May 3, 2024

Bhavana Tv

Its Your Channel

‘ಪ್ರಕೃತಿ ಕೇಂದ್ರಿತ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರಲಿ’ -ಜಿ.ಕೆ.ಸುದರ್ಶನ

ಹೊನ್ನಾವರ:’ನಮ್ಮೆಲ್ಲ ಯೋಜನೆಗಳು ಪ್ರಕೃತಿ ಕೇಂದ್ರಿತವಾಗಿ ಜಾರಿಗೆ ಬಂದರೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಹೊನ್ನಾವರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಸುದರ್ಶನ ಅಭಿಪ್ರಾಯಪಟ್ಟರು.

ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಅಶ್ರಯದಲ್ಲಿ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿ ಭಾನುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ಮಹತ್ವದ ಸ್ಥಾನವಿದೆ.ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿಹಾಗೂ ಭೂಮಂಡಲದ ಇಂಗಾಲದ ಅಂಶವನ್ನು ಹೀರಿಕೊಳ್ಳುವಲ್ಲಿ ಗಿಡ-ಮರಗಳು ಮಹತ್ವದ ಪಾತ್ರ ವಹಿಸುತ್ತವೆ.ಕಾಡಿನ ನಾಶ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಯೊAದಿಗೆ ಸಹಕರಿಸಿದರೆ ಅರಣ್ಯ ರಕ್ಷಣೆ ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.
‘ಕಾಮಕೋಡ ದೇವರಕಾಡಿನ ಸುತ್ತ ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಿರುವ ತಂತಿ ಬೇಲಿಯನ್ನು ನವೀಕರಿಸಲಾಗುವುದು.ದೇವಸ್ಥಾನಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಮೆಶ್ ಬೇಲಿ ಅಳವಡಿಸಲಾಗುವುದು.ದೇವರಕಾಡಿನಲ್ಲಿರುವ ಕೆರೆಯ ಜೀರ್ಣೋದ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಶಾಮಲಾ ನಾಯ್ಕ ಮಾತನಾಡಿ,ದೇವಸ್ಥಾನದ ಆವರಣದಲ್ಲಿ ಅರಣ್ಯ ಇಲಾಖೆ ಹೂದೋಟವನ್ನು ನಿರ್ಮಿಸಿ ದೇವಸ್ಥಾನದ ಅಂದ ಹೆಚ್ಚಿಸಬೇಕಿದೆ’ ಎಂದು ಹೇಳಿದರು.
ಪ್ರೊ.ನಾಗರಾಜ ಹೆಗಡೆ ಅಪಗಾಲ ಮಾತನಾಡಿ,’ಯೋಜನೆಗಳಿಗಾಗಿ ಗುಡ್ಡ ಕತ್ತರಿಸಲಾಗುತ್ತಿದ್ದು ಮಣ್ಣಿನ ಸವಕಳಿ ನಿಯಂತ್ರಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ನಾಯ್ಕ,ದೇವಸ್ಥಾನ ಸಮಿತಿ ಸದಸ್ಯ ನೀಲಕಂಠ ನಾಯ್ಕ,ಫಾರೆಸ್ಟರ್ ರಮಾಕಾಂತ ನಾಯ್ಕ ಉಪಸ್ಥಿತರಿದ್ದರು.
ಕಾಮಕೋಡ ಪರಿಸರ ಕೂಟದ ಸಂಚಾಲಕ ಡಾ.ಎಂ.ಜಿ.ಹೆಗಡೆ ವಂದಿಸಿದರು. ದೇವರಕಾಡಿನಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.

error: