May 14, 2024

Bhavana Tv

Its Your Channel

ಕುಮಟಾ ಪುರಸಭೆ ವಾರ್ಡಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ , ಪುರಸಭೆ ಸದಸ್ಯೆ ವಿನಯಾ ವಿನು ಜಾರ್ಜ್ ಗಂಭೀರ ಆರೋಪ

ಕುಮಟಾ ಪುರಸಭೆ ವಾರ್ಡಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರಲಾಗುತ್ತಿದೆ ಎಂದು ಪುರಸಭೆ ಸದಸ್ಯೆ ವಿನಯಾ ವಿನು ಜಾರ್ಜ್ ಗಂಭೀರವಾಗಿ ಆರೋಪಿಸಿದರು.

ಕುಮಟಾ ಪುರಸಭೆಯ ಸಂಭಾಗಣದಲ್ಲಿ ಅಧ್ಯಕ್ಷೆ ಮೋಹಿನಿ ಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡ್ಗಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರಲಾಗುತ್ತಿರುವ ಬಗ್ಗೆ ಪುರಸಭೆ ಸದಸ್ಯೆ ವಿನಯಾ ವಿನು ಜಾರ್ಜ್ ವಿಷಯ ಪ್ರಸ್ತಾಪಿಸಿದರು. ಪುರಸಭೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿರುವ ಬಗ್ಗೆ ಈ ಹಿಂದೆಯೂ ನಾನು ಅಧ್ಯಕ್ಷರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೆ ಈ ಬಗ್ಗೆ ನಿರ್ಲಕ್ಷöವಹಿಸಲಾಗಿದೆ ಎಂದು ತೀವ್ರ ಆಕ್ರೋಶ ಹೊರ ಹಾಕಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಉಪಾಧ್ಯಕ್ಷ ರಾಜೇಶ ಪೈ ಅವರು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಎಲ್ಲ ವಾರ್ಡಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡುವ ಭರವಸೆ ನೀಡಿದರು.
ಪುರಸಭೆ ಸದಸ್ಯೆ ಛಾಯಾ ವೆಂಗುರ್ಲೆಕರ್ ಮಾತನಾಡಿ, ವನ್ನಳ್ಳಿಗೆ ಹೋಗುವ ಮುಖ್ಯ ರಸ್ತೆಯ ಚರಂಡಿ ಸಮರ್ಪವಾಗಿಲ್ಲ. ಹಾಗಾಗಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುವುದರಿಂದ ದುರ್ವಾಸನೆಗೆ ಕಾರಣವಾಗಿದೆ. ಈ ಬಗ್ಗೆ ನನ್ನ ವಾರ್ಡನ ಜನರು ಸಾಕಷ್ಟು ಬಾರಿ ದೂರು ಸಲ್ಲಿಸಿದ್ದಾರೆ. ಹಾಗಾಗಿ ಚರಂಡಿ ನಿರ್ಮಿಸಿ, ಕೊಳಚೆ ನೀರು ಸರಾಗವಾಗಿ ಹರಿದುಹೋಗುವಂತೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಸುರೇಶ ಎಂ ಕೆ ತಿಳಿಸಿದರು.
ಸಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಅಗತ್ಯವಾದ ಮಶೀನ್ ಖರೀದಿಸಲು ೨೨ ಲಕ್ಷ ರೂ.ಗಳ ಅಗತ್ಯವಿದೆ ಎಂದು ಮುಖ್ಯಾಧಿಕಾರಿ ಸುರೇಶ ಎಂ ಕೆ ಅವರು ಸಭೆಗೆ ಮಾಹಿತಿ ನೀಡಿದರು. ಮಶೀನಿನ ಸಾಮರ್ಥ್ಯ ಮತ್ತು ಹಣಕಾಸಿನ ಸ್ಪಷ್ಟ ಚಿತ್ರಣ ನೀಡುವಂತೆ ಸದಸ್ಯ ಸಂತೋಷ ನಾಯ್ಕ ಸಲಹೆ ನೀಡಿದರು. ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ನಿರ್ಮಾಣ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಲು ೩೦ ಲಕ್ಷ ಅನುದಾನ ಅಗತ್ಯವಿದೆ ಎಂದಾಗ ಈ ಗೃಹ ನಿರ್ಮಾಣಕ್ಕೆ ವಿಶೇಷ ಅನುದಾನ ತರಬೇಕೆ ಹೊರತು ಪುರಸಭೆ ಅನುದಾನ ಬಳಸಿದರೆ, ಇತರೆ ವಾರ್ಡಗಳ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಸದಸ್ಯ ಸಂತೋಷ ನಾಯ್ಕ ಸಲಹೆ ನೀಡಿದರು. ಇನ್ನು ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಬಂದ ೧ ಲಕ್ಷ ಹಣದಲ್ಲಿ ಪೌರ ಕಾರ್ಮಿಕರಿಗೆ ಸ್ಮರಣಿಕೆ ನೀಡುವ ಕುರಿತು ನಿರ್ಣಯಿಸಲಾಯಿತು. ಅಲ್ಲದೇ ಪುರಸಭೆ ಅನುದಾನದಲ್ಲಿ ಸದಸ್ಯರಿಗೆ ಮತ್ತು ಸಿಬ್ಬಂದಿಗೆ ಸ್ಮರಣಿಕೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ೨ ತಿಂಗಳ ಬಾಡಿಗೆಯಿಂದ ವಿನಾಯಿತು ನೀಡುವಂತೆ ಪುರಸಭೆ ಕಟ್ಟಡಗಳ ಅಂಗಡಿಕಾರರು ವಿನಂತಿ ಮಾಡಿದ ಬಗ್ಗೆ ಸದಸ್ಯ ಮಹೇಶ ನಾಯ್ಕ ಸಭೆಯ ಗಮನ ಸೆಳೆದರು. ಆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.
ಸಭೆಯಲ್ಲಿ ಪುರಸಭೆಯ ಸ್ಥಾಯಿ ಸಮಿತಿ ಚೇರಮೆನ್ ಅನೀಲ ಹರ್ಮಲ್ಕರ್, ಸದಸ್ಯರು, ಅಧಿಕಾರಿಗಳಿದ್ದರು.

error: