April 27, 2024

Bhavana Tv

Its Your Channel

ಭಟ್ಕಳ ತಾಲೂಕಿನಲ್ಲಿ ಸಿಟಿ ಸ್ಕ್ಯಾನ್ ಘಟಕ ಸ್ಥಾಪಿಸಲು ಸಾರ್ವಜನಿಕರ ಬೇಡಿಕೆ ಹಾಗೂ ಅಭಿಯಾನ

ಭಟ್ಕಳ ; ತಾಲೂಕು ಇಡೀ ಜಿಲ್ಲೆಯಲ್ಲಿಯೇ ಉತ್ತಮ ಅಭಿವೃದ್ಧಿ ಪತದ ಹಾದಿಯಲ್ಲಿದ್ದರೂ ಸಹ, ನಮ್ಮಲ್ಲಿ ಒಂದು ಸುಸಜ್ಜಿತ ಸಿಟಿ ಸ್ಕ್ಯಾನ್ ಸೆಂಟರ್ ಇಲ್ಲದೆ ಇರುವುದು ದುರದೃಷ್ಟಕರ.
ಈಗಾಗಲೇ, ನಮ್ಮಲ್ಲಿನ ಬಡ ರೋಗಿಗಳಿಗೆ ಸಿಟಿ ಸ್ಕ್ಯಾನ್ ಗಾಗಿ ಹೊನ್ನಾವರ ಅಥವಾ ಕುಂದಾಪುರ ಹೋಗುವುದು ಅನಿವಾರ್ಯವಾಗಿದೆ. ಅಂತಹ ಸಮಯದಲ್ಲಿ, ವಾಹನ ವೆಚ್ಚ, ಸಮಯ ವ್ಯರ್ಥ ಹಾಗೂ ದುಬಾರಿ ಸ್ಕ್ಯಾನ್ ದರ ಇವೆಲ್ಲವನ್ನು ಪರಿಗಣಿಸಿದರೆ ನಿಜವಾಗಲೂ, ಬಡವರಿಗೆ ದುಪ್ಪಟ್ಟು ಹಣ ವ್ಯಯ ಮಾಡಲೇ ಬೇಕಾಗಿರುವುದನ್ನು ಗಮನಿಸಿದರೆ, ಇಷ್ಟೇಲ್ಲಾ ಅಭಿವೃದ್ಧಿ ಹೊಂದುತ್ತಿರುವ ಭಟ್ಕಳ ತಾಲೂಕಿನವರಾದ ನಮ್ಮ ಎಲ್ಲಾ ಪ್ರಜ್ಞಾವಂತ ಜನರು ಗಂಭೀರವಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಇನ್ನೂ ಹೆಚ್ಚಿನದಾಗಿ ಹೇಳಬೇಕೆಂದರೆ, ಇಂದಿನ ಕೋವಿಡ್ ರೋಗದ ಪ್ರಭಾವ ಎಷ್ಟು ಗಂಭೀರವಾಗಿದೆ ಎಂದರೆ, ರೋಗಿಯ ದೇಹದೊಳಗೆ ಕರೋನಾ ವೈರಸ್ ಯಾವ ರೀತಿಯಲ್ಲಿ ತನ್ನ ದುಷ್ಪರಿಣಾಮವನ್ನು ಬೀರಿದೆ ಎಂದು ತಿಳಿಯಲು ಸಿಟಿ ಸ್ಕ್ಯಾನ್ ಮಾಡಿ ತಿಳಿದುಕೊಳ್ಳುವುದು ತೀರಾ ಅನಿವಾರ್ಯವಾಗಿದ್ದು, ಈಗಾಗಲೇ, ಭಟ್ಕಳದ ಜನತೆ ಇದಕ್ಕಾಗಿ ಹೊನ್ನಾವರ ಹಾಗೂ ಕುಂದಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಆದ ಕಾರಣ, ಈಗಾಗಲೇ ಸರ್ಕಾರ ಕೊವಿಡ್ ನಿಯಂತ್ರಣಕ್ಕಾಗಿ ಶಾಸಕರ ನಿಧಿಯನ್ನು ಉಪಯೋಗಿಸಲು ಅವಕಾಶ ನೀಡಿದ್ದು, ಸಿಟಿ ಸ್ಕ್ಯಾನ್ ಸಹ ಕೋವಿಡ್ ಪರೀಕ್ಷೆಯ ಒಂದು ಭಾಗವಾಗಿರುವ ಕಾರಣ, ಭಟ್ಕಳ ತಾಲೂಕಾ ಆಸ್ಪತ್ರೆಯಲ್ಲಿ ಹೊಸ ಸಿಟಿ ಸ್ಕ್ಯಾನ್ ಘಟಕವನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಇದಕ್ಕೆ ಅನುಕೂಲಸ್ಥ ಸಾರ್ವಜನಿಕ ದಾನಿಗಳು ಧನ ಸಹಾಯ ಮಾಡಲು ಮುಂದೆ ಬಂದರೆ, ಧನ ಸಂಗ್ರಹಣೆ ಮಾಡಿಯೂ ಸಹ ಈ ಘಟಕ ಸ್ಥಾಪಿಸಲು ಎಲ್ಲಾ ರೀತಿಯ ಅವಕಾಶವಿರುವುದರಿಂದ, ಮಾನ್ಯ ಶಾಸಕರು, ಸಹಾಯಕ ಆಯುಕ್ತರು, ತಾಲೂಕು ಆರೋಗ್ಯಾಧಿಕಾರಿಗಳು, ಭಟ್ಕಳ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿ ಸಾಧಕ ಬಾಧಕಗಳ ಪಟ್ಟಿ ಮಾಡಿ ನಮ್ಮ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಘಟಕವನ್ನು ಅಳವಡಿಸುವ ಮೂಲಕ ಬಡ ರೋಗಿಗಳ ಅನುಕೂಲಕ್ಕಾಗಿ ಸೀಮಿತ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ದೊರಕುವಂತೆ ಮಾಡಬೇಕಾಗಿದೆ.

ಇದು ನಮ್ಮ ಭಟ್ಕಳ ತಾಲೂಕಿನ ಎಲ್ಲಾ ಸಾರ್ವಜನಿಕರ ಬೇಡಿಕೆಯಾಗಿದೆ. ಇದು ಕೇವಲ ಬೇಡಿಕೆಯಾಗಿರದೆ ನಮ್ಮೆಲ್ಲರ ಒತ್ತಡ ಹಾಗೂ ಅಭಿಯಾನವಾಗಿದೆ ಈ ವಿಷಯದಲ್ಲಿ ಭಟ್ಕಳದ ಎಲ್ಲಾ ಸಾಮಾಜಿಕ ಸಂಘ ಸಂಸ್ಥೆಗಳು ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಮನವಿ ನೀಡುವ ಮೂಲಕ ವಿಷಯವನ್ನು ಮನವರಿಕೆ ಮಾಡಿಸಿ ಒತ್ತಡ ಹೇರಲು ಈ ಮೂಲಕ ಸಾರ್ವಜನಿಕರು ವಿನಂತಿ ಮಾಡಿದ್ದಾರೆ.

error: