May 3, 2024

Bhavana Tv

Its Your Channel

ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ : ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು.

ಹೊನ್ನಾವರ : ಅಧಿಕಾರಿಗಳಿಗಿಂತ ಸಾರ್ವಜನಿಕರಿಗೆ ಹೆಚ್ಚು ಅಧಿಕಾರವಿದೆ. ನಿಜವಾದ ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ತಂದರೆ ಅದಕ್ಕೆ ಸರಿಯಾಗಿ ನ್ಯಾಯ ಕೊಡಲು ಅಧಿಕಾರಿಗಳಿಗೂ ಅನುಕೂಲ ವಾಗುತ್ತದೆ. ಆದರೆ ಕೆಲವರು ತಮ್ಮ ಸ್ವಾರ್ಥಕೋಸ್ಕರ, ವ್ಯಯಕ್ತಿಕ ಹಿತಾಶಕ್ತಿಗಾಗಿ ಸುಳ್ಳು ದೂರುಗಳನ್ನು ನೀಡುತ್ತಾರೆ. ಅಂತಹ ಸಮಯದಲ್ಲಿ ಅಧಿಕಾರಿಗಳನ್ನು ಸಿಕ್ಕಿಸಿಹಾಕುವ ಸಾಧ್ಯತೆ ಗಳಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಪೆನ್ನೇಕರ ಹೇಳಿದರು.

ಅವರು ಹೊನ್ನಾವರ ತಾಲೂಕಿನ ಪ್ರತಿಭೋದಯ ಹಾಲ್ ನಲ್ಲಿ ಪೊಲೀಸ್ ಇಲಾಖೆವತಿಯಿಂದ ನಡೆದ ಜನ ಸಂಪರ್ಕ ಸಭೆ, ೨೦೨೧ ನೇ ಸಾಲಿನ ಹೊನ್ನಾವರ ತಾಲೂಕಾ ಮಟ್ಟದ ಉತ್ತಮ ಗಣೇಶೋತ್ಸವ ಸಮಿತಿ ಬಹುಮಾನ ವಿತರಣೆ ಹಾಗೂ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ರಮ ಮರಳು ಗಾರಿಕೆ ಬಗ್ಗೆ ಲಾರಿ ಮಾಲೀಕರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮರಳು ಗಾರಿಕೆ ಸಂಬAಧ ಪಟ್ಟಂತೆ ಮತ್ತು ಇಲ್ಲಿ ಸಮಸ್ಯೆ ಹೇಳಿದ ಇನ್ನುಳಿದ ವಿಚಾರದ ಬಗ್ಗೆ ಗುರುವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಚರ್ಚೆ ಮಾಡಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇನ್ನೂ ಜಿಲ್ಲೆಯಲ್ಲಿ ಗಾಂಜಾ ವ್ಯವಹಾರ ನಡೆಯುತ್ತಿದ್ದ ಬಗ್ಗೆ ಮಾತನಾಡಿ ಈಗಾಗಲೇ ಅಪರಾಧಿಗಳನ್ನು ಹಿಡಿಯುತ್ತಿದ್ದೇವೆ. ಮತ್ತು ತನಿಖೆಯ ಹಂತದಲ್ಲಿದೆ ಅದಕ್ಕೂ ಕೂಡ ಕೊನೆ ಹಾಡುತ್ತೇವೆ ಎಂದರು. ಪ್ರತಿಯೊಂದಕ್ಕು ನಿಮ್ಮ ಸಹಕಾರ ಮುಖ್ಯ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ನಿಮ್ಮ ಸಹೋದರಿಯಾಗಿ ನಿಮ್ಮ ಮಗಳಾಗಿ ಸಹಕಾರ ನೀಡುತ್ತೇನೆ ಎಂದರು.

ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳಲ್ಲಿರುವುದಕ್ಕಿಂತ ಹೆಚ್ಚಿನ ಶಕ್ತಿ ಸಾಮರ್ಥ್ಯ ಇರುವುದು ಸಾರ್ವಜನಿಕರ ಬಳಿ. ಆ ಶಕ್ತಿಯನ್ನು ಸಮಾಜದಲ್ಲಿರುವ ನಿಜವಾದ ಸಮಸ್ಯೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಉಪಯೋಗಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಸಾರ್ವಜನಿಕರ ಮಾಹಿತಿಗಳು ಇಲಾಖೆಯ ದಾರಿತಪ್ಪಿಸುವ ಅಥವಾ ದುರುದ್ದೇಶಪೂರಿತವಾಗಿರಬಾರದು. ಮನಸ್ಸಿನಲ್ಲಿ ಅಳುಕಿಲ್ಲದೆ ಮಾಡುವ ಕೆಲಸಗಳು ತಲುಪಬೇಕಾದ ಗುರಿಯನ್ನು ಮುಟ್ಟತ್ತದೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಭಟ್ಕಳ ಉಪವಿಭಾಧಿಕಾರಿ ಮಮತಾದೇವಿ ಜಿ. ಎಸ್. ಮಾತನಾಡಿ ಪೊಲೀಸ್ ಮತ್ತು ಇಲಾಖೆ ಸೇರಿ ಉತ್ತಮ ಕೆಲಸ ಮಾಡಿದ್ದೇವೆ. ಪೊಲೀಸ್ ಇಲಾಖೆ ನಮಗೆ ಉತ್ತಮ ಸಹಕಾರ ನೀಡಿದೆ. ಇಂದು ನಡೆಯುತ್ತಿರುವ ಜನ ಸಂಪರ್ಕ ಸಭೆ ಜನರ ಮತ್ತು ಅಧಿಕಾರಿಗಳ ಮದ್ಯೆ ಬಾಂಧವ್ಯ ವೃದ್ಧಿಯಾಗುತ್ತದೆ. ಸಮಸ್ಯೆಯನ್ನು ಅರಿತು ಕೊಳ್ಳಲು ಸಾಧ್ಯ ವಾಗುತ್ತದೆ ಎಂದರು.

ತಹಸೀಲ್ದಾರ್ ನಾಗರಾಜ ನಾಯ್ಕಡ ಮಾತನಾಡಿ ಕಂದಾಯ ಇಲಾಖೆಗೆ ಸಂಬAಧ ಪಟ್ಟ ಎಲ್ಲಾ ಕೆಲಸವನ್ನು ತ್ವರಿತವಾಗಿ ಮಾಡಿಕೊಳ್ಳುತ್ತಿದ್ದೇವೆ. ತಾಲೂಕಿನಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ವೃತ್ತ ನೀರಿಕ್ಷಕ ಶ್ರೀಧರ್ ಎಸ್. ಆರ್. ಮಾತನಾಡಿ ಪೊಲೀಸ್ ಬಿಟ್ಟು ಸಮಾಜ ಇಲ್ಲ ಸಮಾಜ ಬಿಟ್ಟು ಪೊಲೀಸ್ ಇಲ್ಲ ಎರಡು ಒಂದು ಕೊಂಡಿ ಇದ್ದಹಾಗೆ ಎಂದ ಅವರು ಸಾರ್ವಜನಿಕರ ದೂರುಗಳಿಗೆ ಉತ್ತರ ನೀಡಿ ಮಾತನಾಡಿ ಅಕ್ರಮ ಮರಳು ತಡೆಗೆ ಸ್ಕಾಡ ವ್ಯವಸ್ಥೆ ಮಾಡಿದ್ದೇವೆ. ಪೊಲೀಸ್ ಜೀಪ್ ಬಳಸದೆ ಕಾರ್ಯಾಚರಣೆ ಮಾಡುತ್ತಿದ್ದೇವೆ. ಎ. ಸಿ ಯವರ ಸಲಹೆಯಂತೆ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಿದ್ದೇವೆ. ಅಕ್ರಮ ಸರಾಯಿ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಪಾರ್ಕಿಂಗ್ ಸಮಸ್ಯೆಯನ್ನು ಕೂಡ ಬಗೆಹರಿಸುತ್ತೇವೆ ಎಂದರು.

ವೇದಿಕೆಯ ಮೇಲೆ ಭಟ್ಕಳ ಪೊಲೀಸ್ ವೃತ್ತ ನೀರಿಕ್ಷಕ ಮಹಾಬಲೇಶ್ವರ ನಾಯ್ಕ ಮತ್ತು ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಉಪಸ್ಥಿತರಿದ್ದರು. ಪಿ ಎಸ್ ಐ ಶಶಿಕುಮಾರ ವಂದಿಸಿದರು. ಸುದೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ತಾಲೂಕಿನ ಹಲವಾರು ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಪಟ್ಟಣ ಪಂಚಾಯತ ಅಧ್ಯಕ್ಷರು, ಸದಸ್ಯರು, ಗ್ರಾ. ಪಂ. ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಹಾಜರಿದ್ದು ತಾಲೂಕಿನ ಸಮಸ್ಯೆಯನ್ನು ಎಸ್. ಪಿ. ಯವರ ಗಮನ ಸೆಳೆದರು.

ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಎದುರು ತಾಲೂಕಿನ ಸಮಸ್ಯೆ ಹೇಳುವ ಬದಲು ಎಸ್. ಪಿ ಹಾಗೂ ಸಿಪಿಐ ಶ್ರೀಧರ ರವರನ್ನು ಹೊಗಳಿದ್ದೆ ಹೆಚ್ಚು. ಎಸ್. ಪಿ. ಯವರು ಪ್ರಶಂಶೆ ಬೇಡ ಸಮಸ್ಯೆಗಳನ್ನು ಹೇಳಿ ಎಂದರು ಕೆಲವರು ಉದ್ದುದ್ದ ಭಾಷಣ ಮಾಡಿ ಅವರನ್ನು ಹೊಗಳುವ ಕೆಲಸವನ್ನೆ ಮಾಡಿದರು. ಪೊಲೀಸ್ ಇಲಾಖೆಗೆ ಸಂಬAಧ ಪಟ್ಟ ವಿಷಯಕ್ಕಿಂತ ಬೇರೆ ಇಲಾಖೆಯ ಬಗ್ಗೆ ಹೆಚ್ಚು ಪ್ರಶ್ನೆ ಮಾಡಿದ್ದು ಕಂಡು ಬಂತು.

ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುವ ಅಕ್ರಮ ಮರಳು ಸಾಗಾಟದ ಬಗ್ಗೆ ಹೊನ್ನಾವರ ಜನಸ್ಪಂದನ ಸಭೆಯಲ್ಲಿಯೂ ಜಿ.ಪಿ.ಎಸ್ ಅಳವಡಿಸಿಕೊಂಡ ಲಾರಿಗಳ ಮಾಲಕರ ಸಂಘದವರು ಗಮನ ಸೆಳೆದರು. ಹಲವು ತಿಂಗಳಿAದ ನಮ್ಮ ಗಾಡಿಗಳು ನಿಂತಿದೆ ಆದರೆ ನಮ್ಮ ಕಣ್ಣೆದುರಲ್ಲಿಯೇ ನಿತ್ಯವೂ ಅಕ್ರಮ ಮರಳು ಸಾಗಾಟದ ವಾಹನಗಳು ಓಡುತ್ತವೆ ನಮಗೂ ಕುಟುಂಬವಿದೆ ಹೆಂಡತಿ ಮಕ್ಕಳು ಉಪವಾಸ ಬೀಳಬಾರದು ಎಂದರೆ ಪರವಾನಿಗೆ ಇರುವ ಮರಳುಗಾರಿಕೆ ಪ್ರಾರಂಭಿಸಿ ಎಂದು ಅವಲತ್ತುಕೊಂಡರು.

ಬಹಳಷ್ಟು ಮಂದಿ ಹೊನ್ನಾವರ ಪಟ್ಟಣದ ಟ್ರಾಫಿಕ್ ಸಮಸ್ಯೆ ಬಗ್ಗೆ, ಕಲ್ಲು ಮಣ್ಣ ಮರಳನ್ನು ಸಾಗಿಸುವ ವಾಹನಗಳು ಟಾರ್‌ಪಾಲ್ ಮುಚ್ಚದೇ ಚಲಿಸುವುದು, ಪತ್ತೆಯಾಗುತ್ತಿರುವ ಗಾಂಜಾ ಪ್ರಕರಣಗಳನ್ನು ಬುಡಮಟ್ಟದಲ್ಲಿ ಕಿತ್ತು ಬಿಸಾಡುವುದು, ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ನಿಯಂತ್ರಿಸಿ ಯುವಜನಾಂಗ ದಾರಿತಪ್ಪದಂತೆ ನೋಡಿಕೊಳ್ಳಬೇಕು, ಬೀಟ್ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಆನೈನ್ ನಲ್ಲಿ ಅಪೇಟ್ ಮಾಡಬೇಕು, ರಸ್ತೆ ಅಪಘಾತಗಳು ಹೆಚ್ಚಲು ಐ.ಆರ್.ಬಿಯ ನಿಧಾನಗತಿಯ ಮತ್ತು ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗುತ್ತಿದೆ ಈ ಬಗ್ಗೆಯೂ ಗಮನಹರಿಸುವಂತೆ ಮನವಿ ಮಾಡಿದರು.

error: