿಲ್ಲಾ ಮಟ್ಟದ ಕಾರ್ಯಕ್ರಮಗಳಾಗಿ ಭಾಗವಹಿಸುವವರಿಗೂ ತೊಡಕಾಗುತ್ತದೆ.

ಸಾಹಿತ್ಯ ಪರಿಷತ್ತಿನ ನಿಯಮದಂತೆ ಸ್ಥಳೀಯ ಶಾಸಕರೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಅವರೂ ಕೂಡಾ ಒಪ್ಪಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರ ಗಮನಕ್ಕೂ ಕೂಡಾ ಸಮ್ಮೇಳನದ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದು ಅವರೂ ಕೂಡಾ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ತಾವೂ ಕೂಡಾ ಅತಿಥಿಗಳಾಗಿರುತ್ತೀರಿ. ಜೊತೆಗೆ ಈಗಾಗಲೇ ಸಮ್ಮೇಳನದ ಸಿದ್ದತಾ ಕೆಲಸಗಳು ಕೂಡಾ ಆರಂಭವಾಗಿವೆ ಎಂದಿರುವ ವಾಸರೆಯವರು ಕರಾವಳಿ ಉತ್ಸವ ನಡೆಸುವಂತೆ ನಾವೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ ಮಾಡಿಕೊಂಡಿದ್ದೆವು. ಕರಾವಳಿ ಉತ್ಸವ ನಡೆಸಲು ಯೋಜನೆ ಸಿದ್ದಪಡಿಸಿರುವುದು ಸ್ವಾಗತಾರ್ಹವೇ ಆಗಿದೆ. ಆದರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನವೇ ಕರಾವಳಿ ಉತ್ಸವ ನಡೆಸುವುದು ಮಾತ್ರ ಸಮಂಜಸವಲ್ಲ ಎಂದಿದ್ದಾರೆ.

ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಜನಪ್ರತಿನಿದಿಗಳು, ಸಾಹಿತಿಗಳು, ಕವಿ, ಕಲಾವಿದರು, ಸಾಂಸ್ಕೃತಿಕ ವ್ಯಕ್ತಿಗಳು, ನಾಡು ನುಡಿ ಸಂಘಟಕರು, ಸಾಹಿತ್ಯಾಸಕ್ತರೆಲ್ಲರೂ ಕೂಡಾ ಭಾಗವಹಿಸುತ್ತಾರೆ. ಇದೊಂದು ಜಿಲ್ಲಾ ಮಟ್ಟದ ನುಡಿ ಜಾತ್ರೆಯ ರೂಪದಲ್ಲಿ ನಡೆಯುತ್ತದೆ. ಹೀಗಿರುವಾಗ ಅದೇ ದಿನ ಜಿಲ್ಲಾಡಳಿತದಿಂದಲೇ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ನಡೆಸುವುದು ಆಭಾಸವೆನಿಸುತ್ತದೆ. ಹಾಗಾಗಿ ತಾವು ಈಗಾಗಲೇ ನಿಗದಿ ಪಡಿಸಿರುವ ಕರಾವಳಿ ಉತ್ಸವದ ಸಂಭವನೀಯ ದಿನಾಂಕವನ್ನು ಬದಲಾಯಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಬಿ.ಎನ್. ವಾಸರೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕರಾವಳಿ ಉತ್ಸವ ನಡೆಸಲು ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು’ ಅಧಿಕಾರಿಗಳು ಸೇರಿ ಪೂರ್ವಭಾವಿ ಸಭೆಯೊಂದನ್ನು ನಡೆಸಿದ್ದೇವೆ. ಸಂಭವನೀಯ ದಿನಾಂಕದ ಬಗ್ಗೆ ಚರ್ಚಿಸಿದ್ದೇವೆ ಅಷ್ಟೆ. ಆದರೆ ನಾವೆಲ್ಲೂ ಕೂಡ ಕರಾವಳಿ ಉತ್ಸವದ ದಿನಾಂಕವನ್ನು ಘೋಷಣೆ ಮಾಡಿಲ್ಲ ತಮ್ಮ ಮನವಿಯಂತೆ ಸಾಹಿತ್ಯ ಸಮ್ಮೇಳನಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಕರಾವಳಿ ಉತ್ಸವ ನಡೆಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಸಾಪ ದಾಂಡೇಲಿ ತಾಲ್ಲೂಕು ಘಟಕದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ದಾಂಡೇಲಿ ತಾಲ್ಲೂಕು ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ , ಡಿವೈಎಸ್ಪಿ ಕೇ.ಎಲ್. ಗಣೇಶ್ ಉಪಸ್ಥಿತರಿದ್ದರು.

error: