May 15, 2024

Bhavana Tv

Its Your Channel

“ಜೈ ಜೈ ಹನುಮಂತ ಚಂದಾವರ ಹನುಮಂತ..” ಭಕ್ತಿಗೀತೆಯ ಡಿಜೆ ಆಡಿಯೋ ಬಿಡುಗಡೆ

ಕುಮಟಾ ತಾಲೂಕಿನ ಕೂಜಳ್ಳಿಯ ಶ್ರೀ ಪ್ರಸಾದ ಗಣಪತಿ ದೇವಾಲಯದಲ್ಲಿ “ಜೈ ಜೈ ಹನುಮಂತ ಚಂದಾವರ ಹನುಮಂತ..” ಭಕ್ತಿಗೀತೆಯ ಡಿಜೆ ಆಡಿಯೋ ಬಿಡುಗಡೆ ಮಾಡಲಾಯಿತು.

ಚಂದಾವರದ ಸುಪ್ರಸಿದ್ದ ಹನುಮಂತ ದೇವರ ಕುರಿತಾಗಿ, ಕೂಜಳ್ಳಿಯ ಉದಯ ನಾಯ್ಕ್ ಈ ಭಕ್ತಿಗೀತೆ ರಚಿಸಿದ್ದಾರೆ. ಖ್ಯಾತ ಕೀಬೋರ್ಡ್ ವಾದಕ ಕುಮಟಾದ ವಿಜಯ್ ಮಹಾಲೆ ರಾಗ ಸಂಯೋಜನೆ ಮಾಡಿದ್ದು, ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ್ ಕೂಜಳ್ಳಿ, ಹಾಗೂ ಪ್ರತಿಭಾನ್ವಿತ ಗಾಯಕ ಶಂಕರ್ ನಾಯ್ಕ್ ದಾರೇಶ್ವರ ಸುಶ್ರಾವ್ಯವಾಗಿ ಹಾಡಿದ್ದಾರೆ. ತಬಲಾದಲ್ಲಿ ಹರೀಶ್ ಶೇಟ್ ಗುಡಬಳ್ಳಿ ಮತ್ತು ತಾಳದಲ್ಲಿ ವೀರೇಂದ್ರ ಗುನಗ ಸಾಥ್ ನೀಡಿದ್ದಾರೆ.

ಹೆಗಡೆ ಗ್ರಾಮದಲ್ಲಿ ದೈವಿ ಶಕ್ತಿಯ ಸಂಚಲನವಾಗಿ ಭಕ್ತಿಯ ಸುಧೆ ಎಲ್ಲರಲ್ಲಿ ಜಾಗೃತವಾಗುವಂತೆ ಮಾಡಿದ, ಸೀಮೆ ಹನುಮಂತ ಎಂದೇ ಪ್ರಸಿದ್ದಿ ಪಡೆದ ಹನುಮಂತ ದೇವರ ಸವಾರಿ, ಹೆಗಡೆಯಿಂದ ಸ್ವ-ಸ್ಥಾನ ಚಂದಾವರಕ್ಕೆ ತೆರಳುವ ಶುಭ ಸಂದರ್ಭದಲ್ಲಿ, ಮೆರವಣಿಗೆಯುದ್ಧಕ್ಕೂ ಈ ಹಾಡು ಸದ್ದು ಮಾಡಿದ್ದು, ಜನ ಮೆಚ್ಚುಗೆಗೆ ಸಾಕ್ಷಿಯಾಯಿತು.

ಚಂದಾವರ ಹನುಮಂತ ದೇವನು ಸವಾರಿ ಪಲ್ಲಕ್ಕಿಯಲ್ಲಿ ಕಳೆದ 19 ದಿನಗಳಿಂದ ಹೆಗಡೆ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ವಿರಾಜಮಾನವಾಗಿ ಭಕ್ತರಿಗೆ ದರ್ಶನ ನೀಡಿದ್ದನು. ಊರಿನ ವಿವಿಧ ಭಾಗದ ಸದ್ಭಕ್ತರ ಮನೆಗಳಿಗೆ ತೆರಳಿ ಆಶೀರ್ವದಿಸಿ ಅವರ ಸಂಕಷ್ಟವನ್ನು ಪರಿಹರಿಸಿದ್ದನು.

ಶನಿವಾರ ಹತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳ ಶ್ರೀರಾಮ ಜೈ ರಾಮ ಜೈಕಾರದ ಘೋಷಣೆಯೊಂದಿಗೆ, “ಜೈ ಜೈ ಹನುಮಂತ” ಭಕ್ತಿಗೀತೆಗೆ ಕುಣಿದು ಸಂಭ್ರಮಿಸಿ ಭಕ್ತಿಪೂರ್ವಕವಾಗಿ ಹನುಮಂತನನ್ನು ಸ್ವ-ಸ್ಥಾನಕೆ ಬೀಳ್ಕೊಡಲಾಯಿತು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: