April 29, 2024

Bhavana Tv

Its Your Channel

ರಾಜ್ಯಾದ್ಯಂತ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ರೂ 500 ಕೋಟಿ ಬಿಡುಗಡೆ – ಸಿ ಎಮ್ ಬಸವರಾಜ ಬೊಮ್ಮಾಯಿ

ಭಟ್ಕಳ: ರಾಜ್ಯಾದ್ಯಂತ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ರೂ 500 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು

ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭೂ ಕುಸಿತವಾಗಿ ನಾಲ್ವರು ಮೃತಪಟ್ಟ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ, ಸಿಎಂ ಬೊಮ್ಮಾಯಿ, ಧರೆ ಕುಸಿತದ ಭೀಕರತೆ ಕಂಡು ಮರುಗಿದರು. ಭಾರೀ ಮಳೆ ಬಿದ್ದಿರುವುದು ಈ ಸ್ಥಳ ನೋಡಿದರೇ ಗೊತ್ತಾಗುತ್ತದೆ ಎಂದ ಅವರು, ಮೃತರ ಕುರಿತು ಶೋಕ ವ್ಯಕ್ತಪಡಿಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಇದೇ ವೇಳೆ ಜಿಲ್ಲಾಧಿಕಾರಿಗಳಿಂದ ಮಳೆಯಿಂದಾದ ಹಾನಿಯ ಕುರಿತು ಮಾಹಿತಿ ಪಡೆದ ಸಿಎಂ ಬೊಮ್ಮಾಯಿ, ಅಗತ್ಯ ಕ್ರಮಕ್ಕೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಕೂಡ ಈ ವೇಳೆ ಮಳೆ ಹಾನಿಯ ವಿವರಗಳನ್ನು ನೀಡಿದರು.
‘ಈವರೆಗಿನ ಮಾಹಿತಿಯ ಪ್ರಕಾರ, 14 ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾದ ವರದಿಯಿದೆ. ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ನಾಲ್ವರು, ವಿಜಯನಗರ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸುಮಾರು 600 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 21,471 ಹೆಕ್ಟೇರ್‌ಗಳಷ್ಟು ಕೃಷಿ ಪ್ರದೇಶ ಹಾನಿಯಾಗಿದೆ’ ಎಂದು ತಿಳಿಸಿದರು.
‘ಭೂಕುಸಿತವಾದ ಪ್ರದೇಶಗಳ ಜಿಯಾಲಜಿಕಲ್ ಸರ್ವೆ ಮಾಡಿಸಲಾಗುವುದು. ಮುಟ್ಟಳ್ಳಿಯಲ್ಲಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ಒಟ್ಟು ರೂ 20 ಲಕ್ಷ ಪರಿಹಾರ ವಿತರಿಸಲಾಗಿದೆ. ಮಕ್ಕಳ ಸ್ನಾತಕೋತ್ತರ ವಿದ್ಯಾಭ್ಯಾಸದ ತನಕ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ವಹಿಸಲಿದೆ. ಭೂಕುಸಿತವಾಗಿ ನೆಲಸಮವಾದ ಮನೆಯ ಕುಟುಂಬದವರ ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಪ್ರಕಟಿಸಿದರು.
ಕಂದಾಯ ಸಚಿವ ಆರ್.ಅಶೋಕ್, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಶಾಸಕರಾದ ಸುನೀಲ್ ನಾಯ್ಕ, ರೂಪಾಲಿ ನಾಯ್ಕ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.

error: