May 14, 2024

Bhavana Tv

Its Your Channel

ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಹಾಗೂ ಎಚ್ಚರಿಕೆಯಿಂದ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ – ಸಚಿವ ಶಿವರಾಮ ಹೆಬ್ಬಾರ .

ಕುಮಟಾ: ನಮ್ಮ ಪಕ್ಷ, ನಮ್ಮ ಅಭ್ಯರ್ಥಿ ಬಗ್ಗೆ ಯಾವುದೇ ಟೀಕೆ ಮಾಡಲು ಸಾಧ್ಯವಾಗದಿರುವುದರಿಂದ ವ್ಯಕ್ತಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಹಾಗೂ ಎಚ್ಚರಿಕೆಯಿಂದ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.


ಅವರು ಮಂಗಳವಾರ ಕುಮಟಾ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗ್ರಾಮ ಪಂಚಾಯತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಕಾರಣಕ್ಕೆ ನಮ್ಮ ಗೆಲುವಿಗೆ ಯಾವುದೇ ತೊಂದರೆಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಲ್ಲಾಪುರದಲ್ಲಿ ನಡೆದ ಜನಸ್ವರಾಜ ಯಾತ್ರೆ ಸಂದರ್ಭದಲ್ಲಿ ೧೬೮೫ ನಮ್ಮ ಪಕ್ಷದ ಬೆಂಬಲಿತ ಗ್ರಾ.ಪಂ ಸದಸ್ಯರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎದುರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹಳಿಯಾಳ, ದಾಂಡೇಲಿ ಮತ್ತು ಭಟ್ಕಳ ಹೊರತುಪಡಿಸಿ ಉಳಿದ ಎಲ್ಲ ಪೌರಾಡಳಿತದಲ್ಲಿ ನಮ್ಮ ಪಕ್ಷ ಆಡಳಿತದಲ್ಲಿದ್ದು, ಕುಮಟಾ ಪುರಸಭೆಯಲ್ಲಿ ೧೭ ಸದಸ್ಯರು ಪಕ್ಷದ ಚಿಹ್ನೆಯ ಮೇಲೆ ಜಯ ಸಾಧಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಗಣಪತಿ ಉಳ್ವೇಕರ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು. ೫ ಬಾರಿ ಕಾರವಾರ ನಗರಸಭೆ ಸದಸ್ಯರಾಗಿ, ೨ ಬಾರಿ ಅಧ್ಯಕ್ಷರಾಗಿ, ೧ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಅಪಾರ ಅನುಭವ ಹೊಂದಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಜಿಲ್ಲೆಯ ಐವರು ಶಾಸಕರು, ಸಂಸದರು, ಮುಖಂಡರು ಹಾಗೂ ಹಿರಿ-ಕಿರಿ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತೇವೆ. ಖಂಡಿತವಾಗಿಯೂ ಉಳ್ವೇಕರ ಗೆಲುವು ಸಾಧಿಸುತ್ತಾರೆ ಎಂದರು.
ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸೋಲು ಉಂಟಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವರಾಮ ಹೆಬ್ಬಾರ, ಹಿಂದೆ ನಮ್ಮನ್ನಾಳಿದ ಸರ್ಕಾರಗಳು ತಮಗೆ ಬೇಕಾದ ರೀತಿಯಲ್ಲಿ ಅವೈಜ್ಞಾನಿಕವಾಗಿ ಕ್ಷೇತ್ರ ವಿಂಗಡಣೆ ಮಾಡಿತ್ತು. ಇದರಿಂದ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಇದನ್ನು ಪರಿಶೀಲಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ಮರು ವಿಂಗಡಣೆಯಾದ ನಂತರ ಚುನಾವಣೆ ಘೋಷಣೆಯಾಗಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಇದರ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ, ಹಿರಿಯ ಮುಖಂಡ ವಿನೋದ ಪ್ರಭು, ಮಂಡಲ ಪ್ರಭಾರಿ ಶಿವಾನಿ ಶಾಂತಾರಾಮ, ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ರಾಜೇಶ ಪೈ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.

error: